ದಸರಾ ಮಹೋತ್ಸವದ ಪ್ರತಿ ಕಾರ್ಯಕ್ರಮ ಸ್ಥಳದಲ್ಲೂನಾನಾ ಖಾದ್ಯ ಮಳಿಗೆ ತೆರೆಯಲು ಚಿಂತನೆ
ಮೈಸೂರು

ದಸರಾ ಮಹೋತ್ಸವದ ಪ್ರತಿ ಕಾರ್ಯಕ್ರಮ ಸ್ಥಳದಲ್ಲೂನಾನಾ ಖಾದ್ಯ ಮಳಿಗೆ ತೆರೆಯಲು ಚಿಂತನೆ

August 24, 2022

ಮೈಸೂರು, ಆ.23-ಮೈಸೂರು ದಸರಾ ಮಹೋ ತ್ಸವದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಳಗಳಲ್ಲೂ ಸ್ವಾದಿಷ್ಟ ಖಾದ್ಯಗಳ ಮಳಿಗೆ ತೆರೆಯುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಈ ಬಾರಿಯೂ ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಸಮೀಪದ ಮುಡಾ ಮೈದಾನದಲ್ಲಿ `ದಸರಾ ಆಹಾರ ಮೇಳ’ ಆಯೋಜಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ರೈತ ದಸರಾ, ಕ್ರೀಡಾ ದಸರಾ, ಪುಸ್ತಕ ಮೇಳ, ಕೃಷಿ ಮೇಳ ಹೀಗೆ ಇತರೆ ನಾನಾ ಕಾರ್ಯ ಕ್ರಮಗಳ ಸ್ಥಳದಲ್ಲೂ ದಸರಾ ಆಹಾರ ಮೇಳ ಉಪಸಮಿತಿ ಮೂಲಕವೇ ಕೆಲ ಆಹಾರ ಮಳಿಗೆ ತೆರೆಯುವ ಸಂಬಂಧ ಚರ್ಚೆ ನಡೆಸಲಾಗಿದೆ. ನವರಾತ್ರಿಯಲ್ಲಿ ಸಾಂಸ್ಕøತಿಕ ನಗರಿಯನ್ನು ಆವರಿಸುವ ಬಣ್ಣ ಬಣ್ಣದ ಅತ್ಯಾಕರ್ಷಕ ವಿದ್ಯುತ್ ದೀಪಾಲಂಕಾರ ಸವಿಯುವುದೇ ಒಂದು ಸೊಬಗು. ಇದರ ನಡುವೆ ಅರಮನೆ ಆವರಣ ಸೇರಿದಂತೆ ವಿವಿಧ ವೇದಿಕೆಗಳಲ್ಲಿನ ಸಾಂಸ್ಕøತಿಕ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ಯುವ ದಸರಾ, ಕೃಷಿ ಮೇಳ ಇನ್ನಿತರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಭ್ರಮಿಸುವ ಜನ ಕೊನೆಯಲ್ಲಿ ಆಹಾರ ಮೇಳದತ್ತ ಹೆಜ್ಜೆ ಹಾಕುತ್ತಾರೆ. ಆದರೆ ವಾಹನ ದಟ್ಟಣೆ, ಜನದಟ್ಟಣೆ ಇನ್ನಿತರ ಕಾರಣಗಳಿಂದ ಹಲವರಿಗೆ ಆಹಾರ ಮೇಳಕ್ಕೆ ತೆರಳಲು ಸಾಧ್ಯವಾಗುವುದೇ ಇಲ್ಲ. ಕೆಲ ಸಂದರ್ಭಗಳಲ್ಲಿ ಹೊರಗಡೆಯೂ ಆಹಾರ ಸಿಗದೆ ಹಸಿದುಕೊಂಡೇ ಮನೆಗೆ ವಾಪಸ್ಸಾಗಬೇಕಾಗುತ್ತದೆ.

ಇನ್ನು ಸ್ಥಳೀಯರು ಒಂದೇ ದಿನ ಎಲ್ಲಾ ಸ್ಥಳಗಳಿಗೂ ಭೇಟಿ ನೀಡುವುದು ಕಡಿಮೆ. ಸಮಯಾವಕಾಶ ಹೊಂದಿಸಿಕೊಂಡು ಒಂದೊಂದು ದಿನ ಒಂದೊಂದು ಕಾರ್ಯಕ್ರಮ ವೀಕ್ಷಿಸುತ್ತಾರೆ. ಅಂತಹವರು ಪ್ರತಿದಿನ ಆಹಾರ ಮೇಳಕ್ಕೆ ಭೇಟಿ ನೀಡುವುದು ಕಷ್ಟ. ಏನಾದರೂ ತಿನ್ನಬೇಕು ಎನ್ನಿಸಿದರೂ ದೂರ ಹೋಗಬೇಕು ಎನ್ನುವ ಕಾರಣಕ್ಕೆ ಸುಮ್ಮನಾಗುವುದಿದೆ. ಇದರಿಂದ ಹಿರಿಯರು ಹಾಗೂ ಮಕ್ಕಳು ಹಸಿವಿನಿಂದ ಬಳಲಬಹುದು. ಹಾಗಾಗಿ ಎಲ್ಲಾ ಕಾರ್ಯಕ್ರಮಗಳ ಸ್ಥಳದಲ್ಲೂ ಒಂದೆರಡು ಆಹಾರ ಮಳಿಗೆಗಳಿದ್ದರೆ ಜನರಿಗೆ ಅನುಕೂಲವಾಗುತ್ತದೆ. ಜೊತೆಗೆ ದಸರಾ ಸಂದರ್ಭದಲ್ಲಿ ಹೆಚ್ಚು ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟು ನೆರವಾದಂತಾಗುತ್ತದೆ.

`ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಯುವ ದಸರಾ, ಕೃಷಿ ಮೇಳ ಇನ್ನಿತರ ದಸರಾ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಳದಲ್ಲೂ ಆಹಾರ ಮಳಿಗೆ ತೆರೆಯುವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ಸಂಬಂಧ ವಿವಿಧ ಉಪ ಸಮಿತಿಗಳಿಗೆ ಪತ್ರ ಬರೆಯಲಾಗುತ್ತಿದೆ. ಅಲ್ಲಿನ ಸ್ಥಳಾವಕಾಶ ಹಾಗೂ ಬೇಡಿಕೆ ಅನುಸಾರ ಯಾವ ರೀತಿಯ ತಿನಿಸುಗಳು ಬೇಕು, ಎಷ್ಟು ಮಳಿಗೆ ಅವಶ್ಯಕತೆ ಇದೆ ಎಂದು ತಿಳಿಸಿದರೆ ಆಹಾರ ಮೇಳ ಉಪ ಸಮಿತಿ ವತಿಯಿಂದಲೇ ವ್ಯವಸ್ಥೆ ಮಾಡಲಾಗುತ್ತದೆ. ನಮ್ಮಲ್ಲಿ ನೋಂದಾಯಿಸಿಕೊಳ್ಳುವ ವ್ಯಾಪಾರಿಗಳಿಗೆ ಅಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಪ್ರಕ್ರಿಯೆ ಆರಂಭ: ಈ ಬಾರಿ ಕಾಡಾ ಕಚೇರಿ ಆವರಣದಲ್ಲಿ ಆಹಾರ ಮೇಳ ಆಯೋಜಿಸ ಬೇಕೆಂದಿತ್ತು. ಆದರೆ ಮಳೆ ಬಂದರೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಲಲಿತಮಹಲ್ ಹೋಟೆಲ್ ಸಮೀಪ ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಮೈದಾನದಲ್ಲೇ ಏರ್ಪಡಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ದಸರಾ ವಿಶೇಷಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಇದರ ನಡುವೆ ಕರಾವಳಿ, ಉತ್ತರ ಕರ್ನಾಟಕ, ಕೊಡಗು ಸೇರಿದಂತೆ ಎಲ್ಲಾ ಜಿಲ್ಲೆಗಳ ಅಧಿಕಾರಿಗಳಿಗೆ ಪತ್ರ ಬರೆದು ಅಲ್ಲಿನ ಪ್ರಾಂತೀಯ ವಿಶೇಷ ಖಾದ್ಯದ ಮಾರಾಟಕ್ಕೆ ಆಹ್ವಾನಿಸಲಾಗಿದೆ. ಅಲ್ಲದೆ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ವಿಶೇಷ ತಿನಿಸುಗಳ ಮಾರಾಟ ಮಾಡಲು ವ್ಯಾಪಾರಿಗಳು ಉತ್ಸುಕರಾಗಿದ್ದಾರೆ. ಎಂದಿನಂತೆ ಬುಡಕಟ್ಟು ಸಮುದಾಯದವರ ಬಂಬೂ ಬಿರಿಯಾನಿ ಇನ್ನಿತರ ಖಾದ್ಯಗಳು ಲಭ್ಯವಾಗಲಿವೆ ಎಂದರು.

ಮನರಂಜನೆ-ಸ್ಪರ್ಧೆ: ದಸರಾ ವೈಭವದ ನಡುವೆ ಆಹಾರ ಮೇಳದಲ್ಲಿ ತಮಗಿಷ್ಟವಾದ ಹಾಗೂ ಹೊಸ ತಿನಿಸುಗಳನ್ನು ಆಸ್ವಾಧಿಸುವುದೇ ಸಂಭ್ರಮ ಇಮ್ಮಡಿಗೊಳಿಸುತ್ತದೆ. ಇದರೊಂದಿಗೆ ಎಂದಿನಂತೆ ನಿತ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಅಡುಗೆ ತಯಾರಿ ಹಾಗೂ ತಿನ್ನುವ ಸ್ಪರ್ಧೆಗಳನ್ನೂ ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಗ್ರಾಹಕರು-ವ್ಯಾಪಾರಿಗಳಿಗೆ ತೊಂದರೆಯಾಗದಿರಲಿ: ದಸರಾ ಆಹಾರ ಮೇಳದಲ್ಲಿ ಜನಜಂಗುಳಿ ಸಾಮಾನ್ಯ. ಇತರೆ ಕಾರ್ಯಕ್ರಮಗಳಿಗೆ ಹೋಗಿದ್ದವರೆಲ್ಲಾ ಕಡೆಗೆ ಆಹಾರ ಮೇಳಕ್ಕೆ ಬಂದು ವಿವಿಧ ಖಾದ್ಯಗಳನ್ನು ಸವಿದು ಮನೆಯತ್ತ ಹೆಜ್ಜೆ ಹಾಕುವುದು ಸಹಜ ಸಂಗತಿ. ಆದರೆ ಪ್ರತಿ ವರ್ಷ ಒಂದಿಲ್ಲೊಂದು ಅವ್ಯವಸ್ಥೆಯಿಂದ ತೊಂದರೆ ಉಂಟಾಗು ತ್ತದೆ. ಮಳಿಗೆ, ವಿದ್ಯುತ್, ಕುಡಿಯುವ ನೀರು ಇನ್ನಿತರೆ ಕನಿಷ್ಟ ಸೌಲಭ್ಯಗಳು ಸಮರ್ಪಕವಾ ಗಿರದೆ ವ್ಯಾಪಾರಿಗಳು ತೊಂದರೆ ಅನುಭವಿಸಿದ್ದಿದೆ. ಮಳೆ ಬಂದಾಗ ಗ್ರಾಹಕರೂ ಹೈರಾಣಾಗುತ್ತಾರೆ. ಈ ಬಾರಿಯಾದರೂ ಯಾವ ಸಮಸ್ಯೆಯೂ ಉಂಟಾಗದಂತೆ ವ್ಯವಸ್ಥಿತವಾಗಿ ಆಹಾರ ಮೇಳ ಆಯೋಜಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Translate »