ಮೈಸೂರು ನಗರ ಪಾಲಿಕೆಯ ಮಾಮೂಲಿ ಚಾಳಿ! ದಸರಾ ಸಮೀಪಿಸಿದರೂ ರಸ್ತೆಗಳು ಹೊಂಡಮಯ; ಇನ್ನೂ ಎಚ್ಚೆತ್ತುಕೊಳ್ಳದ ಅಧಿಕಾರಿ ವರ್ಗ
ಮೈಸೂರು

ಮೈಸೂರು ನಗರ ಪಾಲಿಕೆಯ ಮಾಮೂಲಿ ಚಾಳಿ! ದಸರಾ ಸಮೀಪಿಸಿದರೂ ರಸ್ತೆಗಳು ಹೊಂಡಮಯ; ಇನ್ನೂ ಎಚ್ಚೆತ್ತುಕೊಳ್ಳದ ಅಧಿಕಾರಿ ವರ್ಗ

August 25, 2022

ಮೈಸೂರು, ಆ.24(ಎಸ್‍ಬಿಡಿ)- ಮೈಸೂರು ದಸರಾ ಮಹೋತ್ಸವಕ್ಕೆ ಕೇವಲ ಇನ್ನೊಂದು ತಿಂಗಳು ಬಾಕಿ ಇದ್ದು, ರಸ್ತೆ ದುರಸ್ತಿಗೆ ಮಾತ್ರ ಇನ್ನೂ ಕಾಲ ಕೂಡಿಬಂದಿಲ್ಲ. ಈ ಬಾರಿ ಅತ್ಯಂತ ಅದ್ಧೂರಿಯಾಗಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿಗಳಾದಿ ಯಾಗಿ ಎಲ್ಲಾ ನಾಯಕರ ಹೇಳಿಕೆಗಳು ದಸರಾ ವೈಭವದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ. ಆದರೆ ಛಿದ್ರ ಛಿದ್ರವಾಗಿರುವ ನಗರದ ರಸ್ತೆಗಳ ದುರಸ್ತಿಗೆ ಯಾರೂ ಗಮನಹರಿಸಿಲ್ಲ. ಇನ್ನೊಂದು ತಿಂಗಳಲ್ಲಿ ನವರಾತ್ರಿ ಉತ್ಸವ ಆರಂಭ(ಸೆ.26)ವಾಗಲಿದೆ. ಆದರೆ ಕೆಲವೆಡೆ ತೇಪೆ ಕಾರ್ಯ ಬಿಟ್ಟರೆ ರಸ್ತೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈ ಬಾರಿಯೂ ಗಂಡಾ`ಗುಂಡಿ’ಯೊಂದಿಗೆ ದಸರಾ ಆಚರಣೆ ಮಾಡುವುದು ಖಚಿತ ಎಂದು ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ತರಾತುರಿಯಲ್ಲಿ ತೇಪೆ?: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿ ತಿಂಗಳುಗಳೇ ಕಳೆದಿವೆ. ಜನಪ್ರತಿನಿಧಿಗಳು ನಿತ್ಯ ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆಯೇ ಹೊರತು ಕಾಮಗಾರಿ ಆರಂಭವಾಗಿಲ್ಲ. ತಿಂಗಳ ಹಿಂದೆ ಕಾಮಗಾರಿಗೆ ಮಳೆ ಅಡ್ಡಿಯ ನೆಪ ಹೇಳಲಾಗಿತ್ತು. ಈಗ ಮತ್ತೆ ಮಳೆ ಸುರಿಯುತ್ತಿರುವುದರಿಂದ ಹಳೆಯ ಕಾರಣವೇ ಚಲಾವಣೆ ಯಾಗಿ ಇನ್ನೂ 10-15 ದಿನ ಕಾಮಗಾರಿ ಮುಂದೂಡಬಹುದು. ಹೀಗಾದರೆ ಹಳೆಯ ಸಂಪ್ರದಾಯದಂತೆ ಈ ಬಾರಿಯೂ ತೇಪೆಯೇ ಗತಿ. ನವರಾತ್ರಿ ಹೊಸ್ತಿಲಲ್ಲಿ ಎಲ್ಲೆಡೆ ತರಾತುರಿಯಿಂದ ರಸ್ತೆ ಗುಂಡಿ ಮುಚ್ಚಿ ನಮ್ಮನ್ನು ಮಂಕು ಮಾಡಬಹುದು ಎಂದು ಕಿಡಿಕಾರಿದ್ದಾರೆ.

ರಾಜಮಾರ್ಗದಲ್ಲೇ ಅಪಾಯ: ಅರಮನೆ ಅಂಗಳದಿಂದ ಬನ್ನಿಮಂಟಪ ದವರಗೆ ನಡೆಯುವ ವಿಜಯದಶಮಿ ಮೆರವಣಿಗೆ ದಸರೆಯ ಪ್ರಮುಖ ಆಕರ್ಷಣೆ. ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಪ್ರತಿಷ್ಠಾಪಿತ ಚಿನ್ನದ ಸಂಬಾರಿ ಹೊತ್ತು ಸಾಗುವ `ಅಭಿಮನ್ಯು’, ಆತನೊಂದಿಗೆ ಹೆಜ್ಜೆ ಹಾಕುವ ಗಜಪಡೆ, ಕಲಾ ಪ್ರದರ್ಶನ, ಸ್ತಬ್ಧಚಿತ್ರಗಳನ್ನೊಳಗೊಂಡ ಅತ್ಯಾಕರ್ಷಕ ಮೆರವಣಿಗೆ ಕಣ್ತುಂಬಿಕೊಳ್ಳುವುದೇ ಪುಣ್ಯ. ಆದರೆ ಮೆರ ವಣಿಗೆ ಸಾಗುವ ರಾಜಮಾರ್ಗವೇ ಅಧ್ವಾನವಾಗಿದೆ. ಹೈವೇ ವೃತ್ತದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಅಪಾಯಕಾರಿ ಗುಂಡಿಗಳಿಂದ ನಿತ್ಯ ಜನ ನೋವು ಅನುಭವಿ ಸುವಂತಾಗಿದೆ. ಆಗಾಗ್ಗೆ ಈ ವೃತ್ತಕ್ಕೆ ಕೊಳಚೆ ನೀರು ಹರಿದು ಬಂದು ರಾಡಿಯಾಗುತ್ತದೆ. ಹಾಗೆಯೇ ಮಳೆ ಬಂದಾಗಲೆಲ್ಲಾ ತಿಲಕ್‍ನಗರ ಸಿಗ್ನಲ್ ಬಳಿ ಕೆರೆಯಂತಾಗುತ್ತದೆ. ರಘುಲಾಲ್ ಮೆಡಿಕಲ್ಸ್ ಬಳಿಯೂ ಕೊಳಚೆ ನೀರು ರಾಜ ಮಾರ್ಗಕ್ಕೆ ಹರಿದು ಬರುತ್ತದೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸಿದ್ದ ರಸ್ತೆಯೂ ನಗರ ಬಸ್ ನಿಲ್ದಾಣದ ಬಳಿ ಕಿತ್ತುಬಂದಿದೆ.

ಜನರ ಹಿಡಿಶಾಪ: ನಗರದ ಪ್ರಮುಖ ರಸ್ತೆಗಳೇ ದುಃಸ್ಥಿತಿಯಲ್ಲಿರುವಾಗ ಬಡಾವಣೆಗಳ ರಸ್ತೆಗಳು ಹೇಗಿರ ಬೇಕು? ಎಲ್ಲಾ ಬಡಾವಣೆಗಳ ರಸ್ತೆಗಳೂ ಹದಗೆಟ್ಟು ಹೋಗಿವೆ. ದಸರಾ ಮಹೋತ್ಸವದ ಅಂಗವಾಗಿ ವಾರ್ಡ್ ದಸರಾ, ಮನೆ ಮನೆ ದಸರಾ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುವ ಪದ್ಧತಿ ಇದೆ. ಈ ಬಾರಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದಾದರೂ ಹೇಗೆ? ಆ ವೇಳೆ ಜನರ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದು? ಎನ್ನುವ ಚಿಂತೆ ಪಾಲಿಕೆ ಸದಸ್ಯರನ್ನು ಕಾಡುತ್ತಿದೆ. ವಾರ್ಡ್‍ಗಳಲ್ಲಿ ಗುಂಡಿ ಮುಚ್ಚಲು ತಲಾ 10 ಲಕ್ಷ ರೂ. ನೀಡ ಲಾಗಿತ್ತು. ಆನೆ ಹೊಟ್ಟೆಗೆ ಗಂಜಿ ನೀಡಿದಂತೆ ಆ ಹಣ ಯಾವುದಕ್ಕೂ ಸಾಕಾಗಿಲ್ಲ ಎಂದು ಕಾರ್ಪೊರೇಟರ್‍ಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈಗಲಾದರೂ ಮುಂದಾಗಲಿ: ರಸ್ತೆಗಳ ಕಾಮಗಾರಿಗಳ ಗುತ್ತಿಗೆ ನೀಡಲಾಗಿದ್ದು, ಕೇವಲ 15 ದಿನಗಳಲ್ಲಿ ಕಾಮಗಾರಿ ಮುಗಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದರು. ಸದ್ಯ ಮಳೆ ಸುರಿಯುತ್ತಿದ್ದು, ಬಿಡುವು ನೀಡಿದ ತಕ್ಷಣವೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಿದೆ. ಇನ್ನೂ ವಿಳಂಬ ಮಾಡಿದರೆ `ಹಬ್ಬ ಮುಗಿದ ಮೇಲೆ ಒಬ್ಬಟ್ಟು ತಟ್ಟಿದಂತೆ’ ದಸರಾ ಮುಗಿದ ಮೇಲೆ ಡಾಂಬರೀಕರಣ ಮಾಡ ಬೇಕಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Translate »