ಮಡಿಕೇರಿ ಚಲೋ, ಬಿಜೆಪಿ ಸಮಾವೇಶ  ಮುಂದೂಡಲ್ಪಟ್ಟರೂ ಕೊಡಗಲ್ಲಿ ಕಟ್ಟೆಚ್ಚರ
ಕೊಡಗು

ಮಡಿಕೇರಿ ಚಲೋ, ಬಿಜೆಪಿ ಸಮಾವೇಶ ಮುಂದೂಡಲ್ಪಟ್ಟರೂ ಕೊಡಗಲ್ಲಿ ಕಟ್ಟೆಚ್ಚರ

August 25, 2022

ಮಡಿಕೇರಿ,ಆ.24- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ಮತ್ತು ಪೂರ್ವ ನಿಗದಿತ ಬಿಜೆಪಿ ಜನಜಾಗೃತಿ ಸಮಾವೇಶವನ್ನು ಮುಂದೂಡಿದ್ದರೂ ಜಿಲ್ಲೆಯಲ್ಲಿ ಒಂದು ರೀತಿಯ ಬಿಗುವಿನ ವಾತಾವರಣವಿದ್ದು, ಬುಧವಾರ ಮುಂಜಾನೆಯಿಂದ 144 ಸೆಕ್ಷನ್‍ನಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಅಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಕೊಡಗಿನಲ್ಲಿ ಬೀಡುಬಿಟ್ಟಿದ್ದು, ವಿಪಕ್ಷ ನಾಯಕ ಸಿದ್ದ ರಾಮಯ್ಯರು ಜಿಲ್ಲೆಗೆ ಭೇಟಿ ನೀಡಿದ ವೇಳೆ ನಡೆದ ಘಟನಾವಳಿ ಗಳ ಹಿನ್ನೆಲೆಯಲ್ಲಿ ಉಂಟಾಗಿದ್ದ ಅಹಿತಕರ ಬೆಳವಣಿಗೆಗಳ ಅವಲೋಕನ ನಡೆಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ವೃತ್ತ ನಿರೀಕ್ಷಕರು, ಡಿವೈಎಸ್‍ಪಿ ಮತ್ತು ಅಧಿಕಾರಿಗಳ ಸಭೆ ನಡೆಸಿದ ಅಲೋಕ್ ಕುಮಾರ್, ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಚೆಕ್‍ಪೋಸ್ಟ್‍ಗಳಲ್ಲಿ ಬಿಗಿ ತಪಾಸಣೆ ನಡೆಸಬೇಕು. ಪ್ರವಾಸಿಗರಿಗೆ ತೊಂದರೆಯಾಗದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡಲು 15 ಕೆಎಸ್‍ಆರ್‍ಪಿ ತುಕಡಿಗಳ ಸಾವಿರ ಮಂದಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಐಜಿಪಿ ಪ್ರವೀಣ್ ಮಧುಕರ್ ಪವಾರ್, ಮೊಟ್ಟೆ ಎಸೆತ ಪ್ರಕರಣ ತನಿಖೆ ನಡೆಸುತ್ತಿರುವ ಅಡಿಷನಲ್ ಎಸ್‍ಪಿ ಸುಂದರ್‍ರಾಜ್ ಮಡಿಕೇರಿಯಲ್ಲೇ ಮೊಕ್ಕಾಂ ಹೂಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿ ಸಹಿತ ಜೀವ ರಕ್ಷಣೆಗೂ ಪೊಲೀಸ್ ಇಲಾಖೆ ಕಟಿಬದ್ಧವಾಗಿದೆ.

ಚೆಕ್‍ಪೋಸ್ಟ್ ತಪಾಸಣೆ: ಕೊಡಗು ಜಿಲ್ಲೆಗೆ ಗಡಿ ಹೊಂದಿ ಕೊಂಡಿರುವ ಕೊಪ್ಪ, ಕೊಡ್ಲಿಪೇಟೆ, ಕುಟ್ಟ, ಮಾಕುಟ್ಟ, ಸಂಪಾಜೆ, ಕರಿಕೆ ಮತ್ತಿತರ ಕಡೆಗಳಲ್ಲಿ ಈಗಾಗಲೇ ಚೆಕ್‍ಪೋಸ್ಟ್‍ಗಳನ್ನು ತೆರೆದು, ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಕೊಡಗು ಜಿಲ್ಲೆ ಪ್ರಸಿದ್ಧ ಪ್ರವಾಸಿತಾಣವಾಗಿರುವ ಪಟ್ಟಿಯಲ್ಲಿರುವ ಕಾರಣ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ತೊಂದರೆಯಾಗದಂತೆ ವಿಶೇಷ ಗಮನ ಹರಿಸಲು ಸೂಚನೆ ನೀಡಲಾಗಿದೆ. ಇದರೊಂದಿಗೆ ಆ.24ರ ಮಧ್ಯ ರಾತ್ರಿ 12 ಗಂಟೆಯಿಂದ ಆ.26ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

Translate »