ಕೊರೊನಾಗಿಂತ ಅದರ ಭಯವೇ ಹೆಚ್ಚು ಅಪಾಯಕಾರಿ
ಮೈಸೂರು

ಕೊರೊನಾಗಿಂತ ಅದರ ಭಯವೇ ಹೆಚ್ಚು ಅಪಾಯಕಾರಿ

February 24, 2021

ಮೈಸೂರು, ಫೆ.23- ಕೊರೊನಾ ಎಂಬ ಒಂದು ಸಣ್ಣ ವೈರಾಣು ಉದಾಸೀನ ಮನೋಭಾವದ ಹಾಗೂ ನಾನು ನನ್ನದೆಂಬ ಸ್ವಾರ್ಥ ತುಂಬಿದ ದುರಹಂಕಾರಿ ಮನುಷ್ಯನಿಗೆ ತಕ್ಕ ಪಾಠ ಕಲಿಸಿದ್ದು, ಕೊರೊನಾ ರೋಗಕ್ಕಿಂತ ಹೆಚ್ಚಾಗಿ ಅದರ ಆತಂಕದಿಂದಲೇ ಜೀವ ಭಯದಿಂದ ಮನುಷ್ಯ ತತ್ತರಿಸುವಂತೆ ಮಾಡಿದೆ. ಸಾಂಕ್ರಾಮಿಕ ರೋಗ-ರುಜಿನಕ್ಕೆ, ಕಷ್ಟನಷ್ಟಕ್ಕೆ, ಸಂಕಷ್ಟ ದುಃಖಕ್ಕೆ, ಸಾವು ನೋವಿಗೆ ಎಲ್ಲರೂ ಸಮಾನರೆಂಬ ಸಮಾನತೆಯ ಸಂದೇಶವನ್ನು ಕೊರೊನಾ ವೈರಸ್ ನೀಡಿರುವುದರ ಜೊತೆಗೆ ರೋಗಕ್ಕಿಂತ ರೋಗದ ಬಗೆಗಿನ ಭಯ ಭೀತಿಯೇ ಹೆಚ್ಚು ಅಪಾಯಕಾರಿ ಯೆಂಬ ಜಾಗೃತಿ ಮೂಡಿಸಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತ ವಾಗಿ ಮೈಸೂರು ತಾಲೂಕಿನ ಹಡಜನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿ ಸಿದ್ದ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಒಂದು ವರ್ಷದ ಸುದೀರ್ಘ ಕಾಲ ದಿಂದ ಇಡೀ ಜಗತ್ತನ್ನು ಕಾಡಿರುವ ಕೊರೊನಾ ಇದುವರೆಗೆ ಪ್ರಪಂಚದಲ್ಲಿ ನಡೆದಿರುವ ಎಲ್ಲಾ ಯುದ್ಧ ಗಳನ್ನು ಮೀರಿಸಿ ಸಾವು-ನೋವುಗಳನ್ನು, ಕಷ್ಟನಷ್ಟ ಗಳನ್ನು ತಂದೊಡ್ಡಿ ಮಾನವಕುಲವನ್ನು ಸಂಕಷ್ಟಕ್ಕೆ ತಳ್ಳಿದೆ. ಪ್ರಪಂಚದಾದ್ಯಂತ ನಮ್ಮ ಭಾರತ ದೇಶವೂ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ದೇಶಗಳು ಕೊರೊನಾ ರೋಗದ ಭೀಕರತೆಗೆ ನಲುಗಿ ಹೋಗಿವೆ. ಎಂಥಾ ಮುಂದುವರಿದ ರಾಷ್ಟ್ರಗಳಲ್ಲೂ ಅಭಿವೃದ್ಧಿ ಎಂಬುದು ಕುಂಠಿತಗೊಂಡಿದ್ದು, ನಿರುದ್ಯೋಗ ತಾಂಡವ ವಾಡುತ್ತಿದೆ. ಆರ್ಥಿಕ ಪರಿಸ್ಥಿತಿ ಸಂಪೂರ್ಣ ನೆಲ ಕಚ್ಚಿದ್ದು ಕೈಗಾರಿಕೆಗಳು ಬಾಗಿಲು ಮುಚ್ಚಿ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಅನ್ನದಾತ ರೈತರ ಗೋಳು ಮುಗಿಲು ಮುಟ್ಟಿದೆ. ಒಟ್ಟಾರೆ ಕೊರೊನಾದಂತಹ ಒಂದು ಚಿಕ್ಕ ವೈರಾಣುವಿನಿಂದಾಗಿ ಜಗತ್ತು ಕಷ್ಟಕ್ಕೆ ಸಿಲುಕಿ ಜರ್ಝರಿತಗೊಂಡಿದೆ ಎಂದರು.

ವಿಶೇಷವಾಗಿ ವಿದ್ಯಾರ್ಥಿಗಳು ಮೈಯೆಲ್ಲಾ ಕಣ್ಣಾಗಿ ಕೊರೊನಾಗೆ ಸೆಡ್ಡುಹೊಡೆದು ಇರುವ ಅಲ್ಪ ಕಾಲದಲ್ಲೇ ಚೆನ್ನಾಗಿ ಓದಿಕೊಳ್ಳುವ ಅಗತ್ಯವಿದೆ ಎಂದ ಅವರು ಈಗ ಕೊರೊನಾ ರೂಪಾಂತರಗೊಂಡಿದ್ದು, ಬೇರೆ ಬೇರೆ ರೀತಿಯಲ್ಲಿ ಕಾಡುತ್ತಿರುವುದರಿಂದ ನಾವು ಅದನ್ನು ಎದುರಿಸಬೇಕೆಂದು ಹೇಳಿದರು.

ಖ್ಯಾತ ಚಿತ್ರ ಕಲಾವಿದೆ ಚಿಂತಕಿ ಡಾ. ಜಮುನಾ ರಾಣಿ ಮಿರ್ಲೆ ವಿದ್ಯಾರ್ಥಿಗಳಿಗೆ ಕೊರೊನಾ ಕಾಲ ದಲ್ಲಿ ಹೇಗೆ ಓದಬೇಕೆಂದು ಹಿತವಚನ ಹೇಳಿದರು.

ಇದೇ ವೇಳೆ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ, ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ವಿ.ಮುರಳೀಧರ, ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ದರು. ಮುಖ್ಯ ಶಿಕ್ಷಕಿ ಹೆಚ್.ಎನ್.ವಾಣಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ರೇಣುಕಾ, ಎನ್.ಮಂಗಳ, ವಿ.ಪ್ರೇಮಕುಮಾರಿ, ಡಿ.ಎನ್.ಸೌಮ್ಯ ಮುಂತಾದವರು ಉಪಸ್ಥಿತರಿದ್ದರು.

 

 

Translate »