ಮೈಸೂರಲ್ಲೀಗ ಸರಗಳ್ಳರಿಗೆ ಸುಗ್ಗಿ ಕಾಲ!
ಮೈಸೂರು

ಮೈಸೂರಲ್ಲೀಗ ಸರಗಳ್ಳರಿಗೆ ಸುಗ್ಗಿ ಕಾಲ!

September 9, 2022

ಮೈಸೂರು, ಸೆ.8(ಆರ್‍ಕೆ)- ದಸರಾ ಉದ್ಘಾಟನೆಗೆ ಇನ್ನು ಕೇವಲ 18 ದಿನಗಳಿವೆ. ಇಂತಹ ಮೆಗಾ ಕಾರ್ಯಕ್ರಮಕ್ಕೆ ಮುನ್ನವೇ ಮೈಸೂರಲ್ಲಿ ಖದೀಮರು ಮಹಿಳೆಯರಲ್ಲಿ ಆಘಾತ ಉಂಟು ಮಾಡಿದ್ದಾರೆ. ಮೈಸೂರಿನ ಹಲವೆಡೆ ಮಹಿಳೆಯರ ಚಿನ್ನದ ಸರ ಕಳವು ಮಾಡುವ ಮೂಲಕ ದಸರಾ ವೇಳೆ ಇನ್ನೇನೋ ಎಂಬ ಆತಂಕಕ್ಕೆ ಕಾರಣರಾಗಿದ್ದಾರೆ.

ಜರ್ಕಿನ್ ಧರಿಸಿ ಬೈಕಿನಲ್ಲಿ ಕಾರ್ಯಾಚರಣೆ ನಡೆಸಿರುವ ಯುವಕರಿಬ್ಬರು, ಮೈಸೂರಿನ ಮೂರು ಕಡೆ ಸರ ಅಪಹರಿಸಿ ದ್ದರೆ, ಒಂದೆಡೆ ಯತ್ನ ನಡೆಸಿದ್ದಾರೆ. ಪ್ರತಿಷ್ಠಿತ ಬಡಾವಣೆಗಳ ಜನಸಂದಣಿ ಇರುವ ಸ್ಥಳಗಳಲ್ಲೇ ಖದೀಮರು ಕೈಚಳಕ ತೋರಿಸಿದ್ದು, ದಸರಾ ಸಮೀಪಿಸುತ್ತಿರುವಂತೆಯೇ ಸರಣಿ ಸರಗಳವು ನಡೆದಿದೆ. ಮೈಸೂರಿನ ಆರ್.ಎಸ್.ನಾಯ್ಡು ನಗರ ಮುಖ್ಯ ರಸ್ತೆ, ವಿಜಯನಗರ 2ನೇ ಹಂತದ ವಾಟರ್ ಟ್ಯಾಂಕ್, ವಿ.ವಿ.ಮೊಹಲ್ಲಾದ 8ನೇ ಕ್ರಾಸ್ ಹಾಗೂ ಸರಸ್ವತಿ ಪುರಂ 2ನೇ ಮೇನ್ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಆರ್.ಎಸ್.ನಾಯ್ಡು ನಗರ: ನಿನ್ನೆ ರಾತ್ರಿ 7 ಗಂಟೆಯಲ್ಲಿ ಎನ್.ಆರ್.ಠಾಣಾ ಸರಹದ್ದಿನ ಆರ್.ಎಸ್.ನಾಯ್ಡು ನಗರ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಬಳಿ ಗೋಬಿ ತಿನ್ನುತ್ತಿದ್ದ 72 ವರ್ಷದ ಗಿರಿಜಮ್ಮ ಎಂಬುವರ ಬಳಿಯೇ ತಾವೂ ಪಾನಿಪೂರಿ ತಿನ್ನುತ್ತಿದ್ದ ಯುವಕರು ಹಠಾತ್ತನೆ ಅವರ ಕತ್ತಿಗೆ ಕೈಹಾಕಿ 30 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಸ್ಕೂಟರ್‍ನಲ್ಲಿ ಪರಾರಿಯಾಗಿದ್ದಾರೆ. ಗೋಬಿ ಮಾರಾಟಗಾರ ಚಾಟ್ಸ್ ತಯಾ ರಿಸುವಲ್ಲಿ ಮಗ್ನನಾಗಿದ್ದ, ಇತರ ಗ್ರಾಹಕರ್ಯಾರೂ ಇಲ್ಲದ ಸಮಯ ನೋಡಿಕೊಂಡು ಖದೀಮರು ಕೈಚಳಕ ತೋರಿದ್ದಾರೆ. ಗಿರಿಜಮ್ಮ ಅವರು ಜೋರಾಗಿ ಕಿರುಚಿಕೊಂಡರಾದರೂ, ಜನರು ಸುತ್ತುವರಿಯು ವಷ್ಟರಲ್ಲಿ ಯುವಕರು ಕತ್ತಲಲ್ಲಿ ಮಾಯವಾದರು. ವಿಷಯ ತಿಳಿಯು ತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಎನ್.ಆರ್. ಠಾಣೆ ಇನ್ಸ್‍ಪೆಕ್ಟರ್ ಅಜರುದ್ದೀನ್, ಸಬ್ ಇನ್ಸ್‍ಪೆಕ್ಟರ್ ಜಯಕೀರ್ತಿ ಹಾಗೂ ಸಿಬ್ಬಂದಿ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯನಗರ ವಾಟರ್ ಟ್ಯಾಂಕ್: ರಾತ್ರಿ 8.30 ಗಂಟೆಯಲ್ಲಿ ವಿಜಯನಗರ 2ನೇ ಹಂತದ ವಾಟರ್ ಟ್ಯಾಂಕ್ ಬಳಿಯ ರಿಲಯನ್ಸ್ ಫ್ರೆಶ್ ಹಿಂಭಾಗದ ರಸ್ತೆಯಲ್ಲಿ ಎರಡನೇ ಕೃತ್ಯ ನಡೆದಿದೆ. ಬೈಕಿನಲ್ಲಿ ಬಂದ ಯುವಕರಿಬ್ಬರು ಅಂಗಡಿಯಿಂದ ಮನೆಗೆ ಹಿಂದಿರುಗುತ್ತಿದ್ದ 64 ವರ್ಷದ ವನಮಾಲ ಅವರ ಬಳಿ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಎಚ್ಚರಗೊಂಡ ಮಹಿಳೆ, ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಕಾರಣ ದುಷ್ಕರ್ಮಿ ಗಳಿಗೆ ಚಿನ್ನದ ಸರ ದಕ್ಕಲಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಜಮಾಯಿಸಿದರಾದರೂ, ಅಷ್ಟರಲ್ಲಿ ಬೈಕ್ ಸವಾರರು ಮಹದೇಶ್ವರ ಬಡಾವಣೆಯ ಚಿಕ್ಕ ರಸ್ತೆಗಳ ಮೂಲಕ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ವಿಜಯ ನಗರ ಠಾಣೆ ಇನ್ಸ್‍ಪೆಕ್ಟರ್ ರವಿಶಂಕರ್ ಹಾಗೂ ಸಿಬ್ಬಂದಿ, ಘಟನೆ ಕುರಿತಂತೆ ವನಮಾಲರಿಂದ ಮಾಹಿತಿ ಕಲೆ ಹಾಕಿದರು.

ವಿವಿ ಮೊಹಲ್ಲಾ: ರಾತ್ರಿ 9 ಗಂಟೆ ವೇಳೆಗೆ ಮೈಸೂರಿನ ವಿವಿ ಮೊಹಲ್ಲಾದ 8ನೇ ಕ್ರಾಸ್‍ನಲ್ಲಿ, ಮನೆ ಬಳಿ ವಾಕ್ ಮಾಡುತ್ತಿದ್ದ ಅಮರನಾಥ್ ಅವರ ಪತ್ನಿ ಸುಜಾತ ಅವರ ಕೊರಳಿಂದ 20 ಗ್ರಾಂನÀ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸಮೀಪ ದಲ್ಲೇ ಗಣಪತಿ ಪ್ರತಿಷ್ಠಾಪಿಸಿದ್ದು, ಅಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯುತ್ತಿದ್ದು, ಬಹಳಷ್ಟು ಜನ ಸೇರಿದ್ದರು. ಸರಗಳ್ಳರಿಗೆ ಇದು ಲೆಕ್ಕವೇ ಇಲ್ಲ ಎಂಬಂತೆ ಕೃತ್ಯ ನಡೆದಿದೆ. ವಿವಿ ಪುರಂ ಠಾಣೆ ಪ್ರಭಾರ ಇನ್ಸ್‍ಪೆಕ್ಟರ್ ಜಯಕುಮಾರ್ ಹಾಗೂ ಸಿಬ್ಬಂದಿ ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಧಾವಿಸಿದರೂ ಸರಗಳ್ಳರು ಪರಾರಿಯಾಗಿದ್ದರು.

ಸರಸ್ವತಿಪುರಂ: ನಾಲ್ಕನೇ ಕೃತ್ಯ ರಾತ್ರಿ 9.30ರಲ್ಲಿ ಸರಸ್ವತಿಪುರಂ 2ನೇ ಮೇನ್ ಬಳಿಯ ದೊಡ್ಡ ಮೋರಿ ಪಕ್ಕದಲ್ಲಿ ನಡೆದಿದ್ದು, ಎಸ್. ಮಾಲತಿ ಎಂಬುವರ ಕೊರಳಿಂದ 30 ಗ್ರಾಂನ ಚಿನ್ನದ ಸರ ಎಗರಿಸಿದ್ದಾರೆ. ಮೂರು ಕಡೆಗಳಲ್ಲಿ ಬೈಕ್ ಬಳಸಿರುವ ಖದೀಮರು ಒಂದೆಡೆ ಮಾತ್ರ ಸ್ಕೂಟರ್‍ನಲ್ಲಿ ಬಂದು ಕೃತ್ಯ ಎಸಗಿದ್ದಾರೆ. ಸರಸ್ವತಿ ಪುರಂ ಠಾಣೆ ಇನ್ಸ್‍ಪೆಕ್ಟರ್ ರವೀಂದ್ರ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಮೊದಲ ಕೃತ್ಯ ಆರ್.ಎಸ್. ನಾಯ್ಡು ನಗರದಲ್ಲಿ ನಡೆದಾಗಲೇ ಮೈಸೂರು ನಗರದಾದ್ಯಂತ ಎಲ್ಲಾ ಠಾಣೆಗಳ ಪೊಲೀಸರು ಎಚ್ಚೆತ್ತು ರಸ್ತೆಗಿಳಿದರೂ, ನಂತರ ಮೂರು ಕಡೆ ಬೈಕ್ ಸವಾರರು ದುಷ್ಕøತ್ಯವೆಸಗಿದ್ದಾರೆ. ಸಿಸಿ ಕ್ಯಾಮರಾ ಫುಟೇಜ್‍ಗಳನ್ನು ಪಡೆದಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Translate »