ಮೈಸೂರು ಆರ್‍ಬಿಐ ಆವರಣದಲ್ಲಿ ಚಿರತೆ ಸಂಸಾರ
ಮೈಸೂರು

ಮೈಸೂರು ಆರ್‍ಬಿಐ ಆವರಣದಲ್ಲಿ ಚಿರತೆ ಸಂಸಾರ

September 8, 2022

ಮೈಸೂರು, ಸೆ.7(ಎಂಟಿವೈ)- ಮೈಸೂರಿನ ಮೇಟಗಳ್ಳಿಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ) ಸಂಸ್ಥೆ ಆವ ರಣದಲ್ಲಿ ಚಿರತೆಯ ಸಂಸಾರವೇ ಪ್ರತ್ಯಕ್ಷ ವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆರ್‍ಬಿಐ ಸಮೀಪದ ಕೇಂದ್ರೀಯ ವಿದ್ಯಾ ಲಯಕ್ಕೆ ರಜೆ ಘೋಷಿಸಲಾಗಿದೆ.

ಕಳೆದ ಕೆಲ ದಿನಗಳಿಂದ ಎರಡು ಮರಿಗ ಳೊಂದಿಗೆ ಚಿರತೆ ರಾತ್ರಿ ವೇಳೆ ಆರ್‍ಬಿಐ ಆವ ರಣದಲ್ಲಿ ಓಡಾಡುತ್ತಿದ್ದು, ಅವುಗಳ ಚಲನವಲನ ಅಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಆರ್‍ಬಿಐ ಸಿಬ್ಬಂದಿ, ವಸತಿ ಗೃಹದ ನಿವಾಸಿಗಳು ಆತಂಕಕ್ಕೊಳಗಾ ಗಿದ್ದು, ಸೆ.1ರಿಂದಲೇ ಕೇಂದ್ರೀಯ ವಿದ್ಯಾಲ ಯಕ್ಕೆ ರಜೆ ಘೋಷಿಸಲಾಗಿದೆ. ಆರ್‍ಬಿಐ ಹಾಗೂ ಕೇಂದ್ರೀಯ ಶಾಲೆಯ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ತಂಡ, ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಲ್ಲದೆ, ಮೂರು ಪ್ರತ್ಯೇಕ ಸ್ಥಳ ಗಳಲ್ಲಿ ಬೋನ್ ಇಟ್ಟು, ಎಚ್ಚರ ವಹಿಸಿದ್ದಾರೆ.

ಮನೆಯಿಂದ ಹೊರ ಬರಲು ಭಯ: ಆರ್‍ಬಿಐ ಕ್ವಾರ್ಟರ್ಸ್ ನಿವಾಸಿಗಳು `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಕಳೆದ ಒಂದು ತಿಂಗ ಳಿಂದ ಮೂರು ಚಿರತೆಗಳು ರಾತ್ರಿ ವೇಳೆ ಆರ್‍ಬಿಐ ಕ್ವಾರ್ಟರ್ಸ್‍ನಲ್ಲಿ ಓಡಾಡುತ್ತಿವೆ. ಮನೆಯಿಂದ ಹೊರ ಬರಲು ನಮಗೆ ಭಯವಾಗುತ್ತಿದೆ. ಸಾಕುನಾಯಿಗಳನ್ನು ಬೇಟೆಯಾಡಿ ತಿನ್ನುತ್ತಿವೆ. ಚಿರತೆ ಜನರ ಮೇಲೆ ದಾಳಿ ಮಾಡಬಹು ದೆಂಬ ಆತಂಕವಿದೆ.

ಚಿರತೆಗಳ ಹಾವಳಿಯಿಂದ ಕ್ವಾರ್ಟರ್ಸ್‍ನಲ್ಲಿದ್ದ ಬೀದಿನಾಯಿಗಳ ಸಂಖ್ಯೆಯೂ ಇಳಿಮುಖವಾಗಿದೆ. ಕಳೆದ ರಾತ್ರಿಯೂ ನಾಯಿಯೊಂದನ್ನು ಬೇಟೆಯಾಡಿ ತಿಂದು ಹಾಕಿವೆ. ಚಿರತೆಗಳ ಸೆರೆ ಹಿಡಿಯುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಗೆ ಆತಂಕವಾಗಿದೆ. ಎಲ್ಲಿ ಚಿರತೆ ದಾಳಿ ಮಾಡುತ್ತದೋ ಎಂಬ ಆತಂಕ ಶಿಕ್ಷಕರಿಗೂ ಇದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಿದ್ದಾರೆ. ಇದರಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿದು ಸ್ಥಳೀಯರ ಆತಂಕ ನಿವಾರಣೆ ಮಾಡಿ, ಶಾಲೆ ಪುನರಾರಂಭಗೊಳ್ಳುವಂತೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಚಿರತೆ ಸೆರೆಗೆ ಕ್ರಮ: ಆರ್‍ಬಿಐ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಸಂಬಂಧ ಡಿಸಿಎಫ್ ಕೆ. ಕಮಲ ಕರಿಕಾಳನ್ ಮಾತನಾಡಿ, ಚಿರತೆ ಓಡಾಡುತ್ತಿರುವ ಮಾಹಿತಿಯನ್ನು ಕಳೆದ ವಾರ ಅಲ್ಲಿನ ಅಧಿಕಾರಿಗಳು ಅರಣ್ಯ ಇಲಾಖೆಗೆ ನೀಡಿದ್ದಾರೆ. ಕೂಡಲೇ ನಮ್ಮ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲಿಸಲಾಗಿದೆ. ಅಲ್ಲದೆ, ಅಲ್ಲಿರುವ ಸಿಸಿ ಕ್ಯಾಮರಾ ಫುಟೇಜ್‍ನಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯವನ್ನು ತೋರಿಸಿದ್ದಾರೆ. ಕೂಡಲೇ ಎಸಿಎಫ್ ಲಕ್ಷ್ಮೀಕಾಂತ ಅವರೊಂದಿಗೆ ಆರ್‍ಎಫ್‍ಓ ಒಳಗೊಂಡ ಸಿಬ್ಬಂದಿ, ಪರಿಶೀಲಿಸಿದ ಬಳಿಕ ಒಂದು ಬೋನ್ ಇಟ್ಟು ಸೂಕ್ಷ್ಮವಾಗಿ ಪರಿಶೀಲಿಸಲಾಗಿತ್ತು. ಆದರೆ ಅಲ್ಲಿಂದ ಚಿರತೆ ಸುಳಿವು ಇರಲಿಲ್ಲ. ಒಂದೆರಡು ದಿನದ ಬಳಿಕ ಮತ್ತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈಗ ಮೂರು ಬೋನ್ ಇಟ್ಟು, ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ.

ಅಲ್ಲದೇ ಆರ್‍ಬಿಐ ಹಾಗೂ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಅಲ್ಲಿರುವ ಪೊದೆಗಳಲ್ಲಿ ಶೋಧಿಸಲಾಗುತ್ತಿದೆ. ಇದುವರೆಗೆ ಕಂಡುಬಂದಿಲ್ಲ. ಸಾಮಾನ್ಯವಾಗಿ ಚಿರತೆ ರಾತ್ರಿ ವೇಳೆ ಓಡಾಡುವ ಪ್ರಾಣಿಯಾಗಿದ್ದು, ಇದರಿಂದ ಅವುಗಳ ಸೆರೆ ಸಾಧ್ಯವಾಗಿಲ್ಲ. ಆದರೂ ಕಾರ್ಯಾಚರಣೆ ಮುಂದುವರೆಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪಶುವೈದ್ಯರ ತಂಡವನ್ನು ಕಾಯ್ದಿರಿಸಲಾಗಿದೆ. ಚಿರತೆ ಕಂಡು ಬಂದರೆ ಅರವಳಿಕೆ ಮದ್ದು ನೀಡಿ, ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕೇಂದ್ರೀಯ ವಿದ್ಯಾಲಯಕ್ಕೆ ರಜೆ ನೀಡುವ ಅವಶ್ಯಕತೆ ಇಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ. ತರಗತಿಗಳು ನಡೆಯುವುದು ಹಗಲು ವೇಳೆಯಾಗಿರುವುದರಿಂದ ಚಿರತೆ ಹಗಲು ಓಡಾಡುವುದೇ ಇಲ್ಲ. ಹೀಗಾಗಿ ಶಾಲೆ ನಡೆಸುವಂತೆ ಸಲಹೆ ನೀಡಲಾಗಿದೆ. ಅಲ್ಲದೆ, ಸ್ಥಳದಲ್ಲಿ ಅರಣ್ಯ ಸಿಬ್ಬಂದಿ ಇರುವುದರಿಂದ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು.

Translate »