ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡ ಹಿರಿಯ ನಟ ಜಗ್ಗೇಶ್
ಮೈಸೂರು

ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡ ಹಿರಿಯ ನಟ ಜಗ್ಗೇಶ್

February 24, 2021

ಮೈಸೂರು,ಫೆ.23(ಪಿಎಂ)- ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧ ಲಘುವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ದರ್ಶನ್ ಅಭಿಮಾನಿಗಳು ನಿನ್ನೆ ಮುತ್ತಿಗೆ ಹಾಕಿ, ಘೇರಾವ್ ಮಾಡಿದ ಪ್ರಕರಣದಿಂದ ಮನನೊಂದ ಹಿರಿಯ ನಟ ಜಗ್ಗೇಶ್, ತಮ್ಮ ನೋವು ಹಾಗೂ ಬೇಸರ ವ್ಯಕ್ತಪಡಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ಅತ್ತಳ್ಳಿಯಲ್ಲಿ ಸೋಮವಾರ ದರ್ಶನ ಅಭಿಮಾನಿ ಗಳು ತಮ್ಮನ್ನು ತರಾಟೆಗೆ ತೆಗೆದುಕೊಂಡ ಘಟನೆ ಹಾಗೂ ಈ ಸಂಬಂಧ ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಬೇಸರದ ನುಡಿಗಳೊಂದಿಗೆ ಅಲ್ಲಲ್ಲಿ ಕಟು ಶಬ್ಧಗಳಲ್ಲಿ ಜಗ್ಗೇಶ್ ಕಿಡಿಕಾರಿದ್ದಾರೆ.

ನಾನು ಪ್ರಾಮಾಣಿಕವಾಗಿದ್ದೇನೆ. ಇದಕ್ಕೆ ರಾಯರೇ ಸಾಕ್ಷಿ. ಅಪ್ಪನಿಗೆ ಹುಟ್ಟಿದ ಮಗ ನಾನು. ನಮ್ಮಪ್ಪನ ಹೆಸರು ಶಿವಲಿಂಗೇ ಗೌಡ. ನಾನು ಎಂದಿಗೂ ಓಡಿ ಹೋಗಲ್ಲ. ದೇಶ ಸೇವೆ ಮಾಡುವಂತಹ ಆರ್‍ಎಸ್‍ಎಸ್ ಸಂಘಟನೆ ಕಾರ್ಯಕರ್ತ ನಾನು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ನಾನೇನು ಕಳ್ಳತನ ಮಾಡಿದ್ದೇನಾ? ನನ್ನ ಬಳಿಗೆ ಬಂದ ಯುವಕರ ಎದುರೇ ಮಾತನಾಡಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗಲಿಲ್ಲ. ಸಣ್ಣ ವಿಷಯ ಇಟ್ಟುಕೊಂಡು ಜಗ್ಗೇಶ್‍ಗೆ ಅವಮಾನ ಮಾಡಿದೆವು ಎನ್ನಿಸಿದರೆ ನನಗೇನು ನಷ್ಟವಿಲ್ಲ. ನಾನು ಏನೂ ತಪ್ಪು ಮಾಡಿಲ್ಲ. ಕಾಗೆ ಹಾರಿಸಿದ್ದರೆ ಇಷ್ಟೊತ್ತಿಗೆ 20 ಬಾರಿ ಶಾಸಕ, ಸಚಿವ ಆಗುತ್ತಿದ್ದೆ ಎಂದು ಕೆಲ ಮಾಧ್ಯಮ ಗಳನ್ನು ಉದ್ದೇಶಿಸಿ ಕಿಡಿ ನುಡಿಗಳನ್ನಾಡಿದ್ದಾರೆ.

ಅಲ್ಲಿ ಸುಮಾರು 20 ಯುವಕರು ಬಂದಿದ್ದರು. ಅವರಲ್ಲಿ ಉದ್ವೇಗ ಇತ್ತು. ಅವರು ನಿಂದನೆಗಳನ್ನು ನಾನು ಸಾರ್ವತ್ರಿಕಗೊಳಿಸಿದರೆ ಸಮಾಜ ಏನಾಗಬಹುದು? ನಾನೇನು ಅಲ್ಲಿಂದ ಓಡಿ ಹೋಗ ಲಿಲ್ಲ. ಅಲ್ಲೇ ಕೂತು ಅವರಿಗೆ ವಿವರಿಸಿದ್ದೇನೆ. ನನಗೇ ಬುದ್ಧಿ ಹೇಳ ಬೇಕಿರುವವರು ರಾಘವೇಂದ್ರಸ್ವಾಮಿಗಳು, ಕನ್ನಡಿಗರು ಹಾಗೂ ನನ್ನ ಹೆತ್ತವರು. ಇನ್ನಾವುದೇ ನಟ ಅಥವಾ ಅವರ ಅಭಿಮಾನಿಗಳು ನನ್ನ ಹತ್ತಿರ ಬರಲಾಗುವುದಿಲ್ಲ. ನನ್ನ ಪಾಡಿಗೆ ನನ್ನ ಬಿಡಿ. ನಾನು ಕನ್ನಡದ ಕೆಲಸ ಮಾಡುತ್ತೇನೆ. ಇನ್ನು ಹತ್ತಾರು ವರ್ಷ ಕನ್ನಡ ಚಿತ್ರರಂಗ ಅವಕಾಶ ಕೊಟ್ಟರೆ ನಟಿಸುತ್ತೇನೆ ಎಂದಿದ್ದಾರೆ.

ಇಂತಹ ಸನ್ನಿವೇಶಗಳಿಗೆ ಪ್ರಚಾರ ಸಿಕ್ಕರೆ ಚಿತ್ರೋದ್ಯಮದಲ್ಲಿ ರೌಡಿಸಂ ಆರಂಭಗೊಳ್ಳಲಿದೆ. ಹಿರಿಯ ನಟರ ಬಗ್ಗೆ ಬೆದರಿಕೆ ಹಾಕುವ ಪ್ರವೃತ್ತಿ ಪ್ರಾರಂಭ ಆಗಲಿದೆ. ನನಗೆ ಜನರಿಲ್ಲವಾ? ನನ್ನ ಪರವಾಗಿ ಅವರು ಬರೋದಿಲ್ಲವಾ? ನನಗೆ ಅಭಿಮಾನಿಗಳಿಲ್ಲವೇ? ನನಗೂ 162 ಅಭಿಮಾನಿ ಸಂಘಗಳಿವೆ. ನೀವು ಯಾರೂ ಈ ಬಗ್ಗೆ ಮಧ್ಯ ಪ್ರವೇಶಿಸಬಾರದು ಎಂದು ನನ್ನ ಅಭಿಮಾನಿ ಸಂಘಟನೆಗಳಿಗೆ ಹೇಳಿ ದ್ದೇನೆ. ನಾನು ಒಕ್ಕಲಿಗ ಮನೆತನದಲ್ಲಿ ಬಂದವ. ತಿನ್ನೊಕೆ ಅನ್ನ ಇಲ್ಲದೆ ಕಷ್ಟಪಟ್ಟು ಮೇಲೆ ಬಂದಿದ್ದೇನೆ. ಹಿರಿಯರಿಗೆ ಅಪಮಾನ ಮಾಡು ವುದಕ್ಕೆ ಯಾರೂ ಉತ್ತೇಜನ ನೀಡಬಾರದು ಎಂದು ಕೋರಿದ್ದಾರೆ.

Translate »