ಮೈಸೂರು ಅರಮನೆಯಲ್ಲಿಜಂಬೂಸವಾರಿ ತಾಲೀಮು
ಮೈಸೂರು

ಮೈಸೂರು ಅರಮನೆಯಲ್ಲಿಜಂಬೂಸವಾರಿ ತಾಲೀಮು

October 2, 2022

ಮೈಸೂರು,ಅ.1(ಎಂಟಿವೈ)-ನಾಡಹಬ್ಬ ದಸರಾ ಪ್ರಧಾನ ಆಕರ್ಷಣೆ ಜಂಬೂಸವಾರಿಗೆ ಕೇವಲ ನಾಲ್ಕು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಗಜಪಡೆ ಹಾಗೂ ಅಶ್ವಪಡೆಗೆ ಅಂತಿಮ ಹಂತದ ತಾಲೀಮು ಶನಿವಾರ ಚಿನ್ನದ ಅಂಬಾ ರಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ನೆರವೇರಿತು.
ಅರಮನೆಯ ಮುಂಭಾಗದ ಪ್ರಾಂಗಣದಲ್ಲಿ ನಡೆದ ಜಂಬೂಸವಾರಿಯ ಮೊದಲ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರ, ಅಶ್ವಾರೋಹಿ ದಳ 34 ಕುದುರೆ, ಪೊಲೀಸ್ ಬ್ಯಾಂಡ್ ವಾದನದ ತಂಡ, ನಾಲ್ಕು ಪೊಲೀಸ್ ತುಕಡಿಗಳು ಪಾಲ್ಗೊಂ ಡಿದ್ದವು. ಅ.5ರಂದು ನಡೆಯಲಿರುವ ಜಂಬೂಸವಾರಿ ಯಲ್ಲಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯುವಿಗೆ ಪುಷ್ಪಾ ರ್ಚನೆ ಮಾಡುವ ಸ್ಥಳ, ಆನೆಗಳ ತಂಡದ ಮುಂದೆ ಸಂಚ ರಿಸಲಿರುವ ಅಶ್ವಪಡೆ, ಪಥಸಂಚಲನದಲ್ಲಿ ಪಾಲ್ಗೊಳ್ಳುವ ಪೊಲೀಸ್ ತುಕಡಿ, ಪೊಲೀಸ್ ಬ್ಯಾಂಡ್ ತಂಡ ಯಾವ ಕ್ರಮಾಂಕದಲ್ಲಿ ಸಾಗಬೇಕೆಂಬುದನ್ನು ಪರಿಚಯಿಸುವ ನಿಟ್ಟಿನಲ್ಲಿ ಇಂದು ನಡೆಸಿದ ಮೊದಲ ತಾಲೀಮು ಯಶಸ್ವಿಯಾಗಿ ನೆರವೇರಿತು. ಈ ಮಧ್ಯೆ ಇಂದು ಎರಡು ಬಾರಿ ತಾಲೀಮು ನಡೆಸಲಾಯಿತು. ಸಿಎಆರ್ ಡಿಸಿಪಿ ಶಿವರಾಜು, ಅರಮನೆಯ ಭದ್ರತಾ ವಿಭಾಗದ ಎಸಿಪಿ ಚಂದ್ರಶೇಖರ್, ಪಶುವೈದ್ಯ ಡಾ.ಮುಜೀಬ್, ಸಹಾಯಕ ರಾದ ರಂಗರಾಜು ಇನ್ನಿತರರು ಉಪಸ್ಥಿತರಿದ್ದರು.

ಇಂದು ಪೂರ್ಣ ಪ್ರಮಾಣದ ತಾಲೀಮು: ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ, ಇಂದು ಸಣ್ಣ ಪ್ರಮಾ ಣದ ತಾಲೀಮು ನಡೆಸಲಾಗಿದೆ. ನಾಳೆ(ಅ.2)ಯಿಂದ ಜಂಬೂಸವಾರಿಯ ಪೂರ್ಣ ಪ್ರಮಾಣದ ತಾಲೀಮು ನಡೆಸಲಾಗುತ್ತದೆ. ಇಂದು ಅಶ್ವಪಡೆ ಬಂದಿದ್ದ ಕಾರಣ, ಕೇವಲ ಮೂರು ಆನೆ ಗಳನ್ನಷ್ಟೇ ಕಳುಹಿಸಿ ಕೊಡುವಂತೆ ಕೇಳಿ ಕೊಂಡಿದ್ದರು. ಮಳೆ ಹಿನ್ನೆಲೆಯಲ್ಲಿ ದಸರಾ ಗಜಪಡೆಯನ್ನು ಇಂದು ಜಂಬೂಸವಾರಿ ಮಾರ್ಗ ದಲ್ಲಿ ತಾಲೀಮಿಗೆ ಕರೆ ದೊಯ್ಯದ ಕಾರಣ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ, ಚೈತ್ರ ಆನೆಯನ್ನಷ್ಟೇ ಕಳುಹಿಸಿಕೊಡಲಾಗಿತ್ತು. ನಾಳೆಯಿಂದ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುವ ಎಲ್ಲಾ ಆನೆಗಳು ತಾಲೀಮಿನಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

Translate »