ಮೈಸೂರು,ಅ.2-ಮೈಸೂರಿನ ಬಂಡಿಪಾಳ್ಯದ ಬಳಿ ಪಾದ ಯಾತ್ರೆ ಅಂತ್ಯವಾದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಳೆ ಯಲ್ಲೇ ಭಾಷಣ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ಹರಿಹಾಯ್ದರು.
ರಾಹುಲ್ ಗಾಂಧಿ ಅವರು ಸಂಜೆ 6.48ಕ್ಕೆ ವೇದಿಕೆಯನ್ನೇರುತ್ತಿದ್ದಂತೆ ಜೋರು ಮಳೆ ಆರಂಭವಾಯಿತು. ಈ ವೇಳೆ ಸಹಾಯಕರು ಛತ್ರಿ ಹಿಡಿಯಲು ಮುಂದಾದಾಗ ಅದನ್ನು ನಿರಾಕರಿಸಿದ ಮಾತು ಮುಂದುವರಿಸಿದ ಅವರು ರಾಜ್ಯದಲ್ಲಿರುವ 40 ಪರ್ಸೆಂಟ್ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಹೇಳುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಕಾರ್ಯಕರ್ತರು ಕೇಕೆ, ಶಿಳ್ಳೆ ಹಾಕಿದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜನರ ಹಿತ ಮರೆತು ಲೂಟಿ ಹೊಡೆಯುವುದರಲ್ಲಿ ನಿರತವಾಗಿದೆ. 40 ಪರ್ಸೆಂಟ್ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಪ್ರತಿಯೊಂದೂ ಕಮಿಷನ್ ವ್ಯವಹಾರವಾಗಿದೆ ಎಂದು ಜನರೇ ಹೇಳುತ್ತಿದ್ದಾರೆ. ಈ ದುಸ್ಥಿತಿ ಇದ್ದರೂ ಪಕ್ಷದ ನಾಯಕರು ಏನೂ ತಿಳಿಯದವರಂತೆ ಇದ್ದಾರೆ ಎಂದು ಟೀಕಿಸಿದರು. ಬಿಜೆಪಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಅವರು ವಿಭಜಿಸುವ ಕೆಲಸ ಮಾಡಿದರೆ ಕಾಂಗ್ರೆಸ್ ಜೋಡಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕಾಂಗ್ರೆಸ್ ಕೊಟ್ಟ ಮಾತಿನಂತೆ ಜನರನ್ನು ಉಳಿಸುವ ಕೆಲಸ ಮಾಡಲಿದೆ. ಈ ನಿಟ್ಟಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ ಐಕ್ಯತಾ ಯಾತ್ರೆ ನಡೆಸಲಾಗುತ್ತಿದೆ. ಇದು ಸತ್ಯ, ಅಹಿಂಸೆ, ನ್ಯಾಯಮಾರ್ಗವಾಗಿದೆ. ಯಾವುದೇ ಕಾರಣಕ್ಕೂ ಯಾತ್ರೆ ನಿಲ್ಲಿಸದೆ ಗುರಿ ತಲುಪುತ್ತೇವೆ. ಜೋರು ಮಳೆಯಲ್ಲೂ ನನ್ನ ಭಾಷಣ ಆಲಿಸಿದ ಎಲ್ಲರಿಗೂ ಧನ್ಯವಾದ ಎಂದು ನುಡಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.