ಜಂಬೂಸವಾರಿ ಮುಕ್ತಾಯದ ಬೆನ್ನ  ಹಿಂದೆಯೇ ಮೈಸೂರಲ್ಲಿ ಭಾರೀ ಮಳೆ
ಮೈಸೂರು

ಜಂಬೂಸವಾರಿ ಮುಕ್ತಾಯದ ಬೆನ್ನ ಹಿಂದೆಯೇ ಮೈಸೂರಲ್ಲಿ ಭಾರೀ ಮಳೆ

October 16, 2021

ಮೈಸೂರು, ಅ.15(ಎಸ್‍ಬಿಡಿ)- ವಿಜಯದಶಮಿ ಮೆರವಣಿಗೆ ಮುಕ್ತಾಯವಾದ ಬೆನ್ನಲ್ಲೇ ಮೈಸೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಿತು.

ಜಂಬೂ ಸವಾರಿ ವೇಳೆಯೇ ಕಾರ್ಮೋಡ ಕವಿದಿತ್ತಾದರೂ ಸದ್ಯ ಮಳೆ ಬರಲಿಲ್ಲ. ಆದರೆ ಸಂಜೆ ಸುಮಾರು 6.30ಕ್ಕೆ ಆರಂಭ ವಾದ ಮಳೆ 2 ಗಂಟೆಗಳ ಕಾಲ ಎಡೆಬಿಡದೆ ಧೋ.. ಎಂದು ಸುರಿಯಿತು. ಒಂದೇ ಸಮನೆ ಜೋರು ಮಳೆ ಸುರಿದ ಪರಿ ಣಾಮ ರಸ್ತೆಗಳೆಲ್ಲವೂ ಜಲಾವೃತವಾದವು. ಇಕ್ಕೆಲಗಳಲ್ಲಿ ಕಾಲುವೆ ಮಾದರಿಯಲ್ಲಿ ನೀರು ಹರಿದು, ತಗ್ಗು ಪ್ರದೇಶಗಳು ಕೆರೆಯಂ ತಾಗಿದ್ದವು. ಪರಿಣಾಮ ದ್ವಿಚಕ್ರ ವಾಹನ ಸವಾರರು, ಪಾದಚಾರಿ ಗಳು ಪರದಾಡುವಂತಾಯಿತು. ಅದೆಷ್ಟೋ ದ್ವಿಚಕ್ರ ವಾಹನ ಗಳು ಮಳೆಯಲ್ಲಿ ಸ್ಟಾರ್ಟ್ ಆಗದೆ ಸವಾರರು ಮಳೆಯಲ್ಲೇ ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯವೂ ಕಂಡು ಬಂದಿತು.

ಹೊಳೆಯಾದ ರಸ್ತೆ; ಮನೆಗಳಿಗೆ ನೀರು: ಪುರಭವನದ ಎದುರು ದೊಡ್ಡಗಡಿಯಾರ ಸಮೀಪ ಮಳೆಯಿಂದ ಹೊಳೆ ನಿರ್ಮಾಣ ವಾದಂತಿತ್ತು. ಮೇಲ್ಭಾಗದ ರಸ್ತೆಗಳಿಂದ ರಭಸವಾಗಿ ನೀರು ಇಲ್ಲಿಗೆ ಹರಿದು ಬರುತ್ತಿತ್ತು. ಕಾರು ಇನ್ನಿತರ ದೊಡ್ಡ ವಾಹನ ಗಳು ಸಂಚರಿಸಿದಾಗ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಗಳು ಬಿದ್ದು, ನೀರಿನಲ್ಲಿ ಮುಳುಗುತ್ತಿದ್ದ ದೃಶ್ಯ ಕಂಡುಬಂದಿತು. ಮಧುವನ ಬಡಾವಣೆಯ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಮಂಡಿಯೊಳಗೆ ಮಂಡಿಯುದ್ದ ನೀರು ತುಂಬಿದ್ದರಿಂದ ಮಹಿಳೆ ಯರು-ಮಕ್ಕಳು ತೀವ್ರ ಸಂಕಷ್ಟ ಅನುಭವಿಸಿದರು. ಚಾಪೆ ಇನ್ನಿತರ ಲಘುವಾದ ವಸ್ತುಗಳು ನೀರಿನಲ್ಲಿ ತೇಲಿ ಹೋಗಿದ್ದು ಕಂಡುಬಂದಿತು. ಮೇದರ್‍ಬ್ಲಾಕ್ ಸೇರಿದಂತೆ ತಗ್ಗು ಪ್ರದೇಶದ ಹಲವು ಬಡಾವಣೆಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂಟಿಕೊಪ್ಪಲಿನಲ್ಲಿರುವ ಮೈಸೂರು ವಿವಿ ಕ್ವಾಟ್ರಸ್‍ನಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿ ಸುವಂತಾಯ್ತು. ಇಲ್ಲಿನ ರಸ್ತೆಗಳು, ಚರಂಡಿಗಳು ತುಂಬಿ ಮನೆಯೊಳಗೆ ನೀರು ನುಗ್ಗಿದೆ ಎಂದು ನಿವಾಸಿ ಗಳಾದ ಪ್ರಕಾಶ್, ರಾಘವ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಆದಿಪಂಪ ಮತ್ತು ವಾಲ್ಮೀಕಿ ರಸ್ತೆಯಲ್ಲಿ ಚರಂಡಿ ಕಾಮಗಾರಿ ವೇಳೆ ಎತ್ತರವಾಗಿ ದೊಡ್ಡ ಮೋರಿಗೆ ಮಣ್ಣು ಸುರಿದಿರುವುದರಿಂದ ಈ ಸಮಸ್ಯೆ ಉಂಟಾ ಗಿದ್ದು, ಮೂರ್ನಾಲ್ಕು ವರ್ಷದಿಂದ ಹಲವು ಬಾರಿ ಪಾಲಿಕೆಗೆ ದೂರು ನೀಡಿದರೂ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿ ದರು. ಸಬರ್ಬನ್ ಬಸ್ ನಿಲ್ದಾಣದ ಎದುರಿನ ಕಟ್ಟಡದ ನೆಲ ಮಾಳಿಗೆಯಲ್ಲಿ ನೀರು ತುಂಬಿಕೊಂಡಿತ್ತು. 3 ಅಗ್ನಿ ಶಾಮಕ ವಾಹನಗಳ ಮೂಲಕ ನೀರನ್ನು ಹೊರತೆಗೆಯಲಾಯಿತು.

ಹೈರಾಣಾದ ಜನ: ತಾಯಿ ಚಾಮುಂಡೇಶ್ವರಿ ಪ್ರತಿಷ್ಠಾಪಿತ ಚಿನ್ನದ ಅಂಬಾರಿಯನ್ನು ಕಣ್ತುಂಬಿಕೊಳ್ಳುವ ತವಕದಲ್ಲಿ ಅರಮನೆ ಸುತ್ತಲೂ ಸಾವಿರಾರು ಸಂಖ್ಯೆಯಲ್ಲಿ ಜನ ಕಿಕ್ಕಿರಿದಿದ್ದರು. ಮೆರವಣಿಗೆ ಮುಕ್ತಾಯವಾದರೂ ಸಂಜೆ ದೀಪಾಲಂಕಾರದ ಸೊಬಗು ಸವಿಯಲೆಂದು ತಾವಿದ್ದ ಜಾಗದಲ್ಲೇ ಓಡಾಡಿ ಕೊಂಡು ಕಾಲ ಕಳೆಯುತ್ತಿದ್ದರು. ಸಂಜೆ 6.30ರ ವೇಳೆಗೆ ಕೆಲ ವೆಡೆ ವಿದ್ಯುತ್ ದೀಪಾಲಂಕಾರವೂ ಹೊತ್ತಿತು. ಆದರೆ ಕೆಲ ಹೊತ್ತಲ್ಲೇ ಮಳೆ ಆರ್ಭಟಿಸಿದ್ದರಿಂದ ಜನ ಹೈರಾಣಾದರು. ಅರಮನೆ ಸುತ್ತಲಿನ ರಸ್ತೆಗೆ ಸಾರ್ವಜನಿಕ ವಾಹನ ನಿರ್ಬಂ ಧಿಸಿದ್ದರಿಂದ ದೂರದಲ್ಲೆಲ್ಲೋ ತಮ್ಮ ವಾಹನಗಳನ್ನು ನಿಲ್ಲಿಸಿ ಬಂದಿದ್ದವರು ಅನಿವಾರ್ಯವಾಗಿ ಮಳೆಯಲ್ಲಿ ತೊಯ್ದು ಹೋದರು. ಮಳೆ ಜೋರಾಗಿದ್ದರಿಂದ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ದೀಪಾಲಂಕಾರ ಆರಿಸಲಾಯಿತು. ಮಳೆಯನ್ನೂ ಲೆಕ್ಕಿಸದೆ ದ್ವಿಚಕ್ರ ವಾಹನದಲ್ಲಿ ರಸ್ತೆಗಳನ್ನು ಸುತ್ತು ಹಾಕುತ್ತಿದ್ದರು. ಕುಟುಂಬ ಸದಸ್ಯರು, ಪರಿಚಯಸ್ಥರು ಟಾರ್ಪಲ್ ಕಟ್ಟಿದ್ದ ಗೂಡ್ಸ್ ಆಟೋದಲ್ಲಿ ಕುಳಿತು ನಗರ ಪ್ರದಕ್ಷಿಣೆ ಹಾಕಿದರು. ಬಸ್ ಸಂಚಾರ ಮಾರ್ಗ ವ್ಯತ್ಯಯ ವಾಗಿದ್ದ ರಿಂದ ಅದೆಷ್ಟೋ ಜನ ಮಳೆಯಲ್ಲಿ ನೆನೆದುಕೊಂಡೇ ಮನೆಯತ್ತ ಹೆಜ್ಜೆ ಹಾಕಿದ್ದು ಕಂಡು ಬಂದಿತು. ಯುವಕರು ಕೆಲವು ಬೈಕ್‍ಗಳಲ್ಲಿ ಹಾಗೂ ನಡೆದು ಹೋಗುವಾಗ ಪೀಪಿ ಊದುತ್ತಾ ಸಂಭ್ರಮಿಸಿದರು.

`ಅಂಬಾರಿ’ ಪ್ರಯಾಣ: `ಅಂಬಾರಿ’ ವಿಶೇಷ ಬಸ್ ಸೇವೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇಂದೂ ಸಹ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಅತ್ತ ಅರಮನೆ ಅಂಗಳದಲ್ಲಿ ಅಂಬಾರಿ ಮೆರವಣಿಗೆ ಮುಕ್ತಾಯವಾಗುತ್ತಿದ್ದಂತೆ ಇತ್ತ ಎಲ್ಲಾ `ಅಂಬಾರಿ’ ಬಸ್‍ಗಳೂ ರಸ್ತೆಗಳಿದಿದ್ದವು. ಮಳೆಯಲ್ಲೇ `ಅಂಬಾರಿ’ ಟಾಪ್‍ನಲ್ಲಿ ನಿಂತು ಮೈಸೂರು ಸೊಬಗು ಸವಿದರು. ಕೆಲವರು ಮಾತ್ರ ಕೊಡೆ ಆಶ್ರಯ ಪಡೆದಿ ದ್ದರು. ಯುವಜನ, ಮಕ್ಕಳು, ದಂಪತಿ ಸೇರಿದಂತೆ ಬಹುತೇಕ ಮಂದಿ ಮಳೆಯಲ್ಲಿ ತೊಯ್ದು, ಖುಷಿಪಟ್ಟರು.

Translate »