ಮುಡಾ ಗುಂಪು ಮನೆ ಯೋಜನೆಗೆ ಉತ್ತಮ ಪ್ರತಿಕ್ರಿಯೆ
ಮೈಸೂರು

ಮುಡಾ ಗುಂಪು ಮನೆ ಯೋಜನೆಗೆ ಉತ್ತಮ ಪ್ರತಿಕ್ರಿಯೆ

October 16, 2021

ಮೈಸೂರು, ಅ.15(ಎಂಕೆ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮಹತ್ವಾಕಾಂಕ್ಷೆಯ ‘ಗುಂಪು ಮನೆ ಯೋಜನೆ’ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, 35 ಸಾವಿರಕ್ಕೂ ಹೆಚ್ಚು ಮಂದಿ ಬೇರೆ ಬೇರೆ ವಿಧಾನದಲ್ಲಿ ಅಭಿಪ್ರಾಯ ನೀಡಿದ್ದಾರೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.

ಗುಂಪು ಮನೆ ಯೋಜನೆಗೆ ಮುಡಾದಿಂದ ಡಿಪಿಆರ್ ಸಿದ್ದವಾಗಿದ್ದು, ಸರ್ಕಾರದ ಅನುಮೋದನೆ ಬಳಿಕ ಚಾಲನೆ ದೊರಕ ಲಿದೆ. ವಿಜಯನಗರ 2ನೇ ಹಂತದ ರಿಂಗ್ ರಸ್ತೆ ಬಳಿ 4 ಎಕರೆ ಜಾಗದಲ್ಲಿ 560 ಮನೆ, ದಟ್ಟಗಳ್ಳಿಯ 3.08 ಎಕರೆ ಜಾಗದಲ್ಲಿ 392 ಮನೆ ಹಾಗೂ ಸಾತಗಳ್ಳಿ ಬಡಾವಣೆಯಲ್ಲಿ 1008 ಮನೆ ಸೇರಿದಂತೆ 1960 ಮನೆ(ಯೂನಿಟ್)ಗಳನ್ನು ನಿರ್ಮಿಸಲು ಉದ್ದೇ ಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೂರು ಬಡಾವಣೆ ಗಳು ರಿಂಗ್ ರಸ್ತೆ ಒಳಗಿನ ಜನವಸತಿ ಪ್ರದೇಶವಾಗಿದ್ದು, ಗುಂಪು ಮನೆ ಯೋಜನೆಗೆ ಸೂಕ್ತ ಸ್ಥಳವಾಗಿದೆ. ಮೂಲಭೂತ ಸೌಕರ್ಯ ಗಳನ್ನು ಒದಗಿಸಲಾಗುವುದು. ಗುಂಪು ಮನೆಯಲ್ಲಿ ಸೋಲಾರ್ ಅಳವಡಿಸಿ ಎನರ್ಜಿ ಉಳಿಸಲಾಗುವುದು. ವಾಟರ್ ಮ್ಯಾನೇಜ್ ಮೆಂಟ್, ತ್ಯಾಜ್ಯ ವಿಲೇವಾರಿಗೆ ಸೂಕ್ತ ವಿಧಾನ ಅನುಸರಿಸ ಲಾಗುವುದು. ಸದ್ಯ 1 ಬಿಹೆಚ್‍ಕೆ ಮನೆಗೆ 16 ಲಕ್ಷ ರೂ., 2 ಬಿಹೆಚ್‍ಕೆ(5.34 ಚದರ) ಮನೆಗೆ 29 ಲಕ್ಷ ರೂ. ಹಾಗೂ 2 ಬಿಹೆಚ್‍ಕೆ(5.64 ಚದರ) ಮನೆಗೆ 33 ಲಕ್ಷ ರೂ. ಡಿಮ್ಯಾಂಡ್ ಸರ್ವೆ ಮಾಡಲಾಗಿದ್ದು, 35 ಸಾವಿರಕ್ಕೂ ಹೆಚ್ಚು ಮಂದಿಯಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಮನೆ ಹಂಚಿಕೆಯಾಗುತ್ತಿದ್ದಂತೆ ಬ್ಯಾಂಕಿನಿಂದ ಸಾಲ-ಸೌಲಭ್ಯ ದೊರೆಯಲಿದೆ. ಅಪಾರ್ಟ್‍ಮೆಂಟ್ ಕಲ್ಚರ್ ಮೈಸೂರಿನಲ್ಲಿ ಮುನ್ನಲೆಗೆ ಬಂದಿದ್ದು, ಖಾಸಗಿ ಸಂಸ್ಥೆಗಳು ನಿರ್ಮಾಣ ಮಾಡುವ ಮೂಲ ಸವಲತ್ತುಗಳ ಮಾದರಿಯಲ್ಲೇ ಮುಡಾದ ಗುಂಪು ಮನೆಗಳು ಸಹ ನಿರ್ಮಾಣವಾಗಲಿವೆ. ಈ ಮೂಲಕ ಸರ್ಕಾರಿ ದರದಲ್ಲಿ ಖಾಸಗಿ ಸವಲತ್ತುಗಳು ನಾಗರಿಕರಿಗೆ ಲಭಿಸಲಿದ್ದು, ಪ್ರಾಧಿಕಾರ ಜನರ ವಿಶ್ವಾಸ ಗಳಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »