ಸೊರಗಿದ್ದ ಬೀದಿಬದಿ ವ್ಯಾಪಾರಿಗಳ ಮೊಗದಲ್ಲಿ ಅಂತೂ ಸಂತಸ
ಮೈಸೂರು

ಸೊರಗಿದ್ದ ಬೀದಿಬದಿ ವ್ಯಾಪಾರಿಗಳ ಮೊಗದಲ್ಲಿ ಅಂತೂ ಸಂತಸ

October 16, 2021

ಮೈಸೂರು, ಅ.15(ವೈಡಿಎಸ್)- ಕೊರೊನಾದಿಂದಾಗಿ ವ್ಯಾಪಾರವಿಲ್ಲದೆ ನಿರಾಶೆ ಗೊಂಡಿದ್ದ ಬೀದಿಬದಿ ವ್ಯಾಪಾರಿಗಳು ಶುಕ್ರವಾರ ಅರಮನೆ ಸುತ್ತ-ಮುತ್ತ ಭರ್ಜರಿ ವ್ಯಾಪಾರ ನಡೆಸಿದರು.

ಕಡಲೆಕಾಯಿ, ಚುರುಮುರಿ, ಸೌತೆ ಕಾಯಿ, ಬೊಂಬಾಯಿ ಮಿಠಾಯಿ, ಐಸ್‍ಕ್ರೀಮ್ ಮತ್ತಿತರೆ ವ್ಯಾಪಾರಿಗಳು ಜೀವನ ನಡೆಸುವುದೇ ದುಸ್ತರ ವಾಗಿತ್ತು. ಲಾಕ್‍ಡೌನ್ ಸಡಿಲಿಕೆಯಿಂದಾಗಿ ಈಗಷ್ಟೇ ಜೀವನ ನಿರ್ವಹಣೆಗೆ ದಾರಿ ಹುಡುಕುತ್ತಿ ದ್ದರು. ಈ ದಸರಾದಲ್ಲೂ ಹೆಚ್ಚಿನ ವ್ಯಾಪಾರವಾಗದಿದ್ದರೂ ಜೀವನ ನಿರ್ವಹಣೆಗೆ ತೊಂದರೆ ಇಲ್ಲ ಎಂದು ಬಾಂಬೆ ಮಿಠಾಯಿ ವ್ಯಾಪಾರಿ ಲಕ್ಷ್ಮಣ್ ಸಮಾಧಾನಪಟ್ಟರು.
ಸೌತೆಕಾಯಿ ವ್ಯಾಪಾರಿ ಸವಿತಾ ಮಾತನಾಡಿ, 2 ವರ್ಷದ ಹಿಂದಿನ ದಸರಾ ಜಂಬೂ ಸವಾರಿಗೆ ಹೊಲಿಸಿದರೆ ಇಂದಿನ ವ್ಯಾಪಾರ ಕಡಿಮೆಯೇ. ಆದರೂ ಕೊರೊನಾ ಲಾಕ್ ಡೌನ್ ಸಡಿಲಿಕೆ ಬಳಿಕ ಇಷ್ಟು ಹಣ ಕಂಡಿರುವುದು ಇದೇ ಮೊದಲು. ನಿತ್ಯ 200 ರೂ. ವ್ಯಾಪಾರ ಮಾಡುವುದು ಕಷ್ಟವಾಗಿತ್ತು. ಆದರೆ, ಇಂದು ಮಧ್ಯಾಹ್ನದ ವೇಳೆಗೆ 500 ರೂ. ವ್ಯಾಪಾರವಾಗಿದೆ. ಸಂಜೆವರೆಗೆ ಇನ್ನಷ್ಟು ವ್ಯಾಪಾರವಾಗಬಹುದು ಎಂದು ಸಂತಸಪಟ್ಟರು.
ಪಾನಿಪುರಿ ವ್ಯಾಪಾರಿ ಅಂಬರೀಶ್ ಪಾಂಡೆ ಮಾತನಾಡಿ, ಇದುವರೆಗಿನ ಪ್ಯಾಪಾರಕ್ಕೆ ಹೋಲಿಸಿದರೆ ಇಂದು ಹೆಚ್ಚಿದೆ. ಪ್ರತಿ ದಿನ ಹೀಗೆಯೇ ವ್ಯಾಪಾರವಾದರೆ ಆರ್ಥಿಕ ತೊಂದರೆ ನೀಗಲಿದೆ ಎಂದು ಹೇಳಿದರು. ಅಲ್ಲದೆ ಕಡಲೆಕಾಯಿ ವ್ಯಾಪಾರಿ ಶ್ರೀನಿವಾಸ್, ಮತ್ತಿತರೆ ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸಿರುವುದಾಗಿ ಹೇಳಿದರು.

Translate »