ಸರಳ ದಸರಾ: ಸದ್ದು ಗದ್ದಲ ಇರಲಿಲ್ಲ…
ಮೈಸೂರು

ಸರಳ ದಸರಾ: ಸದ್ದು ಗದ್ದಲ ಇರಲಿಲ್ಲ…

October 16, 2021

ಮೈಸೂರು,ಅ.15(ಆರ್‍ಕೆಬಿ)- ಕೊರೊನಾ ಆತಂಕದಿಂದ ಸರಳ ದಸರಾ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತಗೊಳಿಸಿದ್ದರಿಂದ ಶುಕ್ರವಾರ ಮೈಸೂರಿನತ್ತ ಹೆಚ್ಚು ಜನ ಬರಲಿಲ್ಲ. ಗ್ರಾಮಾಂ ತರ ಮತ್ತು ನಗರ ಸಾರಿಗೆ ಬಸ್‍ಗಳೆಲ್ಲವೂ ಎಂದಿನಂತೆಯೇ ಓಡಾಡಿದರೂ ಜನರ ಒತ್ತಡ ಇರಲಿಲ್ಲ. ಸಂಜೆಯ ನಂತರ ಸಿಡಿಲು, ಗುಡುಗಿನ ಸಹಿತ ಮಳೆಯ ಆರ್ಭಟ ಜೋರಾಗಿಯೇ ಇತ್ತು.

ಪ್ರತೀ ವರ್ಷ ದಸರಾ ಜಂಬೂಸವಾರಿ ಮೆರವಣಿಗೆ ದಿನದಂದು ಮೈಸೂರಿಗೆ ಲಕ್ಷಾಂತರ ಮಂದಿ ಬಂದು ಸೇರುತ್ತಿದ್ದರು. ನಗರದ ತುಂಬೆಲ್ಲಾ ಜನ, ವಾಹನ. ಎಲ್ಲಾ ರಸ್ತೆಗಳಲ್ಲೂ ಜನರು ಪ್ರವಾಹ ದೋಪಾ ದಿಯಲ್ಲಿ ಬರುತ್ತಿದ್ದರು. ಆದರೆ ಕಳೆದ ವರ್ಷ ಕೋವಿಡ್ ಉಲ್ಬಣಿಸಿದ್ದರಿಂದ ಸರಳವಾಗಿ ಆಚರಿಸಲಾಗಿತ್ತು. ಅದೇ ರೀತಿ ಈ ಬಾರಿಯೂ ಸರಳ ದಸರಾ ಅರಮನೆ ಒಳಗಿನ ಜಂಬೂ ಸವಾರಿಗಷ್ಟೇ ಸೀಮಿತಗೊಳಸಿದ್ದರಿಂದ ಮೈಸೂರಲ್ಲಿ ಅಂತಹ ವಾತಾವರಣ ಕಂಡು ಬರಲಿಲ್ಲ. ಜಂಬೂ ಸವಾರಿ ಮೆರವಣಿಗೆ ಸಾಗುವ ಅರಮನೆಯಿಂದ ಬನ್ನಿಮಂಟಪ ಮೈದಾನದವರೆಗಿನ ರಸ್ತೆಯ ಇಕ್ಕೆಲಗಳಲ್ಲೂ ಮೆರವಣಿಗೆ ಕಣ್ತುಂಬಿಕೊಳ್ಳಲು ಮೊದಲೇ ಆಸನ ಹಿಡಿದು ಬಿರು ಬಿಸಿಲಲ್ಲೂ ಗಂಟೆ ಗಟ್ಟಲೆ ಕಾದು ಕುಳಿತುಕೊಳ್ಳುವ ಜನರು ಕಾಣಲಿಲ್ಲ. ಮೈಸೂರಿನ ರಸ್ತೆಗಳು ಹೆಚ್ಚಿನ ಜನಸಂದಣಿ ವಿರಳವಾಗಿತ್ತು.

ಟೌನ್‍ಹಾಲ್ ಬಳಿಯ ಚಾಮರಾಜ ವೃತ್ತ, ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಹಳೇ ಆರ್‍ಎಂಸಿ ವೃತ್ತ, ಅಬ್ದುಲ್ ಕಲಾಂ ವೃತ್ತ ಸೇರಿದಂತೆ ಮೆರವಣಿಗೆ ಸಾಗುವ ಇಕ್ಕೆಲಗಳಲ್ಲೂ ಮೆರವಣಿಗೆ ವೇಳೆ ಕೇಳಿ ಬರುತ್ತಿದ್ದ ಕೇಕೆ, ಶಿಳ್ಳೆ, ಕೂಗು, ಆಲಾಪ ಯಾವುದೂ ಕೇಳಿ ಬರಲಿಲ್ಲ. ಬ್ಯಾರಿಕೇಡ್ ತಳ್ಳಿ ಮುನ್ನುಗ್ಗಲು ಯತ್ನಿಸುತ್ತಿದ್ದ ವಾತಾವರಣವೇ ಇರಲಿಲ್ಲ.

ಹಿಂದಿನಿಂದ ಜನರ ತಳ್ಳಾಟದ ನಡುವೆ ಬ್ಯಾರಿಕೇಡ್ ಮಧ್ಯೆ ಸಿಲುಕಿ ಮಹಿಳೆಯರು, ಮಕ್ಕಳ ಚೀರಾಟ, ಅರಚಾಟ ಕೇಳಿ ಬರ ಲಿಲ್ಲ. ಪೊಲೀಸರು ಎಚ್ಚರಿಕೆ ನೀಡಿದ್ದರೂ ಅಪಾಯವನ್ನು ಲೆಕ್ಕಿಸದೆ ಮರಗಳ ಮೇಲೆ, ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸುವ ಜನರು ಕಂಡು ಬರಲಿಲ್ಲ. ಹಬ್ಬದ ಸಂಭ್ರಮದಲ್ಲಿ ವೈನ್‍ಸ್ಟೋರ್‍ಗಳಲ್ಲಿ ಕಂಠ ಪೂರ್ತಿ ಕುಡಿದು ತೂರಾಡುವ ಅಥವಾ ಚಿತ್ತಾಗಿ ಅಲ್ಲೊಬ್ಬ ಇಲ್ಲೊಬ್ಬ ಬಿದ್ದು, ಮೈಮರೆತ ವರೂ ಯಾರೂ ಕಾಣಲಿಲ್ಲ. ಕರ್ಣ ಕಠೋರ ಪೀಪಿಗಳ ಸದ್ದಿಗೆ ಪೊಲೀಸರು ಕಡಿವಾಣ ಹಾಕಿದ್ದರೂ ಅಲ್ಲಲ್ಲಿ ಕರ್ಕಶ ಪೀಪಿ ಸದ್ದು ಮಾತ್ರ ಕೇಳಿ ಬರುತ್ತಿತ್ತು.
ಹಸಿವನ್ನೂ ಮರೆತು ಸುಡು ಬಿಸಿಲಲ್ಲಿ ಮೆರವಣಿಗೆ ವೀಕ್ಷಿಸುವಾಗ ತಳ್ಳಾಟ, ನೂಕಾಟದಲ್ಲಿ ಕಂಡು ಬರುತ್ತಿದ್ದ ನೂರಾರು ಮಂದಿಯ ಚಪ್ಪಲಿಗಳ ರಾಶಿ ಇಂದು ಕಾಣಬರಲಿಲ್ಲ. ಮೆರವಣಿಗೆ ವೇಳೆ ಬಿಸಿಲ ನಡುವೆ ಬಳಲುವ ಕಲಾವಿದರಿಗೆ, ಜನರಿಗೆ ಮೆರವಣಿಗೆ ಉದ್ದಕ್ಕೂ ನೀರು, ಮಜ್ಜಿಗೆ, ಪಾನಕ, ಜ್ಯೂಸ್ ಇತ್ಯಾದಿ ವಿತರಿಸುವ ಯಾವ ಪ್ರಸಂಗವೂ ಇಂದು ಕಂಡು ಬರಲಿಲ್ಲ.

ಒಟ್ಟಾರೆ ಕೊರೊನಾ ಸಾಂಕ್ರಾಮಿಕದ 2ನೇ ಅಲೆಯ ನಿಯಂತ್ರಣ, 3ನೇ ಅಲೆ ಆತಂಕ ಈ ಬಾರಿಯ ದಸರಾ ಮೇಲೆ ಕರಿ ನೆರಳು ಬೀರಿದ್ದರಿಂದ ಹೆಚ್ಚು ಜನರು ಮೈಸೂರಿ ನತ್ತ ಬರದೇ ಮನೆಯಲ್ಲೇ ಕುಳಿತು ಟಿವಿ ಗಳಲ್ಲಿ ಅರಮನೆ ಆವರಣದಲ್ಲಿ ನಡೆದ ಜಂಬೂ ಸವಾರಿ ಮೆರವಣಿಗೆ ವೀಕ್ಷಿಸಿ ಖುಷಿಪಟ್ಟರು.

Translate »