ಜೆಡಿಎಸ್ 126 ಅಭ್ಯರ್ಥಿಗಳ ಪಟ್ಟಿ ರೆಡಿ
News

ಜೆಡಿಎಸ್ 126 ಅಭ್ಯರ್ಥಿಗಳ ಪಟ್ಟಿ ರೆಡಿ

October 19, 2022

ಬೆಂಗಳೂರು, ಅ.18(ಕೆಎಂಶಿ)-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಸಲಿರುವ ಅಭ್ಯರ್ಥಿ ಗಳ ಪಟ್ಟಿಯನ್ನು ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಜೆಡಿಎಸ್ ಪ್ರಕಟಿಸಲು ಅಣಿ ಯಾಗಿದೆ. ಪ್ರತಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಆಯ್ಕೆ ಅಂತಿಮವಾಗಿ ಪ್ರಕಟಗೊಂಡ ನಂತರ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಪರಿಪಾಠವಿತ್ತು. ರಾಷ್ಟ್ರೀಯ ಪಕ್ಷಗಳಲ್ಲಿ ಅವ ಕಾಶ ಸಿಗದವರು ಜೆಡಿಎಸ್ ಆಶ್ರಯಿಸುತ್ತಿದ್ದರು. ಆದರೆ, ಪರಿಸ್ಥಿತಿ ಬದಲಾಗಿದ್ದು, ಮುಂದಿನ ವಿಧಾನಸಭೆ ಚುನಾ ವಣೆ ಸಿದ್ಧತೆಯಲ್ಲಿ ಜೆಡಿಎಸ್ ಒಂದು ಹೆಜ್ಜೆ ಮುಂದಿದೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಈಗಾಗಲೇ 126 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿದೆ.

ಮೈಸೂರಿನಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಚುನಾವಣಾ ಸ್ಪರ್ಧಾಕಾಂಕ್ಷಿಗಳಿಗೆ ಮತ್ತು ಶಾಸಕರಿಗೆ ಕಾರ್ಯಾಗಾರ ಮಾಡಲಾಗುತ್ತದೆ. ಕಾರ್ಯಾಗಾರದಲ್ಲೇ ಅಭ್ಯರ್ಥಿಗಳ ಸಾಮಥ್ರ್ಯ ಓರೆಗೆ ಹಚ್ಚಿ ಸಮರ್ಥರಾದ ವರನ್ನು ಸ್ಪರ್ಧೆಗಿಳಿಸಲು ಉದ್ದೇಶಿಸಲಾಗಿದೆ. ಚುನಾ ವಣಾ ತಂತ್ರಗಾರಿಕೆ ಬಗ್ಗೆ ಮಾರ್ಗದರ್ಶನವನ್ನು ವರಿಷ್ಠರು ಆಕಾಂಕ್ಷಿಗಳಿಗೆ ನೀಡಲಿದ್ದಾರೆ. ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಿಡದಿ ಬಳಿಯ ತೋಟದಲ್ಲಿ ಕಾರ್ಯಾಗಾರ ನಡೆಸಿ, ಪಕ್ಷದ ಸಂಘಟನೆ ಹಾಗೂ ಚುನಾವಣೆ ಸಿದ್ಧತೆ ಕುರಿತಂತೆ ಪ್ರಶ್ನಾವಳಿ ನೀಡಲಾಗಿತ್ತು.

ಅದರ ಆಧಾರದ ಮೇಲೆ ಮೈಸೂರಿನ ಕಾರ್ಯಾಗಾರದಲ್ಲಿ ಆಕಾಂಕ್ಷಿಗಳ ಮೌಲ್ಯಮಾಪನ ಮಾಡಲಾಗುತ್ತದೆ. ಕಳೆದ ಒಂದು ವರ್ಷದ ಕಾರ್ಯವೈಖರಿ ತೃಪ್ತಿಕರವಾಗಿಲ್ಲದಿದ್ದರೆ, ಅಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಲಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪಕ್ಷದ ಎಲ್ಲಾ ನಾಯಕರು ಪಾಲ್ಗೊಳ್ಳುತ್ತಾರೆ. ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಸಮೀಕ್ಷಾ ವರದಿ ಕೂಡ ಪಡೆದುಕೊಂಡಿದೆ. ಅದನ್ನೂ ಅಭ್ಯರ್ಥಿಗಳ ಆಯ್ಕೆಗೆ ಪರಿಗಣಿಸಲಾಗುತ್ತದೆ.

ರಾಜ್ಯದ 2023ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಸ್ವಂತ ಶಕ್ತಿಯ ಮೇಲೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಮಹದಾಸೆ ಹೊಂದಿದೆ. ಅದಕ್ಕೆ ಪೂರಕ ಸಿದ್ಧತೆಯನ್ನು ಮಾಡಲಿದೆ. ಪಕ್ಷದಿಂದ ಹೊರಗೆ ಕಾಲಿಟ್ಟಿರುವ ಕೋಲಾರದ ಶ್ರೀನಿವಾಸಗೌಡ, ಗುಬ್ಬಿ ಶ್ರೀನಿವಾಸ್ ಅವರಲ್ಲದೆ, ನಾಲ್ಕೈದು ಹಾಲಿ ಶಾಸಕರಿಗೂ ವಿಧಾನಸಭೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ.

Translate »