ತನ್ವೀರ್ ಸೇಠ್‍ಗೆ ಜೆಡಿಎಸ್ ಆಹ್ವಾನ
ಮೈಸೂರು

ತನ್ವೀರ್ ಸೇಠ್‍ಗೆ ಜೆಡಿಎಸ್ ಆಹ್ವಾನ

March 1, 2021

ಮೈಸೂರು,ಫೆ.28(ಎಂಟಿವೈ)-ಮೈಸೂರು ಮೇಯರ್ ಚುನಾವಣೆ ಗೊಂದಲದಿಂದ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡರೆ ಅವರನ್ನು ಜೆಡಿಎಸ್‍ಗೆ ಆಹ್ವಾನಿಸಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇ ಶಿಸಿ ಮಾತನಾಡಿದ ಅವರು, ಪಾಲಿಕೆಯ ಅಧಿಕಾರ ಬಿಜೆಪಿ ಪಾಲಾಗುವುದನ್ನು ತಡೆಗಟ್ಟಲು ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಮೇಯರ್ ಅಭ್ಯರ್ಥಿಯನ್ನು ಬೆಂಬಲಿ ಸಿದ್ದಾರೆ. ಈ ವಿಚಾರದಲ್ಲಿ ತನ್ವೀರ್ ಸೇಠ್ ಅವರನ್ನು ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ. ಕೆಪಿಸಿಸಿ ಅಧ್ಯಕ್ಷರೇ ಮೈತ್ರಿ ಮಾಡಿಕೊಳ್ಳುವಂತೆ ಹೇಳಿರುವಾಗ ತನ್ವೀರ್ ವಿರುದ್ಧ ಮಾತನಾಡುತ್ತಿರುವುದು ವಿಷಾದನೀಯ ಎಂದರು.

ತನ್ವೀರ್ ಸೇಠ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿ ರುವ ನಾಯಕ. ಅವರನ್ನು ನಾವೆಲ್ಲಾ ಗೌರವಿಸುತ್ತೇವೆ. ಅವರೇನಾದರೂ ಜೆಡಿಎಸ್‍ಗೆ ಬರುವುದಾದರೆ ಸಂಭ್ರಮ ದಿಂದ ಬರಮಾಡಿಕೊಳ್ಳುತ್ತೇವೆ. ಕಳೆದ ಚುನಾವಣೆಯಲ್ಲಿ ಅವರ ವಿರುದ್ಧ ಸ್ಪರ್ಧಿಸಿದ್ದ ಅಬ್ದುಲ್ಲಾ ಅವರೂ ಕೂಡ ತನ್ವೀರ್ ಅವರನ್ನು ಗೌರವಿಸುತ್ತಾರೆ ಎಂದರು.

ನಮ್ಮ ಮತ್ತು ಕಾಂಗ್ರೆಸ್ ನಡುವಿನ ಹಿಂದಿನ ಒಪ್ಪಂದ ದಂತೆ ಮೇಯರ್ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ನಾವು ಸಿದ್ಧರಾಗೇ ಇದ್ದೆವು. ಆದರೆ ವಿಪಕ್ಷ ನಾಯಕ ಸಿದ್ದ ರಾಮಯ್ಯ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿದ್ದು, ನಾವು ಪ್ರತ್ಯೇಕವಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಳ್ಳಲು ಕಾರಣವಾಯಿತು. ಈ ಹಿಂದೆ ನಮ್ಮ ಪಕ್ಷದಲ್ಲೇ ಇದ್ದು, ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಶ್ರೀಧರ್ ಮತ್ತು ಸಮೀಉಲ್ಲಾ ಅವರುಗಳು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮತ್ತೋರ್ವ ಪಕ್ಷೇತರ ಸದಸ್ಯ ಮ.ವಿ. ರಾಮಪ್ರಸಾದ್ ಅವರನ್ನೂ ಮನವೊಲಿಸಿದ್ದೆವು. ಆಗ ನಮ್ಮ ಬಲ 26 ಆಗುತ್ತಿತ್ತು. ಬಿಜೆಪಿ 25ಕ್ಕೆ ಸೀಮಿತವಾಗಿ ನಾವೇ ಸ್ವತಂತ್ರವಾಗಿ ಪಾಲಿಕೆ ಅಧಿಕಾರ ಹಿಡಿಯುವ ಸಾಧ್ಯತೆ ಇತ್ತು. ಈ ಕಾರಣದಿಂದ ನಾವು ಮೈತ್ರಿಗೆ ಒಪ್ಪಿರಲಿಲ್ಲ. ಆದರೆ ಚುನಾವಣೆ ದಿನ ಬೆಳಗ್ಗೆ 11.30ರಲ್ಲಿ ಜಿ.ಟಿ.ದೇವೇಗೌಡ ಮತ್ತು ಸಂದೇಶ್ ನಾಗರಾಜ್ ಗೈರಾಗುತ್ತಾರೆ ಎಂಬುದು ಖಚಿತವಾಗುತ್ತಿದ್ದಂತೆಯೇ 11.49ರಲ್ಲಿ ನಮ್ಮ ಸ್ಥಳೀಯ ಮುಖಂಡರಿಗೆ ತೀರ್ಮಾನ ಕೈಗೊಳ್ಳುವಂತೆ ತಿಳಿಸಿದ್ದೆವು. ಅದರಂತೆ ಅವರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿ ದ್ದಾರೆ. ಇದು ಸಂಪೂರ್ಣವಾಗಿ ಸ್ಥಳೀಯ ಮುಖಂಡರ ತೀರ್ಮಾನವೇ ಹೊರತು ಪಕ್ಷದ ತೀರ್ಮಾನವಲ್ಲ ಎಂದರು.

ನನ್ನ ಜೊತೆ ಡಿ.ಕೆ.ಶಿವಕುಮಾರ್ ಮಾತನಾಡಿದರು. ಅವರು ಮೈತ್ರಿ ಮಾಡಿಕೊಳ್ಳುವಂತೆ ಮನವಿ ಮಾಡಿ ದ್ದರು. ಆದರೆ ಒಪ್ಪಂದದಂತೆ ಮೇಯರ್ ಸ್ಥಾನ ಕಾಂಗ್ರೆಸ್‍ಗೆ ನೀಡಬೇಕು ಎಂದು ಹೇಳಿದ್ದರು. ಧ್ರುವನಾರಾಯಣ್ ಅವರೂ ಕೂಡ ಇದೇ ವಿಷಯ ಹೇಳಿದ್ದರು. ಆದರೆ ಸ್ವತಂತ್ರ ವಾಗಿ ನಾವು ಪಾಲಿಕೆ ಅಧಿಕಾರ ಹಿಡಿಯುವ ಅವಕಾಶ ವಿದ್ದ ಕಾರಣ ನಾವು ಮೈತ್ರಿಗೆ ಒಪ್ಪಿರಲಿಲ್ಲ. ಆದರೆ ನಮ್ಮ ಇಬ್ಬರು ಶಾಸಕರು ಗೈರಾಗುತ್ತಾರೆ ಎಂಬುದು ತಿಳಿದ ನಂತರ ಸ್ಥಳೀಯ ಮುಖಂಡರ ತೀರ್ಮಾನಕ್ಕೆ ಬಿಟ್ಟೆವು. ಈ ಮೈತ್ರಿಯು ಜೆಡಿಎಸ್ ನಾಯಕರು ಅಥವಾ ಕಾಂಗ್ರೆಸ್ ನಾಯಕರು ಮಾಡಿಕೊಂಡಿದ್ದಲ್ಲ. ಕೊನೇ ಕ್ಷಣದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎರಡೂ ಪಕ್ಷಗಳ ಸ್ಥಳೀಯ ಮುಖಂಡರು ಮಾಡಿಕೊಂಡಿರುವ ಮೈತ್ರಿ ಎಂದರು. ಸಿದ್ದರಾಮಯ್ಯನವರು ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿದ್ದರಿಂದ ನಮ್ಮ ಶಕ್ತಿಯನ್ನು ಮೈಸೂರು ಜಿಲ್ಲೆಯಲ್ಲಿ ತೋರಿಸಲು ಪ್ರಯತ್ನ ಪಟ್ಟಿದ್ದೆವು. ಈಗ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದೇವೆ. ಜೆಡಿಎಸ್ ಅನ್ನು ಯಾರಿಂದಲೂ ನಿರ್ನಾಮ ಮಾಡಲು ಸಾಧ್ಯವಿಲ್ಲ. ಪಕ್ಷದ ಬಗ್ಗೆ ಅವಹೇಳ ನಾಕಾರಿ ಹೇಳಿಕೆ ನೀಡುವವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂಬುದಕ್ಕೆ ಇದೊಂದು ಸ್ಯಾಂಪಲ್. ಮುಂದಿನ ದಿನಗಳಲ್ಲೂ ನಮ್ಮ ಶಕ್ತಿಯನ್ನು ತೋರಿಸಲಿದ್ದೇವೆ ಎಂದರು.

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ನಾನು ಜೆಡಿಎಸ್‍ನಲ್ಲಿರುವುದರಿಂದ ನಾಯಕ ನಾಗಿದ್ದೇನೆ. ಪಕ್ಷ ಬಿಟ್ಟರೆ ನಾನು ಜೀರೋ ಆಗುತ್ತೇನೆ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದ ಅವರು, 2008ರ ಚುನಾವಣೆ ವೇಳೆ ಜೆಡಿಎಸ್‍ನಲ್ಲಿ ಯಾರಿದ್ದರೋ ಅವರಷ್ಟೇ ಈಗಲೂ ಇದ್ದಾರೆ. ಪಕ್ಷ ಸಾಧನೆಯನ್ನೂ ಮಾಡಿದೆ. ಯಾರೇ ಆಗಲೀ, ಪಕ್ಷಕ್ಕೆ ನಾನೇ ದೊಡ್ಡವನು ಎಂದು ಭಾವಿಸುವುದು ಬೇಡ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ನಮ್ಮ ನಡುವಿನ ಒಪ್ಪಂದದಂತೆ ಎರಡು ಬಾರಿ ಕಾಂಗ್ರೆಸ್ ಮತ್ತು ಮೂರು ಬಾರಿ ಜೆಡಿಎಸ್ ಮೇಯರ್ ಆಗಬೇಕು. ಮುಂದಿನ ಮೇಯರ್ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ನಾವು ಸಿದ್ಧವಾಗಿದ್ದೇವೆ. ಆದರೆ ಜೆಡಿಎಸ್ ಬಗ್ಗೆ ಕೆಲ ನಾಯಕರು ಮಾತನಾಡುವುದರ ಮೇಲೆ ಅದು ಅವಲಂಬಿಸಿರುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೇಯರ್ ರುಕ್ಮಿಣಿ ಮಾದೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಜಿಪಂ ಸದಸ್ಯರಾದ ಮಾದೇಗೌಡ, ಬೀರಿಹುಂಡಿ ಬಸವಣ್ಣ, ಮಾಜಿ ಮೇಯರ್ ತಸ್ನೀಂ, ಕಾರ್ಪೊರೇಟರ್‍ಗಳಾದ ಕೆ.ವಿ.ಶ್ರೀಧರ್, ಶೋಭಾ ಮೋಹನ್, ಪ್ರೇಮ ಶಂಕರೇಗೌಡ, ಮುಖಂಡರಾದ ಅಬ್ದುಲ್ಲಾ, ಎಂ.ಎನ್.ರಾಮು, ದ್ವಾರಕಿ, ಪ್ರಕಾಶ್ ಪ್ರಿಯದರ್ಶನ್, ಉಮಾಶಂಕರ್ ಇನ್ನಿತರರಿದ್ದರು.

 

 

Translate »