ಬೆಂಗಳೂರು, ಸೆ. 2(ಕೆಎಂಶಿ)- ಅತೀವೃಷ್ಟಿ, ಪ್ರವಾಹದಿಂದ ಉಂಟಾಗಿರುವ ಬೆಳೆ, ಆಸ್ತಿ-ಪಾಸ್ತಿ ಹಾನಿಗೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರು, ಕಲಬುರಗಿ ವಿಭಾಗದ ಪಕ್ಷದ ಮುಖಂಡ ರೊಂದಿಗೆ ವಿಡಿಯೋ ಸಂವಾದವನ್ನು ನಾಳೆ ನಡೆಸಲಿದ್ದಾರೆ.
ಜತೆಗೆ ಆ ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಕೂಡ ಸಂವಾದ ನಡೆಸಿ ಮಾರ್ಗದರ್ಶನಗಳನ್ನು ಮಾಡಲಿದ್ದಾರೆ. ನಾಳೆ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹಾಗೂ ಎಂ.ಎಲ್.ಸಿ. ತಿಪ್ಪೇಸ್ವಾಮಿ, ವಿಡಿಯೋ ಸಂವಾದ ನಡೆಸಲಿದ್ದಾರೆ. ನಾಳೆ ಬೆಳಿಗ್ಗೆ 11ಗಂಟೆಗೆ ಕಲಬುರಗಿ ವಿಭಾಗದ ಜೆಡಿಎಸ್ ಮುಖಂಡರು, ಶಾಸಕರು, ಮಾಜಿ ಸಚಿವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರೊಂದಿಗೆ ಸಂವಾದ ನಡೆಸುವರು. ಕೊರೊನಾ ಸಂಕಷ್ಟವಿರುವುದರಿಂದ ಸಭೆ, ಸಮಾರಂಭ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಡಿಯೋ ಸಂವಾದ ನಡೆಸಿ ಮಳೆ ಹಾನಿ ವಿವರ, ಸರ್ಕಾರದ ಪರಿಹಾರ ಕಾರ್ಯಗಳ ಬಗ್ಗೆ ಪಕ್ಷದ ಮುಖಂಡರಿಂದ ಮಾಹಿತಿ ಪಡೆಯಲಿದ್ದಾರೆ. ಜತೆಗೆ ಪಕ್ಷ ಸಂಘಟನೆ ಕುರಿತಂತೆ ಸಲಹೆ ಮಾರ್ಗದರ್ಶನವನ್ನು ನಾಯಕರು ಮಾಡಲಿದ್ದಾರೆ. ಈಗಾಗಲೇ ಬೆಳಗಾವಿ ಹಾಗೂ ಮೈಸೂರು ವಿಭಾಗದ ಪಕ್ಷದ ಮುಖಂಡ ರೊಂದಿಗೆ ಸಂವಾದ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.