ಬಿಜೆಪಿ ಜೊತೆ ಜೆಡಿಎಸ್ ವಿಲೀನ?
ಮೈಸೂರು

ಬಿಜೆಪಿ ಜೊತೆ ಜೆಡಿಎಸ್ ವಿಲೀನ?

December 21, 2020

ಬೆಂಗಳೂರು,ಡಿ.20-ಮುಂದಿನ ದಿನಗಳಲ್ಲಿ ರಾಜ್ಯ ರಾಜ ಕಾರಣದಲ್ಲಿ ಧೃವೀಕರಣ ನಡೆಯಲಿದ್ದು, ಒಂದು ಪಕ್ಷವೇ ಬಿಜೆಪಿ ಜೊತೆ ವಿಲೀನವಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ವಕ್ತಾರರೂ ಆದ ಪಕ್ಷದ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾ ವಳಿ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಲಿಂಬಾವಳಿ ಅವರ ಈ ಸ್ಫೋಟಕ ಮಾಹಿತಿಯು ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಲಿದೆ ಎಂಬ ವಿಶ್ಲೇಷಣೆಗೆ ಕಾರಣವಾಗಿದೆ. ಅವರ ಮಾಹಿತಿ ಆಧ ರಿಸಿ ಸುದ್ದಿ ಮಾಧ್ಯಮಗಳು ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಲಿದೆ ಎಂದು ಪ್ರಸಾರ ಮಾಡಿದವು. ಆದರೆ ಅದನ್ನು ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅಲ್ಲಗಳೆದಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಲಿಂಬಾವಳಿ, ರಾಜಕೀಯ ಧೃವೀಕರಣ ಯಾವ ರೀತಿ ಆಗುತ್ತದೆ ಎಂಬುದನ್ನು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಒಂದು ರಾಜಕೀಯ ಪಕ್ಷ ಬಿಜೆಪಿ ಜೊತೆ ವಿಲೀನವಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಜೆಡಿಎಸ್ ಬಿಜೆಪಿಯ ಬಿ-ಟೀಮ್ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಒಂದು ವೇಳೆ ಜೆಡಿಎಸ್ ಬಿ-ಟೀಮ್ ಆಗಿದ್ದರೆ, ವಿಧಾನಸಭೆ ಚುನಾವಣೆ ಬಳಿಕ ಸಿ-ಟೀಮ್ ಜೊತೆ ಯಾಕೆ ಅವರು ಹೋದರು ಎಂದು ಪ್ರಶ್ನಿಸಿದ ಲಿಂಬಾವಳಿ, ವಿಧಾನ ಪರಿಷತ್‍ನಲ್ಲಿ ನಮಗೆ ಬಹುಮತ ಇಲ್ಲ. ಹೀಗಾಗಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಆಗಲಿಲ್ಲ. ಜೆಡಿಎಸ್ ವಿಷಯಾ ಧಾರಿತವಾಗಿ ಬಿಜೆಪಿಗೆ ಸಹಕರಿಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಬಹುದು ಎಂಬ ಮಾತಿಗೆ ಪುಷ್ಠಿ ನೀಡಿದರು.

ಮೋದಿ ಅಲೆ, ಬಿಜೆಪಿ ಅಲೆ ದೇಶದಲ್ಲಿ ಇದೆ. ಸಮ್ಮಿಶ್ರ ಸರ್ಕಾರದಲ್ಲಿದ್ದವರೇ ಈಗ ಕಿತ್ತಾಡುತ್ತಿದ್ದಾರೆ. ದೇಶ, ರಾಜ್ಯದಲ್ಲಿ ಆಡಳಿತ ಸುಭದ್ರವಾಗಿದೆ ಎನ್ನುವುದರ ಸಂಕೇತವಿದು. ನಮ್ಮ ವರದಿ ಪ್ರಕಾರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಶೇ.70ರಿಂದ 80ರಷ್ಟು ಕಾರ್ಯಕರ್ತರು ಜಯ ಸಾಧಿಸುತ್ತಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್ ಚುನಾವಣೆ ಪಕ್ಷಾತೀತ ಚುನಾವಣೆಯಾಗಿದ್ದು, ಈ ಚುನಾವಣೆ ಯಲ್ಲಿ ಪಕ್ಷದ ಕಾರ್ಯಕರ್ತರು ಸಹ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಗೆ ಗ್ರಾಮ ಪಂಚಾಯತ್ ಚುನಾವಣೆ ಮಹತ್ವದ್ದು. ದೊಡ್ಡ ಸಂಖ್ಯೆಯಲ್ಲಿ ಗ್ರಾಮಕ್ಕೆ ಅನುಕೂಲ ಮಾಡುವವರು ಗೆದ್ದು ಬರಬೇಕು. ನಮ್ಮ ಪಕ್ಷದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‍ನಲ್ಲಿ ಒಳ ಜಗಳ ಪ್ರಾರಂಭ ವಾಗಿದೆ. ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಎಚ್ ಸಿ ಮಹಾದೇವಪ್ಪ ದನಿಗೂಡಿಸಿ ದ್ದಾರೆ. ಮೈತ್ರಿ ಸರ್ಕಾರದ ವೈಖರಿ ಖಂಡಿಸಿ 18 ಜನ ರಾಜೀನಾಮೆ ಕೊಟ್ಟರು. ಈಗ ರಾಜ್ಯದಲ್ಲಿ ಸ್ಥಿರ ಸರ್ಕಾರ ಇದೆ. ಸಿದ್ದರಾಮಯ್ಯ ಮೈತ್ರಿ ಸರ್ಕಾರದ ವಿರುದ್ಧವೂ ಮಾತಾಡಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಸಹ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ಹೇಳಿದರು.

ಜನವರಿ 2, 3ರಂದು ಶಿವಮೊಗ್ಗದಲ್ಲಿ ಕೋರ್ ಕಮಿಟಿ ಸಭೆ ಮತ್ತು ಪ್ರಧಾನ ಕಾರ್ಯ ದರ್ಶಿಗಳ ಸಭೆ ನಡೆಯಲಿದೆ. ಜನಪ್ರತಿನಿಧಿಗಳ ಸಮಾವೇಶ ಜ.8ರಿಂದ 11ರವರೆಗೆ ನಡೆಯ ಲಿದೆ ಎಂದರು. ಡಿ.25ರಂದು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನವಾಗಿದ್ದು ಆ ದಿನವನ್ನು ಬಿಜೆಪಿ ರೈತರ ದಿನ ಎಂದು ಆಚರಿಸಲಿದೆ. ಆ ದಿನ ಹಲವು ಕಡೆ ರೈತರ ಸಮಾವೇಶಗಳು ಆಯೋಜನೆ ಆಗಲಿದೆ. ಕೃಷಿ ಕಾಯ್ದೆಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಆ ದಿನ ಮಾಡ್ತೇವೆ. ಆ ದಿನ ಮಧ್ಯಾಹ್ನ 12 ಗಂಟೆಗೆ ಪ್ರಧಾನಿಯವರು ರೈತರನ್ನುದ್ದೇಶಿಸಿ ಮಾತಾಡ್ತಾರೆ. ಪ್ರಧಾನಿಯವರ ಭಾಷಣವನ್ನು ಜನರ ಬಳಿ ತಲುಪಿಸಲು ಅಲ್ಲಲ್ಲಿ ಟಿವಿ ಸ್ಕ್ರೀನ್‍ಗಳನ್ನು ಹಾಕುತ್ತೇವೆ ಎಂದು ವಿವರಿಸಿದರು.

 

 

Translate »