ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ನಿಧನ
ಮೈಸೂರು

ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ನಿಧನ

January 29, 2021

ಬೆಂಗಳೂರು,ಜ.28(ಕೆಎಂಶಿ)-ಮಾಜಿ ಸಚಿವ, ಜೆಡಿಎಸ್ ಶಾಸಕ ಮಲ್ಲಪ್ಪ ಚನ್ನವೀರಪ್ಪ ಮನಗೂಳಿ ನಿಧನ ಹೊಂದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಬೆಳಗಿನ ಜಾವ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ. ಮೂಲತಃ ಕೃಷಿಕರಾಗಿದ್ದ ಅವರು ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರಾಮ ಸೇವಕರಾಗಿ, ಜನರಿಂದ ಮನ್ನಣೆ ಪಡೆದು 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿ ಸಿದ್ದರು. 2018ರಲ್ಲಿ 2ನೇ ಬಾರಿ ಆಯ್ಕೆಯಾಗಿ ಕುಮಾರಸ್ವಾಮಿ ಸರ್ಕಾರ ದಲ್ಲಿ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದಾಗಲೂ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಪಂಚಾಯತ್ ರಾಜ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮನಗೂಳಿ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿ ದಿದ್ದಾರೆ. ಅಗಲಿದ ನಾಯಕನಿಗೆ ಇಂದು ವಿಧಾನಮಂಡಲದಲ್ಲಿ ಸಂತಾಪ ಸೂಚಿಸಿ, ಮೃತರ ಗೌರವಾರ್ಥ ಸದನದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ವಿಧಾನಪರಿಷತ್‍ನ ಹಾಲಿ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ, ಮಾಜಿ ಸಚಿವರು ಹಾಗೂ ಶಾಸಕರಾದ ರೇಣುಕಾ ರಾಜೇಂದ್ರನ್, ಮಾಜಿ ಸಚಿವರಾದ ಪ್ರೇಮಾನಂದ ಜೈವಂತ ಸುಬ್ರಾಯ, ಬಸವಂತರೆಡ್ಡಿ ಮೋತಕಪಲ್ಲಿ ಸೇರಿದಂತೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Translate »