`ಗಣತಂತ್ರದಲ್ಲಿ ಪತ್ರಕರ್ತರಿಗೆ ಸಹಾನುಭೂತಿ ಅವಶ್ಯವಿದೆ’
ಮೈಸೂರು

`ಗಣತಂತ್ರದಲ್ಲಿ ಪತ್ರಕರ್ತರಿಗೆ ಸಹಾನುಭೂತಿ ಅವಶ್ಯವಿದೆ’

January 30, 2021

ಮೈಸೂರು,ಜ.29(ವೈಡಿಎಸ್)-ಗಣತಂತ್ರದಲ್ಲಿ ಪತ್ರಕರ್ತರಿಗೆ ಸಹಾನುಭೂತಿ ಅವಶ್ಯವಿದೆ ಎಂದು ಪತ್ರಕರ್ತ ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು. ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ `ಮಾಧ್ಯಮ ಸೇವಾರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ `ಗಣತಂತ್ರದಲ್ಲಿ-ಮಾಧ್ಯಮದ ಪಾತ್ರ’ ವಿಷಯವಾಗಿ ಅವರು ಮಾತನಾಡಿದರು.

ಸಂವಿಧಾನದಲ್ಲಿ ತಿಳಿಸಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರ ಮನೋಭಾವವನ್ನು ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರವೇನು? ಎಂಬ ಕುರಿತು ಚರ್ಚಿಸಬೇಕಿದೆ. ಅಸಮಾನತೆ ಹೆಚ್ಚಿರುವ ಮತ್ತು ಮಾನವಹಕ್ಕುಗಳ ಉಲ್ಲಂಘನೆ ಆಗುತ್ತಿರುವ ವೇಳೆ ಮಾಧ್ಯಮ ಗಳ ಜವಾಬ್ದಾರಿ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದರು.

ಜಾಗತಿಕ ಮಟ್ಟದ ಹಸಿವು ಸೂಚ್ಯಂಕದಲ್ಲಿ 107 ದೇಶಗಳಲ್ಲಿ ಈ ವರ್ಷ ಭಾರತ 94ನೇ ಸ್ಥಾನದಲ್ಲಿದೆ. ವಾಯುಮಾಲಿನ್ಯ ವಿಚಾರದಲ್ಲಿ 180 ದೇಶಗಳಲ್ಲಿ 179ನೇ ಸ್ಥಾನದಲ್ಲಿದೆ. ಸಮಾ ನತೆಯಲ್ಲಿ 150 ದೇಶಗಳಲ್ಲಿ 147ನೇ ಸ್ಥಾನದಲ್ಲಿದೆ. ಪರಿಸರ ವಿಷಯದಲ್ಲಿ 180 ದೇಶಗಳಲ್ಲಿ 167ನೇ ಸ್ಥಾನದಲ್ಲಿದೆ. ಭಾರತ ಜಾಗತಿಕ ಮಟ್ಟದಲ್ಲಿ ಕಳಪೆ ಸ್ಥಾನ ಹೊಂದಿದ್ದರೂ ಯಾವ ಮಾಧ್ಯಮಗಳೂ ಬಿತ್ತರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೈವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಮಾತನಾಡಿ, ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಂತೆ ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಮುದ್ರಣ ಮಾಧ್ಯಮ ಅಗಾಧವಾಗಿ ಬೆಳೆದಿದೆ. ಪತ್ರಿಕೆ, ರೇಡಿಯೊ ಮತ್ತು ದೂರದರ್ಶನ ಅತ್ಯುತ್ತಮ ಮಾಧ್ಯಮಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಅಂತ ರ್ಜಾಲ(ಇಂಟರ್‍ನೆಟ್) ಶಕ್ತಿಶಾಲಿ ಮಾಧ್ಯಮವಾಗಿದೆ. ಕೂತಲ್ಲೆ ಎಲ್ಲಾ ವಿಷಯಗಳ ಬಗೆಗೂ ತಿಳಿಯಬಹುದು ಎಂದರು.

ಅಸ್ತಿತ್ವ ಕಳೆದುಕೊಂಡಿಲ್ಲ: ಪ್ರಸ್ತುತ ಹಲವು ರೀತಿಯ ಮಾಧ್ಯಮ ಗಳಿದ್ದರೂ ಪತ್ರಿಕಾ ಮಾಧ್ಯಮ ಅಸ್ತಿತ್ವ ಕಳೆದುಕೊಂಡಿಲ್ಲ. ಬದಲಾಗಿ ಹೆಚ್ಚು ಜನಪ್ರಿಯವಾಗಿದೆ. ಪತ್ರಕರ್ತರನ್ನು ನಾವು ಆಧುನಿಕ ಸಮಾ ಜದ ಕನ್ನಡಿಯೆಂದೇ ಹೇಳಬಹುದು. ಇವರು ಸ್ಥಳೀಯ, ಹೊರಜಗತ್ತಿನ ಸುದ್ದಿಗಳನ್ನು ಸಮಾಜದ ಮುಂದಿಡುತ್ತಾರೆ. ಇದನ್ನು ಮನಗಂಡು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಪತ್ರಕರ್ತರು, ಸಂಪಾದಕರು ಹಾಗೂ ಛಾಯಾಗ್ರಾಹಕರನ್ನು ಅಭಿನಂದಿಸುತ್ತಿರು ವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಪತ್ರಿಕಾ ಛಾಯಾಗ್ರಾಹಕಿ ಬಿ.ಆರ್.ಸವಿತಾ, ಪತ್ರಕರ್ತ ರಾದ ಚೀ.ಜ.ರಾಜೀವ್, ರಮೇಶ್ ಉತ್ತಪ್ಪ, ಅಂಶಿ ಪ್ರಸನ್ನ ಕುಮಾರ್, ಬಿ.ಸುಬ್ರಹ್ಮಣ್ಯ, ಕೆ.ಜೆ.ಲೋಕೇಶ್‍ಬಾಬು, ಎಂ.ರವಿ ಅವರಿಗೆ `ಮಾಧ್ಯಮ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವ ರಾಮು, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಸಿ.ವೆಂಕಟೇಶ್, ಮೈವಿವಿ ಕುಲಪತಿಗಳ ವಿಶೇಷಾಧಿಕಾರಿ ಚೇತನ್, ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಮತ್ತಿತರರಿದ್ದರು.

 

Translate »