ಜು.15ರಿಂದ ಹತ್ತು ದಿನ ಕಬಿನಿ  ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ
ಮೈಸೂರು

ಜು.15ರಿಂದ ಹತ್ತು ದಿನ ಕಬಿನಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ

July 13, 2022

ಮೈಸೂರು, ಜು.12(ಎಂಕೆ)- ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಲ್ಲಿರುವ ಕೆರೆಗಳಿಗೆ ಜು.15 ರಿಂದ 10 ದಿನಗಳ ಕಾಲ ನಿತ್ಯ 1 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಜಿಪಂ ಕಚೇರಿಯಲ್ಲಿ 2022ರ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಬಿನಿ ವ್ಯಾಪ್ತಿಯಲ್ಲಿ ಸುಮಾರು 129 ಕೆರೆಗಳಿದ್ದು, ಕೆರೆಗಳು ಮತ್ತು ನಾಲೆಗಳಿಗೆ ನೀರು ತುಂಬಿಸಲು ನಿರ್ಧರಿಸಲಾಗಿದೆ. ಈಗಾಗಲೇ ಕೆರೆಗಳು ಶೇ.30ರಷ್ಟು ನೀರು ತುಂಬಿದ್ದು, ಕೃಷಿಗೆ ಅನುಕೂಲ ವಾಗುವಂತೆ 10 ದಿನ ಕೆರೆಗಳಿಗೆ ನೀರು ಹರಿಸಿ ನಂತರ ನಾಲೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿ ಸಲಾಗಿದೆ ಎಂದರು. ಜು.15 ರಿಂದ 24ರವರೆಗೆ ಕೆರೆ ಗಳಿಗೆ ಹಾಗೂ ಜು.25ರಿಂದ ಆ.14ರವರೆಗೆ ನಾಲೆ ಗಳಿಗೆ ನೀರು ಹರಿಸಲಾಗುವುದು.

ಆಗಸ್ಟ್ 15ರಿಂದ ಕಟ್ಟು ಪದ್ಧತಿ(20 ದಿನ ಆನ್ ಮತ್ತು 10 ದಿನ ಆಫ್)ಯಲ್ಲಿ ನೀರು ಹರಿಸಲಾಗುವುದು ಎಂದು ತಿಳಿಸಿದರು. ಕಬಿನಿ ಜಲಾಶಯದಲ್ಲಿ 1,08,060, ಹುಲ್ಲಹಳ್ಳಿ ಅಣೆಕಟ್ಟು ನಾಲೆ ಭಾಗದಲ್ಲಿ 14,309 ಎಕರೆ ಪ್ರದೇಶ ಸೇರಿದಂತೆ 1,22,369 ಎಕರೆ ಪ್ರದೇಶವಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 129ಕ್ಕೂ ಹೆಚ್ಚು ಕೆರೆಗಳಿವೆ. ಬಾರ್ಡರ್‍ನಲ್ಲಿರುವ ಕೆರೆಗಳು ಭರ್ತಿಯಾಗುವಂತೆ ನೋಡಿಕೊಳ್ಳಲಾಗುವುದು. ಕಳೆದ ವರ್ಷವೂ ಕಡೆ ಭಾಗದ ಕೆರೆಗಳಿಗೂ ನೀರು ಹರಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಜು.12ರ ಅಂಕಿ-ಅಂಶದಂತೆ ಜಲಾಶಯದ ನೀರಿನ ಮಟ್ಟ 2282.51 ಅಡಿಗಳಷ್ಟಿದ್ದು, 8.74 ಟಿಎಂಸಿ ನೀರಿನ ಸಂಗ್ರಹಣೆ ಇದೆ. 34 ಸಾವಿರ ಕ್ಯೂಸೆಕ್ಸ್ ಒಳ ಹರಿವಿದ್ದು, 35,333 ಕ್ಯೂಸೆಕ್ಸ್ ಹೊರ ಹರಿವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಿತ್ತನೆ ಬೀಜಗಳ ಕೊರತೆಯಿಲ್ಲ: ಬೆಳೆಗಳಿಗೆ ಅಗತ್ಯ ನೀರು ಪೂರೈಕೆ ಜೊತೆಗೆ ಬೆಳೆಗಳಿಗೆ ಬೇಕಾದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ಬೆಳೆಗಳಿಗೆ ಬೇಕಾದಷ್ಟು ನೀರಿನ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಶಾಸಕರಾದ ಅಶ್ವಿನ್ ಕುಮಾರ್, ಹರ್ಷವರ್ಧನ್, ಮೈಸೂರು ಡಿಸಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ, ಚಾಮರಾಜನಗರ ಡಿಸಿ ಚಾರುಲತಾ ಸೋಮಲ್, ಚಾ.ನಗರ ಜಿಪಂ ಸಿಇಒ ಗಾಯತ್ರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Translate »