ಕೊಡಗು ಮಳೆ ಹಾನಿ ಪ್ರದೇಶಕ್ಕೆಸಿಎಂ ಬೊಮ್ಮಾಯಿ ಭೇಟಿ
ಕೊಡಗು

ಕೊಡಗು ಮಳೆ ಹಾನಿ ಪ್ರದೇಶಕ್ಕೆಸಿಎಂ ಬೊಮ್ಮಾಯಿ ಭೇಟಿ

July 13, 2022

ಮಡಿಕೇರಿ, ಜು.12-ಕೊಡಗು ಜಿಲ್ಲಾ ವ್ಯಾಪ್ತಿ ಯಲ್ಲಿ ಕಳೆದ ಎರಡು ವಾರಗಳಿಂದ ಧಾರಾಕಾರ ಮಳೆ ಸುರಿದಿದ್ದು, ಇದರಿಂದ ಉಂಟಾಗಿರುವ ಹಾನಿ ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲನೆ ನಡೆಸಿ, ಸಂತ್ರಸ್ತರಿಗೆ ಅಗತ್ಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.
ಕುಶಾಲನಗರ ಕೊಪ್ಪ ಮೂಲಕ ಕೊಡಗಿಗೆ ಆಗಮಿಸಿದ ಸಿ.ಎಂ. ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಕಂದಾಯ ಸಚಿವ ಅಶೋಕ್, ಸಂಸದ ಪ್ರತಾಪ ಸಿಂಹ, ಜಿಲ್ಲೆಯ ಶಾಸಕರುಗಳಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚು ರಂಜನ್ ಅವರೊಂದಿಗೆ ಜಿಲ್ಲಾ ಕೇಂದ್ರ ಮಡಿಕೇರಿಯ ಮಲ್ಲಿಕಾರ್ಜುನನಗರದಲ್ಲಿ ಮಳೆಯಿಂದ ಕುಸಿದ ಗೋಪಾಲ ಎಂಬುವರ ಮನೆಯನ್ನು ವೀಕ್ಷಿಸಿದರು.
ಇದೇ ವೇಳೆ ಸಂತ್ರಸ್ತ ಗೋಪಾಲ ಕುಟುಂಬದವರಿಗೆ 95 ಸಾವಿರ ರೂ.ಗಳ ಪರಿಹಾರದ ಚೆಕ್ ವಿತರಿಸಿದರು.

ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮದೆನಾಡು ಸಮೀಪದ ಕರ್ತೋಜಿಯಲ್ಲಿ ಹೆದ್ದಾರಿ ಹಾನಿ ಪ್ರದೇಶಕ್ಕೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೆದ್ದಾರಿ ಉಬ್ಬಿಗೆ ಕಾರಣದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೊಯನಾಡು ಗಣಪತಿ ದೇವಾಲಯದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿದ ಸಿಎಂ, ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು. ಬಳಿಕ ಮನೆಹಾನಿಗೆ ಒಳಗಾದ ಕುಟುಂಬಕ್ಕೆ ಮುಖ್ಯಮಂತ್ರಿಗಳು ಪರಿಹಾರದ ಚೆಕ್ ವಿತರಿಸಿದರು.
ಮಡಿಕೇರಿಯ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಮಳೆಯಿಂದ ಆಗಿರುವ ಹಾನಿಯ ಕುರಿತು ಮಾಹಿತಿ ಪಡೆದರು. ಎನ್.ಡಿ.ಆರ್.ಎಫ್ ರಕ್ಷಣಾ ತಂಡದ ಉಸ್ತುವಾರಿ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಹಿಸಬೇಕು. ಚೆಸ್ಕಾಂ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಜವಾಬ್ದಾರಿ ಹೊರಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ರಸ್ತೆಗಳ ದುರಸ್ತಿ: ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿ.ಎಂ. ಬಸವರಾಜ ಬೊಮ್ಮಾಯಿ, ಕೇವಲ ಒಂದೆರಡು ವಾರಗಳ ಅಂತರದಲ್ಲಿ ಭಾರೀ ಮಳೆಯಾಗಿರುವುದು ಸಾಕಷ್ಟು ಆಸ್ತಿ ಪಾಸ್ತಿಗಳ ಹಾನಿಗೆ ಕಾರಣವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದ ಸಾಕಷ್ಟು ಮನೆಗಳಿಗೆ, ಜಿಲ್ಲೆಯ ಪ್ರಮುಖ ರಸ್ತೆಗಳಿಗೆ ಹಾನಿಯಾಗಿದೆ. ಕೆಲವೆಡೆ ನದಿಗಳಲ್ಲಿ ಸೇತುವೆಗಳಿಗೆ ಮರಗಳು ಸಿಲುಕಿಕೊಂಡು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮತ್ತೆ ಹಲವಷ್ಟು ಕಡೆಗಳಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಇವೆಲ್ಲವುಗಳ ದುರಸ್ತಿಗೆ ಆದೇಶ ಮಾಡಲಾಗಿದೆ ಎಂದು ಹೇಳಿದರು.

ಮನೆ ಕುಸಿತಕ್ಕೆ 5 ಲಕ್ಷ: ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.114ರಷ್ಟು ಹೆಚ್ಚಿನ ಮಳೆಯಾಗಿರುವುದರಿಂದ ಸಾಕಷ್ಟು ಹಾನಿ ಸಂಭವಿಸಿದೆ. ಲಭ್ಯ ಮಾಹಿತಿಯಂತೆ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ಕುಸಿದಿದ್ದರೆ, 15 ಮನೆಗಳಿಗೆ ತೀವ್ರ ಹಾನಿ ಸಂಭವಿಸಿದೆ. 63 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಜನರ ಸಂಕಷ್ಟಗಳ ನಿವಾರಣೆಗಾಗಿ ಪೂರ್ಣ ಮನೆ ಕುಸಿದಿರುವ ಪ್ರಕರಣಗಳಲ್ಲಿ 5 ಲಕ್ಷ ರೂ. ಪರಿಹಾರ, ತೀವ್ರ ಹಾನಿಗೆ 3 ಲಕ್ಷ ರೂ. ಮತ್ತು ಭಾಗಶಃ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆಯೆಂದು ತಿಳಿಸಿದರು.

ಶೀಘ್ರವೇ ಮನೆಗಳ ವಿತರಣೆ: 4 ವರ್ಷಗಳ ಹಿಂದೆ 2018 ಮತ್ತು 19ನೇ ಸಾಲಿನ ಮಹಾಮಳೆÉ ಮತ್ತು ಪ್ರಾಕೃತಿಕ ವಿಕೋಪಗಳಿಂದ ಮನೆಗಳನ್ನು ಕಳೆದುಕೊಂಡವರಿಗೆ ಇಲ್ಲಿಯವರೆಗೆ 830 ಮನೆಗಳನ್ನು ನೀಡಲಾಗಿದೆ. ಇನ್ಫೋಸಿಸ್ ಸಂಸ್ಥೆಯು ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸುತ್ತಿದ್ದು, ಮುಂದಿನ ಒಂದೂವರೆ ತಿಂಗಳ ಒಳಗಾಗಿ ಒಟ್ಟು 195 ಮನೆಗಳನ್ನು ಸಂತಸ್ತರಿಗೆ ಒದಗಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

Translate »