ಬೆಂಗಳೂರು, ಮಾ.5(ಕೆಎಂಶಿ)- ಕೃಷಿ ಮತ್ತು ತೋಟಗಾರಿಕೆಯನ್ನು ಉದ್ಯಮವಾಗಿ ಪರಿಗಣಿಸಲು ನೂತನ ಕೃಷಿ ನೀತಿಯನ್ನು ಜಾರಿಗೊಳಿಸುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರಕಟಿ ಸಿದ್ದಾರೆ. ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಮುಖ್ಯಮಂತ್ರಿಯವರು ನೀರಿನ ಭದ್ರತೆ, ಭೂ ಸಂಚಯ ಮತ್ತು ಸಾಮೂ ಹಿಕ ಕೃಷಿ ಪ್ರೋತ್ಸಾಹಿಸಲು, ಸೂಕ್ಷ್ಮ ನೀರಾವರಿ, ಉತ್ತೇಜನ, ಕೃಷಿ ಉತ್ಪನ್ನ ಸಂಸ್ಕರಣೆ, ಮಾರುಕಟ್ಟೆಯ ಪ್ರೋತ್ಸಾಹ ಹಾಗೂ ಕೃಷಿ ಮತ್ತು ತೋಟಗಾರಿಕೆಯನ್ನು ಉದ್ಯಮವಾಗಿ ಪರಿಗಣಿಸಲು ಈ ನೀತಿ ನೆರವಾಗಲಿದೆ ಎಂದಿ ದ್ದಾರೆ. ವಿಶ್ವಬ್ಯಾಂಕ್ ಪ್ರಾಯೋಜಿತ ಸುಜಲ 3ನೇ ಹಂತದ ಯೋಜನೆಯನ್ನು 12 ಜಿಲ್ಲೆಗಳಲ್ಲಿನ ಮಳೆ ಆಶ್ರಿತ ಜಲಾನಯನ ಪ್ರದೇಶಗಳ 14 ಲಕ್ಷ ಹೆಕ್ಟೇರಿಗೂ ಹೆಚ್ಚಿನ ಪ್ರದೇಶದಲ್ಲಿ ಅನುಷ್ಠಾನಗೊಳಿಸುವುದಾಗಿ ತಿಳಿಸಿದ್ದಾರೆ. ಇದೇ ಯೋಜನೆಯಡಿ ಬಹುರಾಜ್ಯ ಜಲಾನಯನ ಅಡಿಯಲ್ಲಿ ರಾಜ್ಯವು ಮುಂದಿನ 6 ವರ್ಷ ಭಾಗವಹಿಸಲಿದ್ದು, ಇದರಿಂದ ಇನ್ನೂ 10 ಲಕ್ಷ ಹೆಕ್ಟೇರ್ ಮಳೆಯಾಧಾರಿತ ಜಲಾನಯನ ಪ್ರದೇಶ 1 ಲಕ್ಷ ಹೆಕ್ಟೇರ್‍ಗೂ ಮೀರಿದ ಜಲಾನಯನ ಅಭಿವೃದ್ಧಿ ಮತ್ತು ರೈತ ಉತ್ಪಾದಕ ಸಂಘಗಳ ಬಲವರ್ಧನೆಗೆ ಬಳಸಿಕೊಳ್ಳುವು ದಾಗಿ ಹೇಳಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೇಂದ್ರ ಸರ್ಕಾರ ನೀಡುವ ಅನುದಾನದ ಜೊತೆಗೆ ನಾವು ನೀಡುತ್ತಿರುವ ಅನುದಾನವನ್ನೂ ಮುಂದುವರೆಸುವುದಾಗಿ ಹೇಳಿದ್ದಾರೆ. ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗುವುದು. ರೈತರು ಅಧಿಕ ಬಡ್ಡಿ ದರದ ಅನೌಪಚಾರಿಕ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಇದರಿಂದ ರೈತರಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದ್ದಾರೆ. ಹವಾಮಾನ ವೈಪರೀತ್ಯದಿ ಂದಾಗಿ ಉಂಟಾಗುವ ಬೆಳೆ ನಷ್ಟವನ್ನು ಭರಿಸಲು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ರಾಜ್ಯದ ಪಾಲು 900 ಕೋಟಿ ರೂ ಒದಗಿಸಿ, ಸಕಾಲದಲ್ಲಿ ರಾಜ್ಯದ ವಿಮಾ ಪಾಲನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ. ಕೃಷಿಯಲ್ಲಿ ಕಾಲ ಕಾಲಕ್ಕೆ ಮಣ್ಣು, ನೀರು ಪರೀಕ್ಷೆ ಮತ್ತು ಇತರೆ ತಾಂತ್ರಿಕ ನೆರವಿಗಾಗಿ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಪ್ರಾರಂಭಿಸುವುದಾಗಿ ಹೇಳಿರುವ ಅವರು, ಈ ಸಂಚಾರಿ ಘಟಕಗಳು ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ, ರೈತರ ಮನೆ ಬಾಗಿಲಿನಲ್ಲೇ ಕೀಟನಾಶಕ ಹಾಗೂ ರೋಗಗಳ ಬಗ್ಗೆ ತಾಂತ್ರಿಕ ಮಾಹಿತಿ ಹಾಗೂ ಪರಿಹಾರ ಒದಗಿಸಲಿವೆ. ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ನೀರಿನಲ್ಲೇ ಕರಗುವಂತಹ ಗೊಬ್ಬರ, ಸೂಕ್ಷ್ಮ ಪೌಷ್ಟಿಕಾಂಶ, ಹೈಡ್ರೋಜಲ್ ಇತ್ಯಾದಿಗಳನ್ನು ಬಳಸಲು ನೆರವು ನೀಡುವುದಾಗಿ ಹೇಳಿದ್ದಾರೆ. ರಾಜ್ಯದ 76 ತಾಲೂಕುಗಳಲ್ಲಿ ಅಂತರ್ಜಲ ಗಂಭೀರವಾಗಿದ್ದು, ಇಲ್ಲಿ ನೀರಿನ ಕೊರತೆ ಅನುಭವಿಸುತ್ತಿದೆ. ಇಂತಹ ತಾಲೂಕುಗಳಲ್ಲಿ ಜಲಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಚಟುವಟಿಕೆಗಳಿಗಾಗಿ 4.75 ಲಕ್ಷ ಹೆಕ್ಟೇರ್‍ಗಳಿಗೆ 100 ಜಲಾನಯನ ನಿರ್ವಹಣಾ ಯೋಜನೆಗಳನ್ನು ಮಂಜೂರು ಮಾಡಿದೆ. ಅಲ್ಲದೆ, ಮುಂದಿನ 3 ವರ್ಷಗಳಲ್ಲಿ 4 ಲಕ್ಷ ಹೆಕ್ಟೇರ್‍ಗಳಲ್ಲಿನ 810 ಅತೀ ಸಣ್ಣ ಜಲಾನಯನ ಪ್ರದೇಶಗಳಲ್ಲಿ ಜಲಾವೃತ್ತ ಯೋಜನೆ ಅನುಷ್ಠಾನಗೊಳಿಸುವುದಾಗಿ ಹೇಳಿದ್ದಾರೆ.
ಸಣ್ಣ ಮತ್ತು ಅತೀ ಸಣ್ಣ ರೈತರು ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾ ವಣೆಗೊಂಡಲ್ಲಿ, ಪ್ರತಿ ಹೆಕ್ಟೇರ್‍ಗೆ 5 ಸಾವಿರ ರೂ.ಗಳಂತೆ ಗರಿಷ್ಠ 10 ಸಾವಿರ ರೂ.ಗಳ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ರಾಜ್ಯದಲ್ಲಿ ಬೆಳೆದ ಹೂವು, ಟೊಮ್ಯಾಟೋ, ಆಲೂಗಡ್ಡೆ, ಈರುಳ್ಳಿ, ಹೂಕೋಸು, ದಾಳಿಂಬೆ, ಇತ್ಯಾದಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬೈ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರದ ಕೃಷಿ ರೈಲು ಯೋಜನೆ ಸೌಲಭ್ಯ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ.
ನೀರಿನ ಮೂಲದ ಲಭ್ಯತೆ ಮತ್ತು ತಾಂತ್ರಿಕ ಅನುಕೂಲತೆ ಆಧರಿಸಿ, ಹೊಸ ಏತ ನೀರಾವರಿ ಯೋಜನೆ ಪ್ರಾರಂಭಿಸಲು ಐದು ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ.