ಕೋಟೆ ತಾಲೂಕಿನ 16 ಗ್ರಾಮ ಮೈಸೂರು ತಾಲೂಕಿಗೆ ಸೇರಲಿ ಸರ್ಕಾರಕ್ಕೆ ಕರ್ನಾಟಕ ಪ್ರಜಾ ಪಾರ್ಟಿ ಅಧ್ಯಕ್ಷ ಬಿ.ಶಿವಣ್ಣ ಮನವಿ
ಮೈಸೂರು

ಕೋಟೆ ತಾಲೂಕಿನ 16 ಗ್ರಾಮ ಮೈಸೂರು ತಾಲೂಕಿಗೆ ಸೇರಲಿ ಸರ್ಕಾರಕ್ಕೆ ಕರ್ನಾಟಕ ಪ್ರಜಾ ಪಾರ್ಟಿ ಅಧ್ಯಕ್ಷ ಬಿ.ಶಿವಣ್ಣ ಮನವಿ

October 19, 2020

ಮೈಸೂರು, ಅ.18(ಪಿಎಂ)- ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿಗೆ ಸೇರಿದ 16 ಗ್ರಾಮಗಳನ್ನು ಮೈಸೂರು ತಾಲೂಕು ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಳಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ಅಧ್ಯಕ್ಷ ಬಿ.ಶಿವಣ್ಣ ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ 16 ಗ್ರಾಮಗಳು ಕೋಟೆ ತಾಲೂಕು ಕೇಂದ್ರಕ್ಕೆ 50 ಕಿ.ಮೀ.ಗಳಷ್ಟು ದೂರದಲ್ಲಿವೆ, ಮೈಸೂರಿಗೆ 15-20 ಕಿ.ಮೀ.ಗಳಷ್ಟು ಸಮೀಪದಲ್ಲಿವೆ. ಈ ಗ್ರಾಮಗಳ ಜನತ ಎಲ್ಲಾ ವಹಿವಾಟು ಮೈಸೂರು ತಾಲೂಕಿನಲ್ಲಿ ನಡೆಯುತ್ತದೆ. ಜಮೀನು, ಆಸ್ತಿಗೆ ಸಂಬಂಧಿಸಿದ ವಿಚಾರ ಗಳಿಗಷ್ಟೇ ಈ ಗ್ರಾಮಗಳ ಜನರು ದೂರದ ಹೆಚ್‍ಡಿ ಕೋಟೆಗೆ ಹೋಗುತ್ತಾರೆ. ಹೀಗಾಗಿ ಬೆಟ್ಟದಬೀಡು, ಕಣಿಯನಹುಂಡಿ, ಜಿ.ಬಿ.ಸರಗೂರು, ಮುದ್ದಯ್ಯನಹುಂಡಿ, ಜೊಲ್ಲಯ್ಯನ ಗುಳ್ಳು, ಗೊಲ್ಲನಬೀಡು, ಕಟ್ಟೇಹುಂಡಿ, ಹಳ್ಳದಮನುಗನಹಳ್ಳಿ, ಶಿಂಡೇನಹಳ್ಳಿ, ಆಲನಹಳ್ಳಿ, ಕೃಷ್ಣಯ್ಯನಹುಂಡಿ, ಕ್ಯಾತನಹಳ್ಳಿ, ಕೊತ್ತೇಗಾಲ, ಗಂಗಡ ಹೊಸಹಳ್ಳಿ, ಮಸಣಪುರ ಮತ್ತು ಚಾಮಲಾಪುರ ಗ್ರಾಮಗಳನ್ನು ಮೈಸೂರು ತಾಲೂಕು ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ನಿಯಮ ಉಲ್ಲಂಘನೆ: ಬೆಂಗಳೂರಿನ ಆರ್‍ಆರ್ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಬಿಜೆಪಿ ಮತ್ತು ಕಾಂಗ್ರೆಸ್‍ನ ಕೆಲ ಜನಪ್ರತಿನಿಧಿಗಳು ಮತ್ತು ಸಾವಿರಾರು ಕಾರ್ಯಕರ್ತರು ಮುಖಕ್ಕೆ ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ್ದಾರೆ. ಅವರೆಲ್ಲರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೆರೆ ಸಮೀಕ್ಷೆ: ಶೀಘ್ರವೇ ನಮ್ಮ ಪಕ್ಷದ ನಿಯೋಗ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡು ನೆರೆ ಪರಿಸ್ಥಿತಿ ಸಂಬಂಧ ಸರ್ಕಾರಕ್ಕೆ ವರದಿ ನೀಡಲಿದೆ ಎಂದು ತಿಳಿಸಿದ ಶಿವಣ್ಣ, ನೆರೆ ಹಾವಳಿ ಪ್ರದೇಶದಲ್ಲಿ ಸಚಿವರು ಪ್ರವಾಸ ಕೈಗೊಂಡು ಪರಿಹಾರ ಕ್ರಮಗಳನ್ನು ಸಮ ರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಕ್ಷದ ಉಪಾಧ್ಯಕ್ಷ ಯೋಗೇಶ್, ಜಿಲ್ಲಾಧ್ಯಕ್ಷ ಬಿ.ಆರ್.ಲೋಕೇಶ್, ನಗರಾಧ್ಯಕ್ಷ ಎನ್.ಹರೀಶ್ ಗೋಷ್ಠಿಯಲ್ಲಿದ್ದರು.

 

Translate »