ಕರ್ನಾಟಕ ಶೀಘ್ರವೇ ಕೊರೊನಾ ಮುಕ್ತವಾಗಲಿದೆ: ಎಸ್.ಟಿ.ಸೋಮಶೇಖರ್ 
ಮೈಸೂರು ಗ್ರಾಮಾಂತರ

ಕರ್ನಾಟಕ ಶೀಘ್ರವೇ ಕೊರೊನಾ ಮುಕ್ತವಾಗಲಿದೆ: ಎಸ್.ಟಿ.ಸೋಮಶೇಖರ್ 

May 18, 2020

ನಂಜನಗೂಡು, ಮೇ 17(ರವಿ)-ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಕಾರ್ಖಾನೆಯ  ನೌಕರನೊಬ್ಬನಿಗೆ ತಗುಲಿದ ಕೊರೊನಾ ಸೋಂಕಿನಿಂದ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ನಂಜನಗೂಡು ಹಾಗೂ ಮೈಸೂರು ನಂಜುಂಡೇಶ್ವರನ ಆಶೀರ್ವಾದದಿಂದ ಕೊರೊನಾ ಮುಕ್ತವಾಗಿದೆ. ಶೀಘ್ರದಲ್ಲೇ ಕರ್ನಾಟಕ ಸಹ ಕೊರೊನಾ ಮುಕ್ತವಾಗಲಿ ಎಂದು ಶ್ರೀಕಂಠೇಶ್ವರನಲ್ಲಿ ಪ್ರಾರ್ಥಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಯಿ ಚಾಮುಂಡೇಶ್ವರಿ, ನಂಜುಂಡೇಶ್ವರನ ಆಶೀರ್ವಾದದಿಂದ ಮೈಸೂರು ಜಿಲ್ಲೆ ಕೊರೊನಾ ಸೋಂಕಿನಿಂದ ಪಾರಾಗಿದೆ. ಜಿಲ್ಲಾಧಿಕಾರಿಗಳು, ಪೊಲೀಸ್, ಕಾಂದಾಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಒಟ್ಟಾಗಿ ಶ್ರಮಿಸಿದ ಪರಿಣಾಮ ಮೈಸೂರು ಜಿಲ್ಲೆ ಕೊರೋನಾ ಮುಕ್ತವಾಯಿತು. ಅವರಿಗೆ ನಾನು ಅಭಿನಂದಿಸುತ್ತೇನೆ. ಶೀಘ್ರದಲ್ಲಿಯೇ ಕರ್ನಾಟಕ ಕೂಡ ಕೊರೊನಾ ಮುಕ್ತವಾಗಿ ಎಂದಿನಂತೆ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿ, ಜನರು ನೆಮ್ಮದಿ ಜೀವನ ನಡೆಸಲಿ ಎಂದು ತಾಯಿ ಚಾಮುಂಡೇಶ್ವರಿ ಹಾಗೂ ಶ್ರೀಕಂಠೇಶ್ವರನಲ್ಲಿ ಪ್ರಾರ್ಥಿಸಿರುವುದಾಗಿ ಸಚಿವರು ತಿಳಿಸಿದರು.

3ನೇ ಹಂತದ ಲಾಕ್‍ಡೌನ್ ಇಂದು ಅಂತ್ಯಗೊಳ್ಳಲಿದ್ದು, 4ನೇ ಹಂತದ ಲಾಕ್‍ಡೌನ್‍ನಲ್ಲಿ ಆರಂಭವಾಗಲಿದ್ದು, ಕೇಂದ್ರ ಸರ್ಕಾರದ ಸಲಹೆ-ಸೂಚನೆಯನ್ನು ರಾಜ್ಯ ಪಾಲಿಸಲಿದೆ. ಸೋಮವಾರದಿಂದ ರಾಜ್ಯದಾದ್ಯಂತ ಬಸ್ ಸಂಚಾರ ಆರಂಭಗೊಳ್ಳುವ ನಿರೀಕ್ಷೆಯಿದೆ. ಜುಬಿಲಂಟ್ ಕಾರ್ಖಾನೆಗೆ ಸೋಂಕು ತಗುಲಿರುವ ಬಗ್ಗೆ ವಿವಾದ ಬಗೆಹರಿದಿದ್ದು. ಕೊರೊನಾ ಔಷಧ ಉತ್ಪಾದಿಸುವ ಸಲುವಾಗಿ ಕಾರ್ಖಾನೆ ಆರಂಭಿಸಲು ಅನುಮತಿ ನೀಡುವಂತೆ ಕಾರ್ಖಾನೆ ಮಾಲೀಕರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಬಳಿ ಚರ್ಚಿಸಿದ್ದಾರೆ. ಶಾಸಕರು, ಸಚಿವರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಕಾರ್ಖಾನೆ ಮಾಲೀಕರೊಂದಿಗೆ ಮಾತನಾಡಿದ್ದು, ಕಾರ್ಖಾನೆ ಆಡಳಿತ ಮಂಡಲಿ ಸರ್ಕಾರದ ಷರತ್ತುಗಳಿಗೆ ಒಪ್ಪಿದ್ದು, ಕಾರ್ಖಾನೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದರು.

ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ದೇವಾಲಯದ ಧಾರ್ಮಿಕ ಚಟುವಟಿಕೆಯನ್ನು ನಡೆಸುವ ಸಲುವಾಗಿ ಒಳ ಆವರಣದಲ್ಲಿ ಬಾವಿ ಕೊರೆಯಲು ಅನುಮತಿ ನೀಡುವಂತೆ ಹಿಂದಿನ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿತ್ತು. ಅಲ್ಲದೆ ಮುಜರಾಯಿ ಸಚಿವರಿಗೂ ಈ ಬಗ್ಗೆ ಮನವಿ ಮಾಡಲಾಗಿತ್ತು. ಅವರೂ ಸಹ ಒಪ್ಪಿಗೆ ಸೂಚಿಸಿದ್ದರು. ತಾವು ಗಮನಹರಿಸಿ ಕೊಳವೆ ಬಾವಿ ಕೊರೆಯಲು ಅನುಮತಿ ಕೊಡಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಆರ್.ಅಶೋಕ್, ಮೈಸೂರು ಸಹಕಾರ ಸಂಘದ ಒಕ್ಕೂಟ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿ ಮುಖಂಡರಾದ ಎನ್.ಆರ್.ಕೃಷ್ಣಪ್ಪಗೌಡ, ವಿನಯ್‍ಕುಮಾರ್, ಎನ್.ಸಿ.ಬಸವಣ್ಣ, ದೇವಾಲಯದ ಇಓ ಶಿವಕುಮಾರಯ್ಯ, ದೇವಾಲಯ ವ್ಯವಸ್ಥಾಪನಾ ಸದಸ್ಯ ಶ್ರೀಧರ್ ಇದ್ದರು.

 

 

 

 

 

 

 

Translate »