ರಾಮಕೃಷ್ಣ ಆಶ್ರಮ ಸುತ್ತುಹಾಕಿ, ಅರಮನೆ ಕಣ್ತುಂಬಿಕೊಂಡ ಕಾಶ್ಮೀರಿ ಯುವಚೇತನರು!
ಮೈಸೂರು

ರಾಮಕೃಷ್ಣ ಆಶ್ರಮ ಸುತ್ತುಹಾಕಿ, ಅರಮನೆ ಕಣ್ತುಂಬಿಕೊಂಡ ಕಾಶ್ಮೀರಿ ಯುವಚೇತನರು!

March 9, 2020

ಮೈಸೂರು, ಮಾ.8(ಎಂಕೆ)- ರಾಮಕೃಷ್ಣ ಪರಮ ಹಂಸ, ಸ್ವಾಮಿ ವಿವೇಕಾನಂದ ಮತ್ತು ತಾಯಿ ಶಾರದಾ ದೇವಿ ಅವರ ಕುರಿತ ಮಹತ್ವದ ವಿಚಾರಗಳನ್ನು ಅರಿತು ಕೊಂಡ ‘ಕಾಶ್ಮೀರದ ಯುವ ಸಮೂಹ’ ಭಾನುವಾರ ವಿಶ್ವಪ್ರಸಿದ್ಧ ಮೈಸೂರು ಅರಮನೆ ಸೌಂದರ್ಯವನ್ನು ಕಣ್ತುಂಬಿಕೊಂಡಿತು.

‘ಕಾಶ್ಮೀರಿ ಯುವಜನ ವಿನಿಮಯ’ ಕಾರ್ಯಕ್ರಮದಡಿ ಮೈಸೂರಿಗೆ ಆಗಮಿಸಿರುವ ಕಾಶ್ಮೀರದ 132 ಯುವಕ-ಯುವತಿಯರು ಭಾನುವಾರ ರಾಮಕೃಷ್ಣ ಆಶ್ರಮ, ರಾಮಕೃಷ್ಣ ವಿದ್ಯಾಶಾಲೆ, ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಮತ್ತು ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ಆಶ್ರಮದ ಕಾರ್ಯವೈಖರಿ ತಿಳಿಯುವುದರ ಜತೆಗೆ ಅಲ್ಲಿನ ದಿವ್ಯತ್ರಯರ ದೇವಸ್ಥಾನಕ್ಕೆ ತೆರಳಿದಾಗ ಕೆಲವರು ಧ್ಯಾನ ಮಾಡಿದರು. ಗ್ರಂಥಾಲಯ, ರಾಷ್ಟ್ರಕವಿ ಕುವೆಂಪು ತಂಗಿದ್ದ ಕೊಠಡಿ ವೀಕ್ಷಿಸಿದರು. ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಸಮಾಜಕ್ಕೆ ದಿವ್ಯತ್ರಯರು ನೀಡಿದ ಕೊಡುಗೆ ಮತ್ತು ರಾಮಕೃಷ್ಣ ಅಶ್ರಮದ ಕಾರ್ಯ ವೈಖರಿ ಕುರಿತು ಕಾಶ್ಮೀರದ ಯುವಜನರಿಗೆ ತಿಳಿಸಿಕೊಟ್ಟರು.

ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನ ದಲ್ಲಿ ಎಲ್ಲಾ ಧರ್ಮದ ಸಾರ ‘ಶಾಂತಿ ಮತ್ತು ಅಭಿವೃದ್ಧಿ’ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ರಾಮಕೃಷ್ಣ ಆಶ್ರಮ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ತಾರತಮ್ಯ ವಿಲ್ಲದೆ ಆಧ್ಯಾತ್ಮ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.

ರಾಮಕೃಷ್ಣ ವಿದ್ಯಾಶಾಲೆ: ಬಳಿಕ ರಾಮಕೃಷ್ಣ ವಿದ್ಯಾಶಾಲೆಗೆ ಭೇಟಿ ನೀಡಿದ ಕಾಶ್ಮೀರಿಗರು, ಸಿಎನ್‍ಆರ್ ರಾವ್ ಉದ್ಘಾ ಟಿಸಿದ್ದ ‘ನಾಲೆಡ್ಜ್ ಪಾರ್ಕ್’, 1957ರಲ್ಲಿ ಪ್ರಧಾನಿ ಜವಹರ್ ಲಾಲ್ ನೆಹರು ಉದ್ಘಾಟಿಸಿದ ‘ಈಜುಕೊಳ’, ಶಾಲಾ ಗ್ರಂಥಾಲಯ ಮತ್ತು ನಿಸರ್ಗ ನಿಕೇತನದ ಸೌಂದರ್ಯ ವನ್ನು ವೀಕ್ಷಣೆ ಮಾಡಿದರು. ನಂತರ ಶಾಲಾ ಸಭಾಂಗಣ ದಲ್ಲಿ ರಾಮಕೃಷ್ಣ ವಿದ್ಯಾಶಾಲೆ ಕುರಿತ ಸಾಕ್ಷ್ಯಚಿತ್ರ ನೋಡಿ, ಪಡಶಾಲೆಯಲ್ಲಿ ಚಹಾ, ಬಿಸ್ಕತ್, ಕೇಸರಿಬಾತ್, ಉಪ್ಪಿಟ್ಟು ಸವಿದರು. ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಗೂ ತೆರಳಿ ಮಾಹಿತಿ ಪಡೆದರು.

ಅರಮನೆ ವೀಕ್ಷಣೆ: ಸಂಜೆ ವೇಳೆಗೆ ಬೆಳಕಿನ ವೈಭವ ದೊಂದಿಗೆ ಕಂಗೊಳಿಸುತ್ತಿದ್ದ ವಿಶ್ವಪ್ರಸಿದ್ಧ ಮೈಸೂರು ಅರಮನೆ ನೋಡಿದ ಕಾಶ್ಮೀರಿ ಯುವ ಸಮೂಹ ಫೋಟೊ ಕ್ಲಿಕ್ಕಿಸಿ ಕೊಂಡಿತು. ಅರಮನೆ ಆವರಣವನ್ನು ಸುತ್ತುಹಾಕಿ ಸಂಭ್ರಮಿಸಿತು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಸಿದ್ದರಾಮಪ್ಪ, ನಿವೃತ್ತ ಅಧಿಕಾರಿ ಎಸ್.ಯು.ಜಮಾದಾರ್, ಖಜಾಂಚಿ ಚಿಂದಗಿರಿಗೌಡ, ಸ್ವಯಂಸೇವಕಿ ಅನಿತ ಉಪಸ್ಥಿತರಿದ್ದರು.

Translate »