`ಮೈಸೂರು ಗೆಳೆಯರ ಬಳಗ’ ಆಯೋಜಿಸಿದ್ದ `ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ದಿನೇಶ್ ಅಮೀನ್‍ಮಟ್ಟು ನೆನಪಿನ ಝರಿ
ಮೈಸೂರು, ಮಾ.8(ಎಂಟಿವೈ)- ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ಕೀಳರಿಮೆಗೆ ಒಳ ಗಾಗಿದ್ದ ಹಲವಾರು ಮಂದಿ ಪಿ.ಲಂಕೇಶ್ ಅವರನ್ನು (ಏಕಲವ್ಯನಂತೆ) ಗುರುವಾಗಿ ಆಯ್ಕೆ ಮಾಡಿ ಕೊಂಡಿದ್ದರೆ, ಮತ್ತೆ ಕೆಲವರು ಶಿಕ್ಷಕರಂತೆ (ಮೇಷ್ಟ್ರು) ಸ್ವೀಕರಿಸಿದ್ದರು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ನೆನಪಿಸಿಕೊಂಡರು.
ಮೈಸೂರಿನ ಸಮಾನ ಮನಸ್ಕರ `ಮೈಸೂರು ಗೆಳೆಯರ ಬಳಗ’ ಕಲಾಮಂದಿರ ಆವರಣದ ಮನೆಯಂಗಳದಲ್ಲಿ ಭಾನುವಾರ ಆಯೋಜಿಸಿದ್ದ `ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಮೌನವನ್ನು ಸದಾ ದ್ವೇಷಿಸು ತ್ತಿದ್ದ ಪಿ.ಲಂಕೇಶ್, ಕನ್ನಡಕ್ಕೆ ಹೊಸ ಭಾಷಾ ನುಡಿಗಟ್ಟನ್ನು ಕೊಡುಗೆಯಾಗಿ ಕೊಟ್ಟರು. ಇಂದು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದು, ಜ್ಞಾನದ ಜಗತ್ತೇ ನಮ್ಮ ಕೈಯ್ಯಲ್ಲಿದೆ. ಆದರೆ, ಮಾರ್ಗ ತೋರುವ ಗುರುವಿಲ್ಲದೇ ಜ್ಞಾನ ಸ್ಫೋಟವಾಗು ತ್ತಿರುವುದು ಅಪಾಯಕಾರಿ ಎಂದು ವಿಷಾದಿಸಿದರು.
`ಲಂಕೇಶ್ ಪತ್ರಿಕೆ’ ಆರಂಭವಾದ ಬಳಿಕ, ಚಳವಳಿ ಗಳನ್ನು ಪತ್ರಿಕೆ ರೂಪಿಸಿತೊ? ಅಥವಾ ಚಳವಳಿ ಗಳೇ ಪತ್ರಿಕೆಯನ್ನು ರೂಪಿಸಿದವೋ? ಎಂಬ ಬಗ್ಗೆ ಜಿಜ್ಞಾಸೆ ಇದೆ. ಬದಲಾವಣೆಯ ಕಾಲ ಘಟ್ಟವಾದ 1980ರ ದಶಕ ಆದರ್ಶಗಳನ್ನು ಹುಟ್ಟು ಹಾಕುತ್ತಿದ್ದ ಕಾಲವಾಗಿತ್ತು. ಇಂದು ಆದರ್ಶಗಳ ಬಗ್ಗೆ ಮಾತನಾಡುವವರನ್ನು ಹುಚ್ಚರು ಎನ್ನಲಾಗು ತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರ್ಜುನ, ಏಕಲವ್ಯರಂತೆ ಎರಡು ಬಗೆಯ ಶಿಷ್ಯವರ್ಗವನ್ನು ಕಾಣಬಹುದು. ಇಂದು ಲಂಕೇಶ್ ಅವರಿಗೆ ಏಕಲವ್ಯರಂತಹ ದೊಡ್ಡ ಶಿಷ್ಯ ಸಮೂಹವೇ ಇದೆ. ಲಂಕೇಶ್ ತಮ್ಮ ಭಾವನೆಗಳನ್ನು ಮುಕ್ತ ವಾಗಿ ಹಂಚಿಕೊಳ್ಳುವಂತೆ ಬರೆಯುತ್ತಿದ್ದರು.
ನಮ್ಮಲ್ಲಿ ಗೊಂದಲ, ಅಸ್ಪಷ್ಟತೆ ಮೂಡಿದಾಗ ಲಂಕೇಶ್ ಪತ್ರಿಕೆಗಾಗಿ ಕಾಯುತ್ತಿದ್ದೆವು. ಇದು ಬಹಳ ಮಂದಿ ಲಂಕೇಶ್‍ರನ್ನು ಶಿಕ್ಷಕರಾಗಿ ಸ್ವೀಕರಿ ಸಲು ಕಾರಣವಾಯಿತು. ಲಂಕೇಶ್ ಉತ್ತೇಜನದ ಕಾರಣ ಎಷ್ಟೋ ಮುಸ್ಲಿಂ ಮಹಿಳೆಯರೂ ಲೇಖಕರಾಗಿ ಹೊರಹೊಮ್ಮಿದರು. ದುಗುಡ, ಆತಂಕ, ಗೊಂದಲ, ಅಸ್ಪಷ್ಟತೆಗೆ ಪರಿಹಾರ ನೀಡುವ ಅಂಶಗಳು ಅವರ ಬರಹದಲ್ಲಿರುವುದರಿಂದ ಅವರು ನಮಗೆ ಇಷ್ಟವಾಗಿದ್ದರು. ಅಂದಿನ ಕಾಲದ ಸಾಮಾ ಜಿಕ, ರಾಜಕೀಯ ವಿದ್ಯಮಾನಗಳಿಗೆ ಸ್ಪಂದಿಸುತ್ತಿದ್ದರು ಎಂದು ಸ್ಮರಿಸಿದ ಅವರು, ದೇಶದಲ್ಲಿ ಸಂವಿಧಾನ ಸುಟ್ಟಾಗ, ದÀನದ ಮಾಂಸ ಬಳಸುತ್ತಾರೆ ಎಂದು ಆರೋಪಿಸಿ ಕೆಲವರನ್ನು ಕೊಂದಾಗ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಾಗ ನಮ್ಮ ಒಳಗಿನ ಮನಸ್ಸು ಅಯ್ಯೋ ಅನ್ನಿಸಬೇಕು. ಇಲ್ಲದಿದ್ದರೆ ಮನುಷ್ಯರು ಎನಿಸಿಕೊಳ್ಳುವುದಿಲ್ಲ ಎಂದರು.
ನಮ್ಮ ಹಳ್ಳಿಯಲ್ಲಿ ನಾನೇ ಮೊದಲ ಪದವೀಧರ. ಅಲ್ಲಿನ ಮೂಢನಂಬಿಕೆ, ಜೂಜು, ಜಗಳ ಇವುಗಳ ಬಗ್ಗೆ ತಿರಸ್ಕಾರವಿತ್ತು. ಆಗ ನನ್ನ ತಾಯಿ, ನೀನು ಒಳ್ಳೆಯವನಾದರೆ ಊರು ಒಳ್ಳೆಯದಾಗಿ ಕಾಣಿಸು ತ್ತದೆ ಎಂದು ಕಿವಿಮಾತು ಹೇಳಿದರು. ಸಮಾಜ ವನ್ನು ಅರ್ಥ ಮಾಡಿಕೊಳ್ಳದ ಪರಿಸ್ಥಿತಿಯಲ್ಲಿ ಇದ್ದಾಗ ಲಂಕೇಶ್ ಅವರ `ಕಣ್ಮರೆಯಾದ ಗ್ರಾಮಗಳು’ ಹೆಚ್ಚು ಪ್ರಭಾವ ಬೀರಿತು. ಇಂದು ಯಾರಾದರೂ ಸೋತರೆ ಅಥವಾ ಸತ್ತರೆ ಅವರ ಮೇಲೆ ವಿವಾದ ಸೃಷ್ಟಿಸುವ ಬರವಣಿಗೆಯನ್ನು ಕಾಣುತ್ತೇವೆ. ಆದರೆ, ಸಂಜಯ್ ಗಾಂಧಿ, ಇಂದಿರಾ ಗಾಂಧಿ ಸತ್ತಾಗ, ಡಿ.ದೇವರಾಜ ಅರಸು ಚುನಾವಣೆಯಲ್ಲಿ ಸೋತಾಗ ಲಂಕೇಶ್ ಅವರು ಬರೆದ ಅಂಕಣ ಗಳು, ಗಣ್ಯರನ್ನು ಚುಚ್ಚುವಂತಾಗಲಿ, ವಿವಾದ ವನ್ನು ಸೃಷ್ಟಿಸುವಂತಾಗಲೀ ಇರಲಿಲ್ಲ ಎಂದು ಅಮೀನ್‍ಮಟ್ಟು ನೆನಪಿಸಿಕೊಂಡರು.
ಸಮಾಜ ಏನು ಬಯಸುತ್ತಿದೆ?: ಇಂದು ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಆದರೂ ಜನ ಎಚ್ಚೆತ್ತು ಕೊಳ್ಳುತ್ತಿಲ್ಲ. ಇಂಧನ ಬೆಲೆ ಹೆಚ್ಚಾದರೆ ಕಾರನ್ನು ಮನೆ ಮುಂದೆ ನಿಲ್ಲಿಸುತ್ತೇನೆ ಎನ್ನುತ್ತಾರೆ. ಮತ್ತೆ ಮೋದಿಗೆ ಮತ ಹಾಕುತ್ತೇನೆ ಎನ್ನುತ್ತಾರೆ. ಇಂತಹ ಮನಸ್ಥಿತಿಯನ್ನು ಹೇಗೆ ಅರ್ಥ ಮಾಡಿಕೊಳ್ಳುವುದೋ ತಿಳಿಯದಾಗಿದೆ. ಇತ್ತೀಚೆಗೆÀ ಉಪ ಚುನಾವಣೆ ಯಲ್ಲಿ ಅನರ್ಹರನ್ನು ಗೆಲ್ಲಿಸಿದ್ದಾರೆ. ಇದನ್ನು ಗಮನಿಸಿ ದರೆ ನಮ್ಮ ಪ್ರಜಾಪ್ರಭುತ್ವ ಎಲ್ಲಿಗೆ ಹೋಗಿದೆ? ಸಮಾಜ ಏನು ಬಯಸುತ್ತಿದೆ? ಎಂಬುದೇ ತಿಳಿಯು ತ್ತಿಲ್ಲ. ಹೀಗಿರುವಾಗ ನಾವು ಹೇಗೆ ಸ್ಪಷ್ಟತೆ ಕೊಡಲು ಸಾಧ್ಯ. ಲಂಕೇಶ್ ಅವರ ನೆನಪನ್ನು ಒಂದು ದಿನಕ್ಕೆ ಸೀಮಿತಗೊಳಿಸಬೇಡಿ. ನಿರಂತರವಾಗಿ ಓದಿ, ಅವರ ಬರಹ ಸ್ಪಷ್ಟತೆ ಕೊಡುತ್ತದೆ ಎಂದರು.
ಸಾಹಿತಿ ದೇವನೂರ ಮಹಾದೇವ, ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ಲೇಖಕ ಚಿನ್ನಸ್ವಾಮಿ ವಡ್ಡಗೆರೆ, ಧಾರ ವಾಡದ ಟಿ.ಎಸ್.ಗೊರವರ, ಬೆಂಗಳೂರಿನ ಹೇಮಾ ವೆಂಕಟ್, ತಿಪಟೂರಿನ ಸ್ಮಿತಾ ಮಾಕಳ್ಳಿ, ದೇವಮ್ಮಣ್ಣಿ, ಕೆ.ರೋಹಿತ್, ರೂಪಾ ಪ್ರಕಾಶನದ ಯು.ಎಸ್. ಮಹೇಶ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.