ರೆಸಾರ್ಟ್‍ನಲ್ಲಿ ತಂಗಿದ್ದವರ ಲಕ್ಷಾಂತರ ರೂ. ಚಿನ್ನಾಭರಣ ಕಳವು 24 ಗಂಟೆಯೊಳಗೆ ಖದೀಮನ ಬಂಧನ
ಮೈಸೂರು

ರೆಸಾರ್ಟ್‍ನಲ್ಲಿ ತಂಗಿದ್ದವರ ಲಕ್ಷಾಂತರ ರೂ. ಚಿನ್ನಾಭರಣ ಕಳವು 24 ಗಂಟೆಯೊಳಗೆ ಖದೀಮನ ಬಂಧನ

November 24, 2020

ಮೈಸೂರು,ನ.23(ಎಸ್‍ಬಿಡಿ)- ರೆಸಾರ್ಟ್‍ವೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿದ್ದ ಪ್ರಕರಣವನ್ನು ಹೆಚ್.ಡಿ.ಕೋಟೆ ತಾಲೂಕು ಬೀಚನಹಳ್ಳಿ ಠಾಣೆ ಪೊಲೀಸರು 24 ಗಂಟೆ ಯೊಳಗೆ ಭೇದಿಸಿದ್ದಾರೆ. ಬದನಕುಪ್ಪೆ ಗ್ರಾಮದ ಬಳಿಯಿರುವ ರೆಡ್ ಅರ್ಥ್ ರೆಸಾರ್ಟ್‍ನಲ್ಲಿ ಕಳ್ಳತನವಾಗಿದ್ದರ ಬಗ್ಗೆ ಪ್ರಕರಣ ದಾಖಲಾಗಿ ದಿನ ಕಳೆಯು ವಷ್ಟರಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬದನಕುಪ್ಪೆ ಗ್ರಾಮದ ಜಯರಾಜು(35) ಬಂಧಿತನಾಗಿದ್ದು, ಆತನಿಂದ 20 ಸಾವಿರ ರೂ. ಹಣ ಸೇರಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ದಂಪತಿ ಹಾಗೂ ಅವರ ಮಗ ರೆಡ್ ಅರ್ಥ್ ರೆಸಾರ್ಟ್‍ನಲ್ಲಿ ಉಳಿದುಕೊಂಡಿದ್ದರು. ನ.21ರಂದು ರಾತ್ರಿ ಮೂವರೂ ರೆಸಾರ್ಟ್‍ನ ಡೈನಿಂಗ್ ಹಾಲ್‍ಗೆ ಹೋಗಿ ಊಟ ಮುಗಿಸಿ ಕೊಂಡು ಕೊಠಡಿಗೆ ವಾಪಸ್ಸಾಗುವಷ್ಟರಲ್ಲಿ ಬ್ಯಾಗ್‍ನಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿತ್ತು. ಈ ಬಗ್ಗೆ ರೆಸಾರ್ಟ್ ವ್ಯವಸ್ಥಾಪಕರ ಗಮನಕ್ಕೆ ತಂದು, ಪೊಲೀಸ್ ಠಾಣೆಗೆ ನ.22ರಂದು ದೂರು ನೀಡಿ ದ್ದರು. ಪ್ರಕರಣ ದಾಖಲಿಸಿಕೊಂಡ ಬೀಚನಹಳ್ಳಿ ಪೊಲೀಸರು, ಕೂಡಲೇ ತನಿಖೆ ಕೈಗೊಂಡು, ಹ್ಯಾಂಡ್‍ಪೋಸ್ಟ್ ಬಾರ್ ಬಳಿ ಇಂದು ಬಂಧಿಸಿದ್ದಾರೆ.

ಹೆಚ್ಚುವರಿ ಚಿನ್ನಾಭರಣ ಯಾರದ್ದು?: 60 ಸಾವಿರ ರೂ. ನಗದು, ಡೈಮಂಡ್ ಪೆಂಡೆಂಟ್ ಚೈನ್, ಓಲೆ, ಬ್ರೇಸ್‍ಲೈಟ್, ಲ್ಯಾಪ್‍ಟಾಪ್ ಸೇರಿ ದಂತೆ ಒಟ್ಟು 2.84 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿ ರುವುದಾಗಿ ದಂಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಬಂಧಿತ ಆರೋಪಿಯಿಂದ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಎಸ್‍ಪಿ ಶಿವಕುಮಾರ್, ರೆಸಾರ್ಟ್‍ನಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ವಾರಸುದಾರರು ತಮ್ಮ ಚಿನ್ನಾಭರಣ ಗುರುತಿಸಿದ್ದಾರೆ. ಆರೋಪಿಯಿಂದ ವಶಪಡಿಸಿಕೊಂಡಿರುವ ಚಿನ್ನಾಭರಣದ ಬಗ್ಗೆ
ಇನ್ನೂ ವಿಚಾರಣೆ ನಡೆಸಲಾಗುತ್ತಿದೆ. ಎಂದು ತಿಳಿಸಿದ್ದಾರೆ. ಎಎಸ್ಪಿ ಶಿವಕುಮಾರ್ ಮಾರ್ಗದರ್ಶನ, ಹುಣಸೂರು ವಿಭಾಗದ ಡಿವೈಎಸ್ಪಿ ಕೆ.ಎಸ್.ಸುಂದರ್‍ರಾಜ್ ನಿರ್ದೇಶನ ದಲ್ಲಿ ಹೆಚ್.ಡಿ.ಕೋಟೆ ವೃತ್ತ ನಿರೀಕ್ಷಕ ಪುಟ್ಟಸ್ವಾಮಿ, ಬೀಚನಹಳ್ಳಿ ಠಾಣೆ ಸಬ್‍ಇನ್‍ಸ್ಪೆಕ್ಟರ್ ರಾಮಚಂದ್ರನಾಯಕ, ಸಿಬ್ಬಂದಿ ರೇವಣ್ಣ, ಬಿ.ಎಸ್.ರವಿ, ನಾಗೇಗೌಡ, ಸುರೇಶ್ ಹಾಗೂ ಹೆಚ್.ಎಂ.ಮಹದೇವಶೆಟ್ಟಿ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದೆ. ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಶ್ಲಾಘಿಸಿದ್ದಾರೆ.

Translate »