ಶ್ರೀರಂಗಪಟ್ಟಣ,ನ.22(ವಿನಯ್‍ಕಾರೇಕುರ)- ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಗ್ರಾಮ ವನ್ನು ಸರ್ಕಾರ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿದೆ. ಈ ಮೂಲಕ ಹಲವು ವರ್ಷಗಳ ಈ ಭಾಗದ ಜನರ ಮಹತ್ವಾಂಕಾಂಕ್ಷೆಯ ಕನಸು ನನಸಾಗಿದೆ. ಇದ ರೊಂದಿಗೆ ಜಿಲ್ಲೆಯ ಭೂಪಟದಲ್ಲಿ ಕೆಆರ್‍ಎಸ್ ಗ್ರಾಮ ತನ್ನದೇ ಆದ ಗ್ರಾಮ ನಕ್ಷೆಯನ್ನು ಸೇರಿಸಿಕೋಂಡಿದೆ.
ಹೋಂಗಹಳ್ಳಿ ಹಾಗೂ ಹುಲಿಕೆರೆ ಗ್ರಾಮಗಳ ಸರಹ ದ್ದನ್ನು ಮಾರ್ಪಡಿಸಿ ಕೃಷ್ಣರಾಜಸಾಗರ ಎಂಬ ಹೊಸ ಕಂದಾಯ ಗ್ರಾಮವನ್ನು ರಚಿಸಲಾಗಿದೆ. ಹೋಂಗಹಳ್ಳಿ ಗ್ರಾಮದ ಗಡಿಯೊಳಗೆ ನೆಲೆಗೊಂಡಿರುವ ಸರ್.ಎಂ ವಿಶ್ವೇಶ್ವರಯ್ಯಪುರ ಎಂಬ ದಾಖಲೆ ರಹಿತ ಜನವಸತಿ ಪ್ರದೇಶವನ್ನು ಪ್ರತ್ಯೇಕಿಸಿ ಕೃಷ್ಣರಾಜಸಾಗರ ಗಡಿಯೊಳಗೆ ಸೇರ್ಪಡೆ ಮಾಡಲಾಗಿದೆ. 110 ಎಕರೆ ವಿಸ್ತೀರ್ಣದ ಈ ಗ್ರಾಮವನ್ನು 1979ರಲ್ಲಿ ಅಧಿಸೂಚಿತ (ನೋಟಿ ಪೈ) ಪ್ರದೇಶ ಎಂದು ಘೋಷಿಸಲಾಗಿತ್ತು. ಸುಮಾರು 12 ಸಾವಿರ ಜನ ಸಂಖ್ಯೆ ಇರುವ ಕೆಆರ್‍ಎಸ್ ಜನವಸತಿ ಪ್ರದೇಶವು ಅಧಿ ಸೂಚಿತ ಪ್ರದೇಶವಾಗಿದ್ದ ಕಾರಣ
ಇಲ್ಲಿನ 1800ಕ್ಕೂ ಹೆಚ್ಚು ಮನೆಗಳಿಗೆ ಖಾತೆ ಸೇರಿದಂತೆ ಸೂಕ್ತ ದಾಖಲೆಗಳಿರಲಿಲ್ಲ. ಸರ್ಕಾರ ಇಲ್ಲಿನ ಜನರನ್ನು ಒಕ್ಕಲೆಬ್ಬಿಸಿದರೆ ಏನು ಗತಿ ಎಂಬ ಆತಂಕವೂ ಸ್ಥಳೀಯ ಜನರಲ್ಲಿ ಮನೆ ಮಾಡಿತ್ತು. ಈ ವೇಳೆ ಈ ಭಾಗದ ಜನರು ಚುನಾವಣೆ ವೇಳೆ ರವೀಂದ್ರ ಶ್ರೀಕಂಠಯ್ಯ ಅವರಿಗೆ ಮನವಿ ಮಾಡಿದಾಗ ಅವರು ಈ ಬಾರಿ ನಾನು ಚುನಾವಣೆಯಲ್ಲಿ ಗೆದ್ದರೆ ನನ್ನ ಮೊದಲ ಆದ್ಯತೆ ಕೆ.ಆರ್.ಎಸ್ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡುವುದು ಎಂದು ಜನರಿಗೆ ಭರವಸೆ ನೀಡಿದ್ದರು. ಅದರಂತೆಯೆ ಅವರು ಸತತ ಹೋರಾಟ ಹಾಗೂ ಪ್ರಯತ್ನದಿಂದ ಹಿಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಸರ್ಕಾರವಿದ್ದಾಗ ಕಂದಾಯ ಗ್ರಾಮಕ್ಕೆ ಚಾಲನೆ ದೊರೆಯಿತು. ನಂತರ ಬದಲಾದ ರಾಜಕೀಯದಿಂದಾಗಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಯಡಿ ಯೂರಪ್ಪನವರು ಕಾವೇರಿ ಮಾತೆಗೆ ಬಾಗೀನ ಅರ್ಪಿಸುವ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ ನವರು ಮುಖ್ಯಮಂತ್ರಿಗಳ ಬಳಿ ಕೆಆರ್‍ಎಸ್ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಕೂಡಲೇ ಘೋಷಣೆ ಮಾಡಬೇಕು ಎಂಬ ಮನವಿಯನ್ನು ಮುಂದಿಟ್ಟರು.
ಮುಖ್ಯ ಮಂತ್ರಿಗಳ ಸೂಚನೆ ಮೇರೆಗೆ ಸ್ಥಳೀಯ ಜಿಲ್ಲಾಡಳಿತ ಕೆ.ಆರ್.ಎಸ್ ನ ಜನವಸತಿ ಪ್ರದೇಶವನ್ನು ಸರ್ವೆ ನಡೆಸಿ ಅದಕ್ಕೆ ಹೋಂಗಹಳ್ಳಿ ಹಾಗೂ ಹುಲಿಕೆರೆ ಗ್ರಾಮಗಳ ವ್ಯಾಪ್ತಿಯ ವಿವಿಧ ಸರ್ವೆ ನಂಬರ್‍ಗಳನ್ನು ಒಳಗೊಂಡಂತೆ ಕಂದಾಯ ಗ್ರಾಮವೆಂದು ನಮೂದಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಶಾಸಕ ರವೀಂದ್ರ ಶ್ರೀಕಂಠಯ್ಯನವರ ಶ್ರಮದ ಫಲ: ಕೃಷ್ಣರಾಜ ಸಾಗರ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತನೆ ಮಾಡುವಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಪಾತ್ರ ದೊಡ್ಡದಾಗಿದೆ. 1999ರಲ್ಲಿ ಶಾಸಕರಾಗಿದ್ದ ಶ್ರೀಮತಿ ಪಾರ್ವ ತಮ್ಮ ಶ್ರೀಕಂಠಯ್ಯನವರು ಕೃಷ್ಣರಾಜ ಸಾಗರ ಗ್ರಾಮವನ್ನು ಗ್ರಾಮ ಪಂಚಾಯ್ತಿ ರಚನೆ ಮಾಡಲಾಯಿತು. ಹಾಗೂ ಅವರ ಕಾಲದಲ್ಲೇ ಈ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸಲಾಗಿತ್ತು ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ 2018ರಲ್ಲಿ ಅವರ ಮಗ ರವಿಂದ್ರ ಶ್ರೀಕಂಠಯ್ಯನವರು ಇಲ್ಲಿನ ಸ್ಥಳೀಯ ನಿವಾಸಿಗಳು ಅನುಭವಿಸುತಿದ್ದ ಕಷ್ಟವನ್ನು ನೋಡಿ ಮರುಕ ವ್ಯಕ್ತಪಡಿಸಿದ್ದರು. ಅದರಂತೆಯೆ ಅವರು ಕೆ.ಆರ್.ಎಸ್ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲು ತಮ್ಮ ಮೊದಲ ಆದ್ಯತೆಯನ್ನು ನೀಡಿದ್ದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಗ್ರಾಮಕ್ಕೆ ಬಿಗಿಪಟ್ಟು ಹಾಕಿದ್ದ ಶಾಸಕರು, ಕುಮಾರಸ್ವಾಮಿ ಕೆ.ಆರ್.ಎಸ್ ಅನ್ನು ಡಿಜ್ನಿ ಲ್ಯಾಂಡ್ ಮಾಡಲು ಮುಂದಾದಾಗ ಅದಕ್ಕೆ ಮಾಡುವುದಾದರೆ ಮೊದಲು ಕೆ.ಆರ್.ಎಸ್ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಿ ಎಂದು ಹಠ ಹಿಡಿದು ತಮ್ಮ ಸರ್ಕಾರವನ್ನೇ ಎದುರು ಹಾಕಿಕೊಂಡು ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದರು. ಈ ಮೂಲಕ ಅಧಿಕಾರಕ್ಕಿನ್ನ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಎಂಬ ಸಂದೇಶವನ್ನು ಸಾರಿದ್ದರು. ಇದರ ಪರಿಣಾಮವೇ ಕುಮಾರಸ್ವಾಮಿಯವರು ಅಧಿಕಾರಿಗಳಿಗೆ ಕಂದಾಯ ಗ್ರಾಮಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದರು. ನಂತರ ಯಡಿಯೂರಪ್ಪನವರನ್ನು ಮನವಿ ಮಾಡಿದ್ದ ಶಾಸಕರು ಒಂದೇ ವರ್ಷದಲ್ಲಿ ಭಾಗದ ಜನರ ದಶಕಗಳ ಕನಸನ್ನು ನನಸು ಮಾಡಿ ನುಡಿದಂತೆ ನಡೆಯುವ ಶಾಸಕನಾಗಿದ್ದಾರೆ. 100 ವರ್ಷಗಳ ಹಿಂದೆ ಮೈಸೂರು ರಾಜ ಮನೆತನಗಳು ನೀಡಿದ್ದ ಭೂಮಿಯಲ್ಲಿ ಇಲ್ಲಿನ ಜನ ಮನೆ ನಿರ್ಮಾಣ ಮಾಡಿ ಜೀವನ ಸಾಗಿಸುತಿದ್ದರು. ನಮ್ಮ ಪ್ರದೇಶ ಅಧಿಸೂಚಿತ ಪ್ರದೇಶವಾಗಿದ್ದರಿಂದ ಗ್ರಾಮದ ಅಭಿವೃಧಿಗೆ ಹಿನ್ನಡೆಯಾಗಿತ್ತು, ಶಾಸಕರಾದ ರವೀಂದ್ರ ಶ್ರೀಕಂಠಯ್ಯನವರ ಅವರತ ಪ್ರಯತ್ನದಿಂದ ಕೊರೊನದಂದಹ ಸಂಕಷ್ಟದ ನಡುವೆಯೂ ಕೆ.ಆರ್.ಎಸ್ ಗ್ರಾಮದ ಜನ ಕಂದಾಯ ಗ್ರಾಮದ ಘೋಷಣೆ ಯಿಂದ ಸಂತೋಷದಿಂದ ತೇಲಾಡುತಿದ್ದಾರೆ ಎಂದು ಗ್ರಾಪಂ ಸದಸ್ಯರಾದ ವಿಜಯ್ ಕುಮಾರ್ ಹಾಗೂ ಮಂಜುನಾಥ್ ಸೇರಿದಂತೆ ಗ್ರಾ.ಪಂ ಸದಸ್ಯರು ಹರ್ಷ ವ್ಯಕ್ತಪಡಿಸಿದರು.