ಸಿಬಿಐನಿಂದ ರೋಷನ್ ಬೇಗ್ ಬಂಧನ
ಮೈಸೂರು

ಸಿಬಿಐನಿಂದ ರೋಷನ್ ಬೇಗ್ ಬಂಧನ

November 23, 2020

ಬೆಂಗಳೂರು, ನ.22- ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಸಂಜೆ ಬಂಧಿಸಿದರು.

ನಿನ್ನೆಯಷ್ಟೇ (ಶನಿವಾರ) ಐಎಂಎ ಅಧ್ಯಕ್ಷ ಮನ್ಸೂರ್ ಅಲಿ ಖಾನ್‍ನನ್ನು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದ ಸಿಬಿಐ ಅಧಿಕಾರಿಗಳು, ಆತ ನೀಡಿದ ಹೇಳಿಕೆ ಯನ್ನಾಧರಿಸಿ ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ರೋಷನ್ ಬೇಗ್ ಮನೆಗೆ ತೆರಳಿ ಅವರನ್ನು ವಶಕ್ಕೆ ಪಡೆದು ಗಂಗಾ ನಗರದಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ದು ಸಂಜೆವರೆಗೂ ತೀವ್ರ ವಿಚಾರಣೆ ಗೊಳಪಡಿಸಿದರು. ಸಂಜೆ ರೋಷನ್ ಬೇಗ್ ಅವರನ್ನು ಅಧಿಕೃತವಾಗಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸಂಜೆಯೇ ರೋಷನ್ ಬೇಗ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಯಿತು.

ಹಿನ್ನೆಲೆ: ಮನ್ಸೂರ್ ಅಲಿ ಖಾನ್ ಅಧ್ಯಕ್ಷರಾಗಿದ್ದ ಐಎಂಎ ಜುವೆಲರ್ಸ್‍ನಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಅದು ಮಾತ್ರ ವಲ್ಲದೆ ಇತರೆ ಅಂಗಡಿಗಳಿಗಿಂತ ಈತನ ಅಂಗಡಿಯಲ್ಲಿ ಚಿನ್ನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರಿಂದ ಗ್ರಾಹಕರು ಈ ಅಂಗಡಿಗೆ ಮುಗಿ ಬೀಳುತ್ತಿದ್ದರು.

ಹೀಗೆ ಜುವೆಲರ್ಸ್‍ಗೆ ಬರುವ ಗ್ರಾಹಕರಿಗೆ ತಮ್ಮ ಸಂಸ್ಥೆಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. 1 ಲಕ್ಷ ರೂ. ಹೂಡಿಕೆ ಮಾಡಿದರೆ, ತಿಂಗಳಿಗೆ ಮೂರು ಸಾವಿರ ರೂ. ಬಡ್ಡಿ ನೀಡಲಾಗುತ್ತಿತ್ತು. ಪ್ರಾರಂಭದಲ್ಲಿ ಬಡ್ಡಿ ನೀಡು ತ್ತಿದ್ದ ಈ ಸಂಸ್ಥೆಯು ನಂತರದ ದಿನಗಳಲ್ಲಿ ತಮ್ಮ ಸಂಸ್ಥೆಯ ಷೇರ್ ಹೋಲ್ಡರ್‍ಗಳಾಗಿ ಹಣ ಹೂಡಿಕೆ ಗ್ರಾಹಕರನ್ನಾಗಿ ಪರಿಗಣಿಸಿ, ತಿಂಗಳಿಗೆ ಲಕ್ಷಕ್ಕೆ 3 ಸಾವಿರ ರೂ. ಬಡ್ಡಿ ಜೊತೆಗೆ ವರ್ಷಕ್ಕೆ ಲಾಭಾಂಶದಲ್ಲಿ ಡಿವಿಡೆಂಡ್ ನೀಡುವುದಾಗಿಯೂ ಆಮಿಷ ಒಡ್ಡಿತ್ತು. ಈ ಕಾರಣದಿಂದಾಗಿ ಐಎಂಎ ಸಂಸ್ಥೆಗೆ `ಜನ ಮರುಳೋ, ಜಾತ್ರೆ ಮರುಳೋ’ ಎಂಬಂತೆ ಗ್ರಾಹಕರು ಮುಗಿ ಬಿದ್ದು ಹಣ ಹೂಡಿಕೆ
ಮಾಡುತ್ತಿದ್ದರು. ಅವರಲ್ಲಿ ಮುಸ್ಲೀಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪ್ರಾರಂಭಿಕ ಹಂತದಲ್ಲಿ ತಿಂಗಳ ಬಡ್ಡಿ ಹಾಗೂ ವಾರ್ಷಿಕ ಲಾಭಾಂಶವನ್ನು ಸರಿಯಾಗಿ ನೀಡಿ, ವಿಶ್ವಾಸಾರ್ಹತೆ ಗಳಿಸಿಕೊಂಡಿದ್ದರಿಂದ ಹೂಡಿಕೆದಾರರು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಈ ವಿಷಯ ತಿಳಿಸಿ ಹಣ ಹೂಡಿಕೆ ಮಾಡಿಸಿದ್ದರು. ಆದರೆ 2019ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಂಸ್ಥೆಯು ತನ್ನ ಗ್ರಾಹಕರಿಗೆ ಬಡ್ಡಿ ನೀಡಿರಲಿಲ್ಲ. ಅವರಿಗೆ ಜೂನ್ 10ರಂದು ಸಂಪೂರ್ಣ ಹಣ ಪಾವತಿಸುವುದಾಗಿ ಭರವಸೆ ನೀಡಿತ್ತು. ಆದರೆ ಜೂನ್ 9ರಂದು ಐಎಂಎ ಅಧ್ಯಕ್ಷ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಚಿತ್ರೀಕರಿಸಿದ ವೀಡಿಯೋ ವೈರಲ್ ಆದ ಪರಿಣಾಮ ಐಎಂಎ ಸಂಸ್ಥೆ ಮುಂದೆ ಸಾವಿರಾರು ಗ್ರಾಹಕರು ಜಮಾಯಿಸಿ ತಮ್ಮ ಹಣ ಕೇಳಲಾರಂಭಿಸಿದ್ದರು.

ಮನ್ಸೂರ್ ಅಲಿ ಖಾನ್ ಆತ್ಮಹತ್ಯೆ ಮಾಡಿಕೊಂಡರೆ ಅಥವಾ ಎಲ್ಲಾದರೂ ಅಡಗಿ ಕುಳಿತ್ತಿದ್ದಾನೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ನಡುವೆ ದುಬೈಗೆ ಪರಾರಿಯಾಗಿದ್ದ ಆತ, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವೀಡಿಯೋವೊಂದನ್ನು ಕಳಿಸಿ ತಾನು ಮಾಜಿ ಸಚಿವ ರೋಷನ್ ಬೇಗ್ ಅವರಿಗೆ 400 ಕೋಟಿ ರೂ. ನೀಡಿರುವುದಾಗಿಯೂ ಅವರ ಬಳಿ ತಮ್ಮ ಸಂಸ್ಥೆಯ ಹಣ ಇರುವುದಾಗಿಯೂ, ತನ್ನ ಹಣದಿಂದಲೇ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದ್ದನಲ್ಲದೆ, ರೋಷನ್ ಬೇಗ್‍ನಿಂದ ತನ್ನ ಪ್ರಾಣಕ್ಕೆ ಅಪಾಯವಿದ್ದ ಕಾರಣ ತಾನು ದುಬೈಗೆ ಪಲಾಯನ ಆಗಿರುವುದಾಗಿಯೂ, ನನಗೆ ರಕ್ಷಣೆ ನೀಡಿದರೆ ಬೆಂಗಳೂರಿಗೆ ಬಂದು ಶರಣಾಗುವುದಾಗಿ ತಿಳಿಸಿದ್ದ.

ಇತ್ತ ಮನ್ಸೂರ್ ಅಲಿ ಖಾನ್ ರೋಷನ್ ಬೇಗ್ ಬಳಿ ಐಎಂಎ ಹಣ ಇರುವುದಾಗಿ ಹೇಳಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕರಾಗಿದ್ದ ರೋಷನ್ ಬೇಗ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಅದು ಮಾತ್ರವಲ್ಲದೆ, ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರುವ ತವಕದಲ್ಲಿದ್ದರು. ಈ ನಡುವೆ ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕಾಗಿ ಕಾಂಗ್ರೆಸ್ ಅವರನ್ನು ಉಚ್ಛಾಟನೆ ಮಾಡಿತ್ತು. ರೋಷನ್ ಬೇಗ್ ಐಎಂಎ ಪ್ರಕರಣದಿಂದ ಬಚಾವ್ ಆಗಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ತವಕಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು. ಬಿಜೆಪಿ ಸೇರಲು ರೋಷನ್ ಬೇಗ್ ತೀವ್ರವಾಗಿ ಪ್ರಯತ್ನಿಸಿದರಾದರೂ, ರಾಜೀನಾಮೆ ನೀಡಿದ್ದ ಎಲ್ಲಾ ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡ ಹೈಕಮಾಂಡ್, ರೋಷನ್ ಬೇಗ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಆದರೂ ತಮ್ಮ ರಾಜೀನಾಮೆಯಿಂದ ತೆರವಾಗಿದ್ದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ರೋಷನ್ ಬೇಗ್ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮತ್ತೆ ಪಕ್ಷಕ್ಕೆ ಸೇರಲು ಯತ್ನಿಸಿ ವಿಫಲರಾಗಿದ್ದರು.

 

Translate »