ಕೂಡಿಗೆ ಸೈನಿಕ ಶಾಲೆಯಲ್ಲಿ ಕೊಡಗಿನ  ವಿದ್ಯಾರ್ಥಿಗಳಿಗೆ ಮೀಸಲಾತಿಗೆ ಆಗ್ರಹ
ಕೊಡಗು

ಕೂಡಿಗೆ ಸೈನಿಕ ಶಾಲೆಯಲ್ಲಿ ಕೊಡಗಿನ ವಿದ್ಯಾರ್ಥಿಗಳಿಗೆ ಮೀಸಲಾತಿಗೆ ಆಗ್ರಹ

March 25, 2022

ಮಡಿಕೇರಿ, ಮಾ.24- ‘ಕೂಡಿಗೆ ಸೈನಿಕ ಶಾಲೆ’ಯಲ್ಲಿ ಕೊಡಗಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವನ್ನು ಒದಗಿಸಲು ‘ಮೀಸಲಾತಿ’ಯನ್ನು ನಿಗದಿ ಪಡಿಸಬೇಕು. ಶಾಲೆಯಲ್ಲಿನ ಕನಿಷ್ಟ ‘ಡಿ’ ಗ್ರೂಪ್ ಹುದ್ದೆಗಳನ್ನಾದರೂ ಜಿಲ್ಲೆಯ ವರಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳು ವಂತೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಸೈನಿಕ ಶಾಲೆ ನಿರ್ಮಾಣಕ್ಕೆ ತಾವು ಕಾರಣವೆಂದು ಹೇಳಿಕೊಳ್ಳುವ ಶಾಸಕ ಅಪ್ಪಚ್ಚು ರಂಜನ್ ಅವರು ಸಹ ಸೈನಿಕ ಶಾಲೆಯಲ್ಲಿ ಜಿಲ್ಲೆಯ ಮಕ್ಕಳ ಓದಿಗೆ ಹೆಚ್ಚಿನ ಅವಕಾಶ ಒದಗಿಸಲು ಮತ್ತು ಅಲ್ಲಿನ ಹುದ್ದೆಗಳ ಭರ್ತಿಯ ಸಂದರ್ಭ ಜಿಲ್ಲೆಯವರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲವೆಂದು ಆರೋಪಿಸಿದರು.

2006-07ರ ಸುಮಾರಿಗೆ ಕೂಡಿಗೆ ಯಲ್ಲಿ ಸೈನಿಕ ಶಾಲೆ ನಿರ್ಮಾಣವಾಗುವುದಕ್ಕೆ ಅಂದು ವಿಧಾನ ಪರಿಷತ್ ಸದಸ್ಯರಾಗಿದ್ದ ಕಾಂಗ್ರೆಸ್‍ನ ಸಿ.ಎಸ್. ಅರುಣ್ ಮಾಚಯ್ಯ ಅವರು ಪ್ರಮುಖ ಕಾರಣರಾಗಿದ್ದಾರೆ. ಅಂದಿನ ದಿನಗಳಲ್ಲೆ ಶಾಲೆ ಆರಂ¨Àsಕ್ಕೆ 3 ಕೋಟಿ ರೂ. ಅನುದಾನವನ್ನು ಅವರು ಒದಗಿಸಿದ್ದರು. ನಮ್ಮಿಂದಲೇ ಸೈನಿಕ ಶಾಲೆ ಬಂತೆನ್ನುವ ಸ್ಥಳೀಯ ಶಾಸಕರ ಪ್ರಯತ್ನ ಆ ಸಂದರ್ಭ ಇತ್ತೇ ಎಂಬ ಬಗ್ಗೆ ತಮಗೆ ತಿಳಿದಿಲ್ಲ ಎಂದು ನುಡಿದರು. ಕೂಡಿಗೆ ಸೈನಿಕ ಶಾಲೆಯ ನಿರ್ಮಾಣಕ್ಕೆ ಆರಂಭಿಕ ಹಂತದಲ್ಲಿ 100 ಎಕರೆ ಭೂಮಿಯನ್ನು ಒದಗಿಸಲು ಅಂದಿನ ಕಾಂಗ್ರೆಸ್ ಪ್ರಮುಖರು ಶ್ರಮಿಸಿದ್ದರು. ಆನಂತರ ಹೆಚ್ಚುವರಿ 50 ಎಕರೆ ಬೇಡಿಕೆ ಇತ್ತಾದರು ಅದು ಮಂಜೂರಾಗಿಲ್ಲವೆಂದು ತಿಳಿಸಿದ ಚಂದ್ರಕಲಾ, ಇಷ್ಟೆಲ್ಲ ಪರಿಶ್ರಮ ದಿಂದ ರೂಪುಗೊಂಡ ಸೈನಿಕ ಶಾಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಅವಕಾಶವೇ ದೊರಕುತ್ತಿಲ್ಲ. ಈ ಹಿಂದೆ ಕೂಡಿಗೆ ಸೈನಿಕ ಶಾಲೆಯಲ್ಲಿ ಶೇ.25 ರಷ್ಟು ಸ್ಥಾನಗಳನ್ನು ಜಿಲ್ಲೆಯ ಮಕ್ಕಳಿಗೆ ಮೀಸಲಿಡುವಂತೆ ಸಿದ್ದರಾಮಯ್ಯ ಅವರ ಮೂಲಕ ಕೇಂದ್ರವನ್ನು ಆಗ್ರಹಿಸ ಲಾಗಿತ್ತಾದರೂ ಅದು ಫಲಪ್ರದವಾಗ ಲಿಲ್ಲ ಎಂದು ಚಂದ್ರಕಲಾ ವಿಷಾದಿಸಿದರು.
ನೇಮಕಾತಿಯಲ್ಲಿ ಅನ್ಯಾಯ: ಪ್ರಸ್ತುತ ಸೈನಿಕ ಶಾಲೆಯ 4 ‘ಡಿ’ ಗ್ರೂಪ್ ನೌಕರರ ಭರ್ತಿಗೆ ಆನ್‍ಲೈನ್ ಅರ್ಜಿ ಕರೆಯಲಾಗಿದೆ. ಈ ಹುದ್ದೆಯ ಭರ್ತಿಗೆ ವಯಸ್ಸಿನ ಮಿತಿ ಯನ್ನು 35ರಿಂದ 50 ವರ್ಷವೆಂದು ಪರಿಗಣಿಸಲಾಗಿದ್ದು, ಅಭ್ಯರ್ಥಿಗಳಿಗೆ 7 ಕೆ.ಜಿ. ಭಾರ ಹೊತ್ತು 1.6 ಕಿ.ಮೀ. ಓಡುವ ಪರೀಕ್ಷೆ ನಿಗದಿ ಪಡಿಸಲಾಗಿದೆ. ಈ ವಯಸ್ಸಿನ ಮಿತಿಯಲ್ಲಿ ಈ ಪರೀಕ್ಷೆ ಎದುರಿಸಲು ಸಾಧ್ಯವೆ? ಎಂದು ಪ್ರಶ್ನಿಸಿದ ಚಂದ್ರಕಲಾ, ಇದರೊಂದಿಗೆ ಶಟಲ್ ಬ್ಯಾಡ್ಮಿಂಟನ್, ಕಂಪ್ಯೂಟರ್ ಡಾಟಾ ಎಂಟ್ರಿ ತಿಳಿದಿರಬೇಕು ಎನ್ನುವ ನಿಬಂಧನೆಗಳನ್ನು ಅವೈಜ್ಞಾನಿಕ ವಾಗಿ ಅಳವಡಿಸಲಾಗಿದೆ. ಈ ಹುದ್ದೆಗೆ ರಾಷ್ಟ್ರದ ವಿವಿಧೆಡೆಗಳಿಂದ ಅರ್ಜಿಗಳು ಬಂದಿವೆ. ಈ ಹುದ್ದೆಯನ್ನು ಸ್ಥಳೀಯರಿಗೆ ಕೊಡಲು ಸಾಧ್ಯವಿಲ್ಲವೆ? ಇಂತಹ ವಿಚಾರಗಳ ಬಗ್ಗೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಏಕೆ ಪ್ರಶ್ನಿಸುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯೆ ಫಿಲೋಮಿನಾ, ಡಿಸಿಸಿ ಸದಸ್ಯೆ ಗೀತಾ ಧರ್ಮಪ್ಪ ಉಪಸ್ಥಿತರಿದ್ದರು.

Translate »