ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮ ದಿನಾಚರಣೆ
ಮೈಸೂರು

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮ ದಿನಾಚರಣೆ

September 10, 2018

ಮೈಸೂರು:  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮನೆಯ ಪ್ರತಿ ಮತವೂ ಕೋಮುವಾದಿಗಳನ್ನು ಸೋಲಿಸಲು ಚಲಾಯಿಸುತ್ತೇವೆ ಹಾಗೂ ಕೋಮುವಾದ ವಿರುದ್ಧದ ಮತ ಹರಿದು ಹಂಚಿ ಹೋಗುವಂತೆ ಎಚ್ಚರ ವಹಿಸುತ್ತೇವೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನಲ್ಲಿ ನಾವಿಂದು ಸಂಕಲ್ಪ ಮಾಡಬೇಕು ಎಂದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಕರೆ ನೀಡಿದರು.

ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಅಭಿರುಚಿ ಪ್ರಕಾಶನ, ಮೈಸೂರು ಫಿಲಂ ಸೊಸೈಟಿ, ನಿರಂತರ, ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘದ ಸಂಯುಕ್ತಾಶ್ರಯದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 80ನೇ ಜನ್ಮದಿನ ಹಾಗೂ ಅಭಿರುಚಿ ಪ್ರಕಾಶನದ 25ನೇ ವಾರ್ಷಿಕೋತ್ಸವದ ಅಂಗವಾಗಿ `ಕೆ.ಪಿ.ಪೂರ್ಣಚಂದ್ರ ತೇಜಸ್ವಿ-80’ ಶೀರ್ಷಿಕೆಯಡಿ ತೇಜಸ್ವಿ ಕುರಿತಂತೆ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಕೋಮುಶಕ್ತಿಗಳ ವಿರುದ್ಧ ನಾವಿಂದು ಎಚ್ಚೇತ್ತುಕೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಪ್ರಜಾತಂತ್ರ ವ್ಯವಸ್ಥೆ ಅಪಾಯಕ್ಕೆ ಸಿಲುಕಲಿದೆ. ಹೀಗಾಗಿ ಕೋಮುಶಕ್ತಿಗಳನ್ನು ಸೋಲಿಸಿ ನಮ್ಮ ದೇಶದಲ್ಲಿ ಬಹುಮುಖಿ ಹಾಗೂ ಜಾತ್ಯಾತೀತ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಇಂದಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದಡಿಯ ಎಲ್ಲಾ ಸಂಸ್ಥೆಗಳನ್ನೂ ನಾಶ ಮಾಡುತ್ತಿದೆ. ಅಧಿಕ ಮುಖಬೆಲೆಯ ನೋಟು ಅಪಮೌಲೀಕರಣದ ಮೂಲಕ ಆರ್‍ಬಿಐ ಸ್ವಾಯತ್ತತೆಯನ್ನೇ ಬಲಿ ತೆಗೆದುಕೊಳ್ಳಲಾಯಿತು. ಅಪಮೌಲೀಕರಣದ ವಿಚಾರ ಆರ್‍ಬಿಐ ಹಾಗೂ ಹಣಕಾಸು ಸಚಿವರಿಗೂ ಗೊತ್ತಿರಲಿಲ್ಲ. ನಾಲ್ಕು ಮಂದಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಬಹಿರಂಗವಾಗಿ ನಮಗೆ ಉಸಿರುಗಟ್ಟುವ ವಾತಾವರಣವಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ಈ ರೀತಿ ಆಗಿರಲಿಲ್ಲ. ಇಲ್ಲಿ ಮೋದಿಗಿಂತಲೂ ಶಕ್ತಿಶಾಲಿಯಾಗಿ ಕೆಲಸ ಮಾಡುತ್ತಿವ ವ್ಯಕ್ತಿಯೆಂದರೆ ಅದು ಅಮಿತ್ ಷಾ ಎಂದರು.

ಅಘೋಷಿತ ತುರ್ತು ಪರಿಸ್ಥಿತಿ ದೇಶಲ್ಲಿದೆ: ಮೋದಿ ಕೊಲೆ ಸಂಚಿನಯತ್ನ ಸೇರಿದಂತೆ ಇನ್ನಿತರ ಆರೋಪಗಳಡಿ ಐವರು ಬುದ್ಧಿಜೀವಿಗಳನ್ನು ಬಂಧಿಸಲಾಗಿದೆ. ಬಂಧಿತರು ಇಳಿವಯಸ್ಸಿನಲ್ಲಿದ್ದು, ಇಂತಹ ಸಂದರ್ಭದಲ್ಲಿ ಅವರು ಯಾರನ್ನು ತಾನೆ ಕೊಲ್ಲಲು ಸಾಧ್ಯ? ಎಂದ ಅವರು, ಮೋದಿಯ ಗುಜರಾತ್ ಮಾಡೆಲ್ ಎಂದರೆ ಇಲ್ಲಸಲ್ಲದ ಆರೋಪದಲ್ಲಿ ಬಂಧಿಸಿ ಹೋರಾಟವನ್ನು ಹತ್ತಿಕ್ಕುವುದೇ ಆಗಿದೆ. ಇಂದು ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಕಿಡಿಕಾರಿದರು.

ಚುನಾವಣಾ ಆಯೋಗದ ಮೇಲೆ ಭರವಸೆ ಇದೆ: ಸಂವಿಧಾನದಡಿಯ ಸಂಸ್ಥೆಗಳೆಲ್ಲಾ ಕೇಂದ್ರ ಸರ್ಕಾರದ ಕಪಿಮುಷ್ಟಿಕೆ ಸಿಲುಕಿರುವ ಈ ವೇಳೆ ಭಾರತೀಯ ಚುನಾವಣಾ ಆಯೋಗದ ಮೇಲೆ ಭರವಸೆ ಉಳಿದುಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆ ಈ ಭರವಸೆ ಹುಸಿಯಾದರೆ ದೇಶದ ಸಂವಿಧಾನಕ್ಕೆ ಉಳಿಗಾಲವಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಕೇಂದ್ರದ ಮಂತ್ರಿಯೊಬ್ಬರೇ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇವಲ ಶೇ.31ರಷ್ಟು ಮತಗಳಲ್ಲಿ ಮೋದಿ ಅಧಿಕಾರ: ನರೇಂದ್ರ ಮೋದಿ ಸರ್ಕಾರ ಅಧಿಕಾರದಲ್ಲಿರುವುದು ಕೇವಲ ಶೇ.31ರಷ್ಟು ಮತಗಳಿಂದ ಮಾತ್ರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.69ರಷ್ಟು ಮತಗಳು ಈ ಸರ್ಕಾರದ ವಿರುದ್ಧವಾಗಿಯೇ ಚಲಾವಣೆಗೊಂಡಿವೆ. ಹೀಗಾಗಿ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಈ ಚುನಾವಣೆಯಲ್ಲಿ ನಿರಾಸೆಯೇನು ಆಗಬೇಕಿಲ್ಲ ಎಂದು ನುಡಿದರು.

ಮೋದಿಗೆ ಸರಿಸಾಟಿ ನಾಯಕರೇ ಇಲ್ಲವೆಂಬುದು ಭ್ರಮೆ: ಮೋದಿಗೆ ಸರಿಸಾಟಿ ನಾಯಕರೇ ಇಲ್ಲ ಎಂಬ ಭ್ರಮೆ ಹುಟ್ಟಿಸಲಾಗುತ್ತಿದೆ. ನೆಹರು ನಂತರ ಅವರಿಗೆ ಸರಿಸಾಟಿಯಾದ ನಾಯಕರೇ ಇಲ್ಲ ಎಂದು ಹೇಳುತ್ತಿದ್ದರು. ಆದರೆ ಇಂದಿರಾಗಾಂಧಿ ಪ್ರಧಾನಿಯಾಗಿ ಸಮರ್ಥ ನಾಯಕತ್ವ ಪ್ರದರ್ಶಿಸಿದರು. ಅವರ ಬಳಿಕ ವಿ.ಪಿ.ಸಿಂಗ್ ದಕ್ಷ ಆಡಳಿತ ನಡೆಸಿದರು. ಹೀಗಾಗಿ ಮೋದಿಗೆ ಸರಿಸಾಟಿ ನಾಯಕತ್ವ ದೇಶಕ್ಕಿಲ್ಲ ಎಂಬ ಸುಳ್ಳಿಗೆ ಬಲಿಯಾಗಬಾರದು ಎಂದು ಹೇಳಿದರು.

ತೇಜಸ್ವಿಯವರ ಒಟನಾಡಿಯಾದ ಪ್ರೊ.ಬಿ.ಎನ್.ಶ್ರೀರಾಮ ಅಧ್ಯಕ್ಷತೆ ವಹಿಸಿದ್ದರು. ಚಿಂತಕರಾದ ಎ.ಶಿವಪ್ರಕಾಶ್, ಡಾ.ಕೆ.ಸಿ.ಶಿವಾರೆಡ್ಡಿ, ಹಿರಿಯ ಸಮಾಜವಾದಿ ಡಿ.ಎಸ್.ನಾಗಭೂಷಣ, ಪ್ರಕಾಶಕ ಅಭಿರುಚಿ ಗಣೇಶ್ ಮತ್ತಿತರರು ಹಾಜರಿದ್ದರು.

ಸಮಾಜಮುಖಿ ವಿಚಾರಧಾರೆಯ ತೇಜಸ್ವಿ
ರೂಢಿಗತ ಹಾಗೂ ಸಂಪ್ರದಾಯಕ ಮಾರ್ಗಗಳ ಬದಲಾಗಿ ಹೊಸ ಹಾದಿವೊಂದನ್ನು ಅನ್ವೇಷಿಸುವ ಸೃಜನಾತ್ಮಕ ವ್ಯಕ್ತಿತ್ವ ತೇಜಸ್ವಿ ಅವರದು. ಅವರ ವೈವಿಧ್ಯಮಯ ಬದುಕಿನ ಸಂಭ್ರಮವನ್ನು ತಮ್ಮ ಸಾಹಿತ್ಯದ ಮೂಲಕ ಇಡೀ ಜಗತ್ತಿಗೆ ತೆರೆದಿಟ್ಟಿದ್ದಾರೆ. ನಾವು ನೋಡಿ ಸುಮ್ಮನೇ ಇರುತ್ತಿದ್ದ ವಿಷಯ-ವಸ್ತುಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ವಿಶಿಷ್ಟತೆ ಅವರಲ್ಲಿತ್ತು. ಅವರ ಸಾಹಿತ್ಯದಲ್ಲಿ ಸಮಾಜಮುಖಿ ವಿಚಾರಗಳು ಸೆರೆಯಾಗುತ್ತಿದ್ದವು. – ಪ್ರೊ.ರವಿವರ್ಮಕುಮಾರ್, ಹಿರಿಯ ನ್ಯಾಯವಾದಿಗಳು.

ಮೋದಿ ವಿಚಾರ ಪ್ರಸ್ತಾಪಕ್ಕೆ ಆಕ್ಷೇಪ… ಆಕ್ಷೇಪದ ವಿರುದ್ಧ ಅಸಮಾಧಾನ…

ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ತಮ್ಮ ಸಮಾರೋಪ ಭಾಷಣದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಕುರಿತಂತೆ ಮಾತನಾಡುತ್ತಾ ಒಂದು ಹಂತದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಮಾತಿಗಿಳಿದರು. ಕೆಲವೇ ನಿಮಿಷಗಳಲ್ಲಿ ಸಭಿಕರೊಬ್ಬರು ವಿಷಯಾಂತರ ಮಾಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಭಿಕರೊಬ್ಬರ ಈ ಆಕ್ಷೇಪಕ್ಕೆ ಸಭಾಂಗಣದಲ್ಲಿದ್ದ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ತೇಜಸ್ವಿ ಚಿಂತನೆಗೆ ಅನುಗುಣವಾಗಿಯೇ ಭಾಷಣ ಮಾಡುತ್ತಿದ್ದಾರೆ, ನೀವು ಸುಮ್ಮನಿರಿ ಎಂದು ಕಿಡಿಕಾರಿದರು. ಬಳಿಕ ಪ್ರೊ.ರವಿವರ್ಮಕುಮಾರ್ ತಮ್ಮ ಭಾಷಣ ಮುಂದುವರೆಸಿದರು.

ಕನ್ನಡ ಸಾಹಿತ್ಯ ಲೋಕದ ನಿಷ್ಠುರ ವಿಮರ್ಶೆ
ತೇಜಸ್ವಿ ಬದುಕು ಹಾಗೂ ಸಾಹಿತ್ಯ ಮೀಮಾಂಸೆ ಕುರಿತು ಹೊಸ ವಿಚಾರ ಮಂಡಿಸಿದ್ದಾರೆ. ನವ್ಯ ಪ್ರಕಾರದ ಸಾಹಿತ್ಯ ಸಂಪ್ರದಾಯವನ್ನು ಮೂಲಭೂತವಾಗಿ ಪ್ರಶ್ನಿಸಿದರು. ಶೂದ್ರ ಜನಸ್ತೋಮದ ಕಷ್ಟ ಕರ್ಪಾಣ್ಯಗಳೇ ಕನ್ನಡ ಸಾಹಿತ್ಯ ಚರಿತ್ರೆ ಎಂದು ಪ್ರತಿಪಾದಿಸಿದ್ದರು. ತೇಜಸ್ವಿ ಕನ್ನಡ ಸಾಹಿತ್ಯ ಲೋಕವನ್ನು ನಿಷ್ಠುರವಾಗಿ ವಿಮರ್ಶಿಸಿದ್ದಾರೆ. ಸಮಾಜದ ಪರಿದಿಯ (ಕಟ್ಟಕಡೆ) ವಸ್ತುಗಳೇ ತೇಜಸ್ವಿ ಅವರ ಸಾಹಿತ್ಯದ ಕೇಂದ್ರ ವಿಷಯವಾಗುತ್ತಿದ್ದವು. -ಡಿ.ಎಸ್.ನಾಗಭೂಷಣ, ಹಿರಿಯ ಸಮಾಜವಾದಿಗಳು.

Translate »