ಐವರು ಶಿಕ್ಷಕರನ್ನು ಸನ್ಮಾನಿಸಿ ಶಿಕ್ಷಕರ ದಿನ ಆಚರಿಸಿದ ಕೆಪಿಪಿ
ಮೈಸೂರು

ಐವರು ಶಿಕ್ಷಕರನ್ನು ಸನ್ಮಾನಿಸಿ ಶಿಕ್ಷಕರ ದಿನ ಆಚರಿಸಿದ ಕೆಪಿಪಿ

September 6, 2020

ಮೈಸೂರು, ಸೆ.5(ಎಂಕೆ)- ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ಪ್ರಜಾಪಾರ್ಟಿ(ರೈತ ಪರ್ವ) ವತಿಯಿಂದ ಸಾಧಕ ಶಿಕ್ಷಕರನ್ನು ಗೌರವಿಸಿ ಅಭಿನಂದಿಸಲಾಯಿತು. ಮೈಸೂರಿನ ಹಿನಕಲ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಸಾಧಕ ಶಿಕ್ಷಕರಾದ ರಾಧಾ, ರತ್ನಾ, ದೇವೇಗೌಡ, ಸುನೀಲ್ ಪ್ಯಾಟ್ರಿಕ್, ಪಿ.ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪ್ರೊ.ನಂಜರಾಜ ಅರಸ್ ಮಾತ ನಾಡಿ, ಕೊರೊನಾ ಸಂಕಷ್ಟದಲ್ಲಿ ಖಾಸಗಿ ಶಾಲಾ ಶಿಕ್ಷಕರು ಸಂಬಳ ವಿಲ್ಲದೆ ಪರದಾಡುವಂತಾಗಿದೆ. ಸರ್ಕಾರ ಖಾಸಗಿ ಶಿಕ್ಷಕರ ಕಷ್ಟಕ್ಕೂ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರ ಆಚರಣೆ ಮಾಡುತ್ತಿರುವ ಎಲ್ಲಾ ಕಾರ್ಯಕ್ರಮಗಳು ಕಳಪೆ. ಸರ್ಕಾರ ಯಾವ ಸಾಧಕರ ಜಯಂತಿ ಯನ್ನೂ ಶ್ರದ್ಧೆ, ನಿಷ್ಠೆಯಿಂದ ಆಚರಿಸುತ್ತಿಲ್ಲ. ಮಾಧ್ಯಮಗಳಲ್ಲಿ ಪ್ರಚಾರ ಮಾಡಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸರ್ವಪಲ್ಲಿ ರಾಧಾಕೃಷ್ಣನ್ ಬಡಕುಟುಂಬದಲ್ಲಿ ಹುಟ್ಟಿ ರಾಷ್ಟ್ರದ ಪ್ರಥಮ ಪ್ರಜೆಯ ಸ್ಥಾನಕ್ಕೇರಿದವರು. ಜೋಸೆಫ್ ಸ್ಟಾಲಿನ್‍ನಂತಹ ಕ್ರೂರಿಯನ್ನೇ ಬದಲಾಯಿಸಿದ ಮೇಧಾವಿ ಎಂದು ಪ್ರಶಂಸಿಸಿದರು.

ಕರ್ನಾಟಕ ಪ್ರಜಾಪಾರ್ಟಿ(ರೈತ ಪರ್ವ) ಅಧ್ಯಕ್ಷ ಬಿ.ಶಿವಣ್ಣ ಮಾತನಾಡಿ, ಅಕ್ಷರ ಕಲಿಸಿದ ಶಿಕ್ಷಕರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಶಿಕ್ಷಕ ಎಂಬ ಪದಕ್ಕೆ ಐತಿಹಾಸಿಕ ಅರ್ಥವಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು ಎಂಬುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಶ್ರಮ, ಪ್ರಾಮಾಣಿಕತೆ ಮತ್ತು ನಿರಂತರ ಸೇವೆಯಲ್ಲಿ ತೊಡಗಿದರೆ ಉನ್ನತ ಸ್ಥಾನಕ್ಕೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿ ದ್ದಾರೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು. ಕರ್ನಾಟಕ ಪ್ರಜಾಪಾರ್ಟಿ ಉಪಾಧ್ಯಕ್ಷ ಯೋಗೇಶ್, ಖಜಾಂಚಿ ಆದೀಶ್, ನಗರ ಘಟಕ ಅಧ್ಯಕ್ಷೆ ಬಾರ್ಬರ ಮತ್ತಿತರರು ಉಪಸ್ಥಿತರಿದ್ದರು.

 

 

 

 

Translate »