ರಾಜ್ಯ ಸರ್ಕಾರಕ್ಕೆ ಎಂಎಲ್‍ಸಿ ಎ.ಹೆಚ್.ವಿಶ್ವನಾಥ್ ಸಲಹೆ
ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಎದುರು ಪ್ರಸ್ತಾವನೆ
ಮೈಸೂರು, ಸೆ.5(ವೈಡಿಎಸ್)- ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡು ತ್ತಿರುವ ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕ ರಿಂದ ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟಿಸಿದರೆ ದಸರಾಗೆ ಒಂದು ಅರ್ಥ ಬರುತ್ತದೆ. ಅದರಲ್ಲೂ ಪೌರಕಾರ್ಮಿಕರಿಂದ ಉದ್ಘಾ ಟಿಸಿದರೆ ಬಹಳ ಸಂತೋಷ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಹಳಷ್ಟು ಸಲ ದಸರಾವನ್ನು ಅರಮನೆಯೊಳಗೆ ಮಾಡಿದ್ದೇವೆ. 2003ರಲ್ಲಿ ಸರ್ಕಾರದ ನೆರವಿಲ್ಲದೆ ಪ್ರಾಯೋಜಕತ್ವದಲ್ಲಿ ದಸರಾ ಮಾಡಿದೆವು. ಆದರೆ, ಪ್ರಸ್ತುತ ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ಎಲ್ಲಿ ವ್ಯಾಪಕ ವಾಗಿ ಹರಡುತ್ತದೊ ಎಂಬ ಭಯವಿದೆ. ಹಾಗಾಗಿ ಈ ಬಾರಿ ವೈಭವದಿಂದ ದಸರಾ ಆಚರಿಸಲು ಸಾಧ್ಯವಿಲ್ಲ. ಸರಳವಾಗಿ, ಶಾಸ್ತ್ರೋಕ್ತವಾಗಿ, ಸಾಂಪ್ರ ದಾಯಿಕವಾಗಿ ಮಾಡಬೇಕು. ನಂಬಿಕೆ, ಸಂಪ್ರದಾಯಗಳು ದಸರಾದ ವಿಶೇಷತೆ ಎಂದರು.
ಈ ಹಿಂದೆ ಸಾಹಿತಿಗಳು, ಸಂಗೀತ ಗಾರರು, ಕಲಾವಿದರು, ವಿಜ್ಞಾನಿಗಳು, ರಾಜಕಾರಣಿಗಳು, ಮುಖ್ಯಮಂತ್ರಿಗಳು, ಸಚಿವರು ಹೀಗೆ ಗಣ್ಯಾತಿಗಣ್ಯರು ದಸರಾ ಉದ್ಘಾಟಿಸಿದ್ದಾರೆ. ಆದರೆ, ಈ ಬಾರಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಈ ಮೂವರಿಂದ ದಸರಾ ಉದ್ಘಾ ಟಿಸುವುದರಿಂದ ದಸರಾಕ್ಕೆ ಒಂದು ಅರ್ಥ ಬರುತ್ತದೆ ಎಂದರು.
ವೈದ್ಯರು ತಮ್ಮ ಜೀವನ, ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಕೆಲವು ವೈದ್ಯರು ಸೋಂಕಿಗೆ ತುತ್ತಾಗಿ ಪ್ರಾಣವನ್ನೇ ತೆತ್ತಿದ್ದಾರೆ. ಕೆಲ ಸಾರ್ವಜನಿಕರು ಮಾಡಿದ ಗಲಾಟೆಗಳಿಂದ ಆಶಾ ಕಾರ್ಯಕರ್ತೆಯರು ನೊಂದಿದ್ದಾರೆ. ಕೆಲ ಪೌರಕಾರ್ಮಿ ಕರು ಕೊರೊನಾದಿಂದ ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಈ ಮೂವರಿಂದ ದಸರಾ ಉದ್ಘಾಟನೆಯಾಗಲಿ. ಇದರಿಂದ ಇಡೀ ದೇಶಕ್ಕೆ ದೊಡ್ಡ ಸಂದೇಶ ರವಾನೆ ಯಾಗುತ್ತದೆ. ಕಾರಣ, ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಪೌರಕಾರ್ಮಿಕರ ಪಾದ ತೊಳೆದು ಕ್ಲೀನ್ ಇಂಡಿಯಾಕ್ಕೆ ನೀವೇ ಕಾರಣ ಎಂದು ಪ್ರಶಂಸಿಸಿದ್ದರು. ಹಾಗಾಗಿ ಈ ಸಲಹೆ ಕುರಿತು ಸೆಪ್ಟೆಂಬರ್ 8ರ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.