ಮೈಸೂರು, ಸೆ.5(ಪಿಎಂ)- ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬ ಗಳಿಗೆ 6 ತಿಂಗಳವರೆಗೆ ಮಾಸಿಕ 7,500 ರೂ. ಆರ್ಥಿಕ ನೆರವು ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಶನಿವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ದೇಶದಲ್ಲಿ 8 ತಿಂಗಳಿಂದ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಪೂರ್ವ ಸಿದ್ಧತೆ ಇಲ್ಲದೆ ಏಕಪಕ್ಷೀಯವಾಗಿ ಲಾಕ್‍ಡೌನ್ ಘೋಷಣೆ ಮಾಡಲಾಯಿತು. ಆದರೂ ಸೋಂಕು ಹರಡುವುದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಲಾಕ್‍ಡೌನ್‍ನಿಂದ ರೈತರು, ಕಾರ್ಮಿಕರು, ಕೂಲಿಕಾರರ ಬದುಕು ಕಷ್ಟಕ್ಕೆ ಸಿಲುಕಿದೆ. ದೇಶದ ಕೋಟ್ಯಾಂತರ ಶ್ರಮಜೀವಿಗಳಿಗೆ ಹಿಂದೆಂದೂ ಕಂಡರಿಯದಂತಹ ಕಷ್ಟಕಾಲ ಬಂದಿದೆ. ಆದರೆ, ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಖಾಸಗೀಕರಣಕ್ಕೆ ಒತ್ತು ನೀಡುತ್ತಿದೆ. ಕೃಷಿಭೂಮಿ, ಎಪಿಎಂಸಿ ಮಾರುಕಟ್ಟೆ, ಶಿಕ್ಷಣ, ಆರೋಗ್ಯ ವಲಯ, ರಕ್ಷಣಾ ಕ್ಷೇತ್ರದಲ್ಲೂ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ ಎಂದು ಕಿಡಿಕಾರಿದರು. 6 ತಿಂಗಳವರೆಗೆ ಪ್ರತಿವ್ಯಕ್ತಿಗೆ 10 ಕೆಜಿಯಂತೆ ಉಚಿತ ಆಹಾರ ಧಾನ್ಯ ವಿತರಿಸÀಬೇಕು. ಉದ್ಯೋಗ ಖಾತರಿ ಯೋಜನೆ ವಿಸ್ತರಿಸಿ ಕೂಲಿ ದರ ಹೆಚ್ಚಿಸಬೇಕು. ವರ್ಷದಲ್ಲಿ 200 ದಿನ ಉದ್ಯೋಗಖಾತ್ರಿ ಒದಗಿಸಬೇಕು. ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಕೆಪಿ ಆರ್‍ಎಸ್ ಜಿಲ್ಲಾಧ್ಯಕ್ಷ ಚಿಕ್ಕಣೇಗೌಡ, ಸಿಐಟಿಯು ಜಿಲ್ಲಾಧ್ಯಕ್ಷ ಎನ್.ಕೆ.ಬಾಲಾಜಿರಾವ್, ಮುಖಂಡರಾದ ಜಗದೀಶ್ ಸೂರ್ಯ, ಜಿ.ಜಯರಾಂ, ಚಂದ್ರಶೇಖರ್, ಪಿ.ಎಲ್.ಭರತ್, ಸಿದ್ದಯ್ಯ, ಶಂಕರ್, ಸೀನಪ್ಪ, ಕೆಂಪಯ್ಯ ಮತ್ತಿತರರು ಪ್ರತಿಭಟನೆಯಲ್ಲಿದ್ದರು.