ಕೆಆರ್ ಆಸ್ಪತ್ರೆ ಲಿಕ್ವಿಡ್ ಆಕ್ಸಿಜನ್ ಘಟಕ ಫ್ರೀಜ್:  ಅಗ್ನಿಶಾಮಕ ದಳದಿಂದಾಗಿ ತಪ್ಪಿದ ಅನಾಹುತ
ಮೈಸೂರು

ಕೆಆರ್ ಆಸ್ಪತ್ರೆ ಲಿಕ್ವಿಡ್ ಆಕ್ಸಿಜನ್ ಘಟಕ ಫ್ರೀಜ್: ಅಗ್ನಿಶಾಮಕ ದಳದಿಂದಾಗಿ ತಪ್ಪಿದ ಅನಾಹುತ

May 5, 2021

ಮೈಸೂರು, ಮೇ 4(ವೈಡಿಎಸ್)- ಫ್ರೀಜ್ ಆಗಿದ್ದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್‍ನ ಪೈಪ್‍ಗೆ ಅಗ್ನಿಶಾಮಕ ದಳ ಸಿಬ್ಬಂದಿ ನೀರನ್ನು ಸಿಂಪಡಿಸಿ ಕರಗಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಕಳೆದ ಬಾರಿ ಕೊರೊನಾ ಸಂದರ್ಭ ಮೈಸೂರಿನ ಕೆ.ಅರ್.ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಂಡಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ನಿರ್ಮಿಸಲಾಗಿತ್ತು. ಇದರಿಂದ ಕೆ.ಆರ್.ಆಸ್ಪತ್ರೆಯ ಸೋಂಕಿತರಿಗೆ ಆಕ್ಸಿಜನ್ ನೀಡಲಾಗುತ್ತಿತ್ತು. ಆದರೆ, ಆಕ್ಸಿಜನ್ ಸರಬ ರಾಜು ಮಾಡುವ ಯಂತ್ರದ ಪೈಪ್ ಸುತ್ತ ಐಸ್ ಕಟ್ಟಿಕೊಂಡಿತ್ತು. ಇದರಿಂದ ಮುಂದಿನ ದಿನಗಳಲ್ಲಿ ಆಕ್ಸಿಜನ್ ಸರಬರಾಜು ಸ್ಥಗಿತವಾಗಬಹುದು ಎಂದು ಎಚ್ಚೆತ್ತ ಕೆ.ಆರ್.ಆಸ್ಪತ್ರೆ ಅಧಿಕಾರಿಗಳು ಮಂಗಳವಾರ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸರಸ್ವತಿಪುರಂ ಅಗ್ನಿಶಾಮಕ ಸಿಬ್ಬಂದಿ 8.30ರ ವೇಳೆಗೆ ಸ್ಥಳಕ್ಕಾಗಮಿಸಿ 11 ಗಂಟೆವರೆಗೆ ಅಂದರೆ ಸತತ ಎರಡೂವರೆ ಗಂಟೆ ಕಾಲ ನೀರನ್ನು ಸಿಂಪಡಿಸಿ ಐಸ್ ಕರಗಿಸಿದ್ದಾರೆ.

ಕೆ.ಆರ್.ಆಸ್ಪತ್ರೆ ಆರ್‍ಎಂಓ ರಾಜೇಶ್ ಮಾತ ನಾಡಿ, ಕೆ.ಆರ್.ಆಸ್ಪತ್ರೆಯಲ್ಲಿ 500ಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದು, ಅವರಿಗೆ ಆಕ್ಸಿಜನ್ ನೀಡಲಾಗು ತ್ತಿದೆ. ಆದರೆ, ಅನಿವಾರ್ಯವಾಗಿ ಹೆಚ್ಚಾಗಿ ಆಕ್ಸಿಜನ್ ಬಳಸಲಾಗುತ್ತಿರುವುದರಿಂದ ಆಕ್ಸಿಜನ್ ಸರಬರಾಜು ಮಾಡುವ ಪೈಪ್ ಐಸ್ ಕಟ್ಟಿಕೊಳ್ಳುತ್ತಿದೆ ಎಂದರು.

ಟ್ಯಾಂಕ್‍ನಲ್ಲಿ ತುಂಬಿದ ಲಿಕ್ವಿಡ್, ಗ್ಯಾಸ್ ಆಗಿ ಬದಲಾವಣೆಯಾಗಿ ಪೈಪ್ ಮೂಲಕ ಸರಬರಾಜು ಆಗುವಾಗ ಲಿಕ್ವಿಡ್ ಆಕ್ಸಿಜನ್ ಟೆಂಪರೇಚರ್ ಕಡಿಮೆ ಇರುತ್ತದೆ. ಹೊರಗಡೆ ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಾಗಿರುತ್ತದೆ.

ಈ ವೇಳೆ ವಾತಾವರಣದಲ್ಲಿನ ನೀರಿನ ಕಣಗಳು ಆಕ್ಸಿಜನ್ ಸರಬರಾಜು ಮಾಡುವ ಪೈಪ್‍ಗಳ ಮೇಲೆ ಕೂರುವುದರಿಂದ ಐಸ್ ಕಟ್ಟುತ್ತದೆ. ಇದನ್ನು ಸರಿಯಾದ ಸಮಯಕ್ಕೆ ನೀರನ್ನು ಸ್ಪ್ರೇ ಮಾಡಿ ಕರಗಿಸಬೇಕು. ಇಲ್ಲದಿದ್ದರೆ ಆಕ್ಸಿಜನ್ ಸರಬರಾಜು ಕೂಡ ಬ್ಲಾಕ್ ಆಗುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಆಕ್ಸಿಜನ್ ಸರಬರಾಜು ಮಾಡುವ ಪೈಪ್‍ಗೆ ಕಟ್ಟಿದ್ದ ಐಸ್ ಅನ್ನು ನೀರು ಸಿಂಪಡಿಸಿ ಕರಗಿಸಲಾಗಿದೆ ಎಂದು ಹೇಳಿದರು.

Translate »