ಅಕ್ಟೋಬರ್ ಮಳೆಗೆ ಕೆಆರ್‍ಎಸ್ ಅಣೆಕಟ್ಟೆಭರ್ತಿ
ಮೈಸೂರು

ಅಕ್ಟೋಬರ್ ಮಳೆಗೆ ಕೆಆರ್‍ಎಸ್ ಅಣೆಕಟ್ಟೆಭರ್ತಿ

October 18, 2022

ಮೈಸೂರು,ಅ.17(ಆರ್‍ಕೆ)-ಮತ್ತೆ ಭಾರೀ ಮಳೆ ಸುರಿಯುತ್ತಿರುವುದರಿಂದ ಈಗ ಮತ್ತೊಮ್ಮೆ ಭರ್ತಿ ಯಾಗಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‍ಎಸ್) ಅಣೆಕಟ್ಟೆಯಿಂದ ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇಂದು ಬೆಳಗ್ಗೆ ಜಲಾಶಯದಿಂದ 51,665 ರಿಂದ 54,311 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.

ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ವರ್ಷ ದೊಳಗೆ ಎರಡು ಬಾರಿ ಅಣೆಕಟ್ಟೆ ಗರಿಷ್ಠ ಮಟ್ಟ (124.80) ತಲುಪಿದೆ. ಇದರಿಂದಾಗಿ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವುದಿಲ್ಲ. ಅಷ್ಟೇ ಅಲ್ಲದೆ, ವ್ಯವಸ್ಥಾಯಕ್ಕೂ ವರ್ಷ ಪೂರ್ತಿ ನೀರು ಪೂರೈಕೆ ಮಾಡಬಹುದಾಗಿದೆ.

ಕೇರಳ, ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದ ಕಾರಣ 2021ರ ಅಕ್ಟೋ ಬರ್ 2ನೇ ವಾರದಲ್ಲಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರಬಿಡಲಾಗಿತ್ತು. ಸಾಮಾನ್ಯ ವಾಗಿ ಮಾನ್ಸೂನ್‍ನಲ್ಲಿ(ಜುಲೈ-ಆಗಸ್ಟ್) ಜಲಾ ಶಯದ ನೀರಿನ ಮಟ್ಟ 124.80 ಅಡಿ ತಲುಪುತ್ತಿತ್ತು. ಆದರೆ 2010ರಲ್ಲಿ ತಡವಾಗಿ ಅಕ್ಟೋಬರ್ ತಿಂಗಳಲ್ಲಿ ಅಣೆಕಟ್ಟೆ ಭರ್ತಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಅದೇ ರೀತಿ 1983, 1984, 1985 ಹಾಗೂ 2010ರ ಅಕ್ಟೋಬರ್ ಮಾಹೆಯಲ್ಲಿ ಜಲಾಶಯದ ನೀರಿನ ಮಟ್ಟ 124.80 ಅಡಿ ತಲುಪಿತ್ತು ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ತಿಳಿಸಿ ದ್ದಾರೆ. ಇದೀಗ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಯಬಿಡುತ್ತಿರುವುದರಿಂದ ದಕ್ಷಿಣ ಗಾರ್ಡನ್ ಮತ್ತು ಉತ್ತರ ಗಾರ್ಡನ್ ನಡುವಿನ ಸೇತುವೆ ಮುಳುಗಡೆಯಾಗಿರುವುದರಿಂದ ಸಂಪರ್ಕ ಕಡಿತವಾಗಿದೆ. ಅದರಿಂದಾಗಿ ಬೃಂದಾ ವನದ ಉತ್ತರ ಗಾರ್ಡನ್‍ನಲ್ಲಿ ಸಂಗೀತ ಕಾರಂಜಿ ಮತ್ತು ವಿದ್ಯುದ್ದೀಪಾಲಂಕಾರವನ್ನು ರದ್ದುಗೊಳಿಸ ಲಾಗಿದೆ. ದಕ್ಷಿಣ ಗಾರ್ಡನ್‍ನಲ್ಲಿ ಮಾತ್ರ ದೀಪಾಲಂ ಕಾರವಿದ್ದು, ನೀರು ಬಿಡುಗಡೆ ಮಾಡುತ್ತಿರುವ ಸ್ಥಳದಲ್ಲಿ ರಾತ್ರಿ ವೇಳೆ ದೀಪಾಲಂಕಾರವಿರುವ ಕಾರಣ ಭೋರ್ಗರೆಯುತ್ತಿರುವ ಕಾವೇರಿ ಜಲ ಸೌಂದರ್ಯ ರಮಣೀಯವಾಗಿದೆ.

ಕೆಲಸದ ದಿನಗಳಲ್ಲಿ ನಿತ್ಯ ರಾತ್ರಿ 1 ಗಂಟೆ ಸಂಗೀತ ಕಾರಂಜಿ ಮತ್ತು ವಿದ್ಯುದ್ದೀಪಾಲಂಕಾರವಿರುತ್ತದೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ 2 ತಾಸು ಈ ವ್ಯವಸ್ಥೆ ಒದಗಿಸಲಾಗಿದೆ. ಆದರೆ 50,000 ಕ್ಯೂಸೆಕ್‍ಗಿಂತ ಹೆಚ್ಚು ನೀರನ್ನು ಹರಿಸುವ ವೇಳೆ ಸೇತುವೆ ಮುಳುಗಡೆಯಾಗುವುದರಿಂದ ಉತ್ತರ ಗಾರ್ಡನ್‍ನಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸ ಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ನೀರನ್ನು ಕೆಆರ್‍ಎಸ್ ಜಲಾಶಯದಿಂದ ಹೊರಬಿಡುತ್ತಿರುವುದರಿಂದ ಈ ರುದ್ರ ರಮಣೀಯ ದೃಶ್ಯ ನೋಡಲು ನಿತ್ಯ ಸಾವಿರಾರು ಮಂದಿ ಪ್ರವಾ ಸಿಗರು ಕೆಆರ್‍ಎಸ್‍ಗೆ ಧಾವಿಸುತ್ತಿದ್ದು, ಈ ಪ್ರಾಕೃತಿಕ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿ ದ್ದಾರೆ ಎಂದು ಸಿಎನ್‍ಎನ್ ಅಧಿಕಾರಿಗಳು ತಿಳಿಸಿದ್ದಾರೆ.

Translate »