ಕೇಂದ್ರ, ರಾಜ್ಯದ ಬೆಲೆ ಏರಿಕೆ ಖಂಡಿಸಿ ಕೆ.ಆರ್.ಕ್ಷೇತ್ರ ಕಾಂಗ್ರೆಸ್ ಪ್ರತಿಭಟನೆ
ಮೈಸೂರು

ಕೇಂದ್ರ, ರಾಜ್ಯದ ಬೆಲೆ ಏರಿಕೆ ಖಂಡಿಸಿ ಕೆ.ಆರ್.ಕ್ಷೇತ್ರ ಕಾಂಗ್ರೆಸ್ ಪ್ರತಿಭಟನೆ

September 19, 2021

ಮೈಸೂರು,ಸೆ.18(ಎಸ್‍ಪಿಎನ್)-ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆಯೇರಿಕೆ ಹಾಗೂ ಕೋಮುವಾದಿ ನಿಲುವು ಗಳ ವಿರುದ್ಧ ಕಾಂಗ್ರೆಸ್ ಕೆ.ಆರ್.ಕ್ಷೇತ್ರದ ಕಾರ್ಯಕರ್ತರು ಜಿಲ್ಲಾ ನ್ಯಾಯಾಲಯದ ಎದುರಿನ ಮಹಾತ್ಮ ಗಾಂಧಿ ಪುತ್ತಳಿ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
ನಮ್ಮ ತ್ರಿವರ್ಣ ಧ್ವಜದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣ ಗಳು ರಾರಾಜಿಸುತ್ತವೆ. ಹಾಗೆಯೇ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಇತರೆ ಧರ್ಮೀಯರು ಎಲ್ಲರೊಂದಿಗೆ ಬೆರೆತು ಒಟ್ಟಾಗಿ ಜೀವನ ನಡೆಸುತ್ತಿದ್ದಾರೆ. ಆದರೆ, ಬಿಜೆಪಿ ತನ್ನ ದ್ವೇಷ ರಾಜಕಾರಣಕ್ಕೆ ಸಮಾಜದಲ್ಲಿ ಕೋಮು ದ್ವೇಷ ಬಿತ್ತಲು ಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ಕಳೆದ 70 ವರ್ಷಗಳಿಂದ ಜವಾಹರ ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‍ಗಾಂಧಿ ಹಾಗೂ ಇತರೆ ಮುಖಂಡರ ನಾಯಕತ್ವದಲ್ಲಿ ಈ ದೇಶದಲ್ಲಿ ಭಾವೈ ಕ್ಯತೆ ತುಂಬಿದ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿದ್ದು, ಈಗ ಬಿಜೆಪಿಯವರು ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ನೆಲಸಮ ಮಾಡಿ, ಜನರ ಭಾವನೆಗಳ ಘಾಸಿಗೊಳಿಸುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದರು.

ಹಿಂದೂಗಳ ಹೆಸರಿನಲ್ಲಿ ಮತವನ್ನು ಪಡೆದ ಬಿಜೆಪಿ, ದೇವಸ್ಥಾನಗಳನ್ನು ನೆಲಸಮ ಮಾಡುವ ಹೀನಕೃತ್ಯಕ್ಕೆ ತಾವೇ ಕೈ ಹಾಕಿದ್ದಾರೆ ಎಂದು ಟೀಕಿಸಿದ ಪ್ರತಿಭಟನಾಕಾರರು, ಕೊರೊನಾದಿಂದಾಗಿ ಲಕ್ಷಾಂತರ ಯುವಕರು ನಿರುದ್ಯೋಗಿ ಗಳಾಗಿದ್ದಾರೆ. ಇಂತಹ ಕಷ್ಟದ ಸಂದರ್ಭದಲ್ಲೂ “ಮೋದಿ ಯುಗ” ಎಂದು ಬಿಜೆಪಿಯವರು ವಿಜೃಂಭಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಎಂ.ಎನ್.ನವೀನ್‍ಕುಮಾರ್, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಲತಾ ಮೋಹನ್, ಸೇವಾ ದಳದ ಅಧ್ಯಕ್ಷ ಗಿರೀಶ್, ರಾಜೇಶ್, ಪೈಲ್ವಾನ್ ಸುನಿಲ್, ಬಸವಣ್ಣ, ಎನ್‍ಎಸ್‍ಯುಐ ಪ್ರಧಾನ ಕಾರ್ಯದರ್ಶಿÀ ರಫೀಕ್ ಅಲಿ, ಬಾಲು, ಭರತ್ ಇತರರು ಪಾಲ್ಗೊಂಡಿದ್ದರು

Translate »