ಮೈಸೂರು, ಜೂ. 15(ಆರ್‍ಕೆ)- ರೇಷ್ಮೆ ಇಲಾಖೆ ಯೊಂದಿಗೆ ಕೆಎಸ್‍ಐಸಿಯನ್ನು ವಿಲೀನಗೊಳಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧರಿಸಲಾಗುವುದು ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ಇಂದಿಲ್ಲಿ ತಿಳಿಸಿದ್ದಾರೆ.
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂ ಗಣದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೆಎಸ್‍ಐಸಿ ಒಂದು ಬೋರ್ಡ್ ಆಗಿದ್ದು, ವ್ಯವಸ್ಥಾಪಕ ನಿರ್ದೇಶಕರೇ ಅದÀರ ಮುಖ್ಯಸ್ಥ ರಾಗಿರುವುದರಿಂದ ಸಂಸ್ಥೆ ನಿಯಂತ್ರಣಕ್ಕೆ ಸಿಗುತ್ತಿಲ್ಲವಾ ದ್ದರಿಂದ ಅದನ್ನು ರೇಷ್ಮೆ ಇಲಾಖೆಯೊಂದಿಗೆ ವಿಲೀನಗೊಳಿಸಿ ಸಮಗ್ರ ಅಭಿವೃದ್ಧಿ ಮಾಡಬೇಕೆಂದು ಸಂಸದ ಪ್ರತಾಪ್‍ಸಿಂಹ ಸಲಹೆ ನೀಡಿದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗುವುದು ಎಂದರು.
ಮೈಸೂರಿನ ರೇಷ್ಮೆ ಸೀರೆ ಮತ್ತು ಇನ್ನಿತರ ಉತ್ಪನ್ನಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ನಮ್ಮಲ್ಲಿ ಕೆಎಸ್ ಐಸಿಯು ರೇಷ್ಮೆ ಸೀರೆಗಳನ್ನು ಉತ್ಪಾದನೆ ಮಾಡದ ಕಾರಣ, ಕೆಲ ಖಾಸಗಿ ಸೀರೆ ಅಂಗಡಿಯವರು ಮೈಸೂರು ರೇಷ್ಮೆ ಸೀರೆ ಎಂದು ಸ್ಟಿಕ್ಕರ್ ಅಂಟಿಸಿ ಪ್ರವಾಸಿಗರು ಹಾಗೂ ಗ್ರಾಹಕರಿಗೆ ಮೋಸ ಮಾಡುತ್ತಿವೆ ಎಂದು ಪ್ರತಾಪ್‍ಸಿಂಹ ಆರೋಪಿಸಿದರು.
ರೇಷ್ಮೆ ಇಲಾಖೆಯೊಂದಿಗೆ ನಿಗಮವನ್ನು ಸೇರಿಸಿಕೊಂಡು ರೇಷ್ಮೆ ಉತ್ಪಾದಿಸುವ ರೈತರಿಗೆ ಪ್ರೋತ್ಸಾಹ ನೀಡಿದಲ್ಲಿ ಇನ್ನಷ್ಟು ರೇಷ್ಮೆ ಸೀರೆಗಳನ್ನು ಉತ್ಪಾದಿಸಬಹುದಾಗಿದೆ. ಮತ್ತಷ್ಟು ರೇಷ್ಮೆ ನೇಯ್ಗೆ ಕಾರ್ಖಾನೆ ತೆರೆದರೆ ಸಾವಿರಾರು ಮಂದಿಗೆ ಉದ್ಯೋಗ ದೊರೆಯುವುದಲ್ಲದೆ, ಗ್ರಾಹಕರ ಬೇಡಿಕೆಯನ್ನು ಪೂರೈಸಬಹುದು ಎಂದೂ ಸಂಸದರು ಸಭೆಯಲ್ಲಿ ಸಚಿವರಿಗೆ ಸಲಹೆ ನೀಡಿದರು.
ಚೈನಾದಿಂದ ಬರುತ್ತಿದ್ದ ರೇಷ್ಮೆ ಉತ್ಪನ್ನ ಬಂದ್ ಆಗಿದೆ, ನಮ್ಮಲ್ಲಿ ಮುಂದೆ ರೇಷ್ಮೆ ಬೆಳೆಗೆ ಚಿನ್ನದಂತಹ ಬೆಲೆ ಸಿಗು ವುದು ಎಂದು ಭರವಸೆ ನೀಡಿ ರೇಷ್ಮೆ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಿ ಅವರಿಗೆ ಎಲ್ಲಾ ರೀತಿಯ ನೆರವು ನೀಡಿ ಎಂದೂ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿ ದರು. ಕೋವಿಡ್-19 ಲಾಕ್‍ಡೌನ್‍ನಿಂದಾಗಿ ನಗರ ಪ್ರದೇಶ ಗಳಲ್ಲಿ ಉದ್ಯೋಗ ಮಾಡುತ್ತಿದ್ದ ಯುವಕರೆಲ್ಲಾ ತಮ್ಮ ಊರು ಗಳಿಗೆ ಹಿಂದಿರುಗಿ ಜಮೀನಿನಲ್ಲಿ ಕೃಷಿ ಮಾಡಲಾರಂಭಿಸಿರು ವುದರಿಂದ ಅದಕ್ಕೆ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸಿ ಹಣ್ಣು, ತರಕಾರಿ, ಹೂ, ರೇಷ್ಮೆ ಬೆಳೆಯಲು ಸಹಕರಿಸಿ ಎಂದು ಶಾಸಕ ಜಿ.ಟಿ.ದೇವೇಗೌಡರೂ ಸಲಹೆ ನೀಡಿದರು.
ಶೇಕಡಾ 50ರಷ್ಟು ಮಂದಿ ಅಧಿಕಾರಿಗಳು ಫೀಲ್ಡ್‍ಗೇ ಹೋಗುವುದಿಲ್ಲ. ಬೆಳೆ ಸ್ಥಿತಿಗತಿ, ರೈತರಿಗೆ ಯಾವ ಯಾವ ಅವಧಿಯಲ್ಲಿ ಏನೇನು ಬೇಕಾಗುತ್ತದೆ ಎಂಬುದನ್ನು ಖುದ್ದು ಪರಿಶೀಲನೆ ಮಾಡದಿದ್ದರೆ ಕೃಷಿ, ತೋಟಗಾರಿಕೆ ಉತ್ಪನ್ನಗಳು ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಯಾಗುವುದಿಲ್ಲ ಎಂದು ಅವರು ನುಡಿದರು. ಮುಂದೆ ಕೆಜಿ ರೇಷ್ಮೆಗೆ 7000 ರೂ. ಬೆಲೆ ಬರು ತ್ತದೆಯಾದ್ದರಿಂದ ರೈತರಿಗೆ ರೇಷ್ಮೆ ಬೆಳೆಯಲು ಉತ್ತೇ ಜನ ನೀಡಿ, ಅವರ ಬದುಕೂ ಹಸನಾಗುತ್ತದೆಯಲ್ಲದೇ, ಗ್ರಾಹಕರ ಬೇಡಿಕೆಗೆ ತಕ್ಕಂತೆ ರೇಷ್ಮೆ ಉತ್ಪನ್ನಗಳನ್ನು ಪೂರೈಸಿದಂತಾಗುತ್ತದೆ ಎಂದು ಶಾಸಕ ಜಿ.ಟಿ.ದೇವೇ ಗೌಡರು ಅಧಿಕಾರಿಗಳಿಗೆ ತಿಳಿಸಿದರು.