ನಷ್ಟಕ್ಕೀಡಾದ ಹೂ, ಹಣ್ಣು-ತರಕಾರಿ ಬೆಳೆವ ರೈತರಿಗೆ 168 ಕೋಟಿ ರೂ. ಪರಿಹಾರ
ಮೈಸೂರು

ನಷ್ಟಕ್ಕೀಡಾದ ಹೂ, ಹಣ್ಣು-ತರಕಾರಿ ಬೆಳೆವ ರೈತರಿಗೆ 168 ಕೋಟಿ ರೂ. ಪರಿಹಾರ

June 16, 2020

ಮೈಸೂರು,ಜೂ.15(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾರು ಕಟ್ಟೆ ಇಲ್ಲದೆ ನಷ್ಟ ಅನುಭವಿ ಸಿರುವ ಹೂ, ಹಣ್ಣು-ತರಕಾರಿ ಬೆಳೆದ ರೈತರಿಗೆ ಸರ್ಕಾರ 168 ಕೋಟಿ ರೂ. ಪರಿಹಾರದ ಹಣ ಬಿಡುಗಡೆ ಮಾಡಿದೆ ಎಂದು ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.

ಮೈಸೂ ರಿನ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಸರ್ಕಾರ 168 ಕೋಟಿ ರೂ.ಗಳ ಪರಿಹಾರದ ಹಣ ಬಿಡುಗಡೆ ಮಾಡಿದೆ ಎಂದರು.

ಮೈಸೂರು ಜಿಲ್ಲೆಗೆ 7.82 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ಗುರುತಿಸಿರುವ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರದ ಹಣ ಜಮೆ ಆಗುತ್ತಿದೆ. ಯಾವುದೇ ಕಾರಣಕ್ಕೂ ಹಣ ಪೋಲಾಗದಂತೆ ಎಚ್ಚರ ವಹಿಸಲಾಗುತ್ತಿದೆ ಎಂದರು. ಹೂ, ಬಾಳೇ ಹಣ್ಣು, ತರಕಾರಿ ಬೆಳೆದ ರೈತರು ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅವುಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ತೋಟಗಾರಿಕಾ ಉತ್ಪನ್ನಗಳನ್ನು ಬೀದಿಗೆ ಸುರಿದು ನಷ್ಠ ಅನುಭವಿಸಿರುವುದರಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಹೆಕ್ಟೇರ್‍ಗೆ 25,000 ರೂ. ನಂತೆ ಪರಿಹಾರ ನೀಡಲಾಗುತ್ತಿದೆ ಎಂದು ನಾರಾಯಣಗೌಡರು ತಿಳಿಸಿದ್ದಾರೆ.

ಪೌರ ಸಮಸ್ಯೆ: ಮೈಸೂರು ಜಿಲ್ಲೆಯ ಕೆಲವೆಡೆ ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆಯಂತಹ ನಾಗರಿಕ ಸೌಲಭ್ಯದ ಕೊರತೆ ಇದೆ ಎಂಬ ದೂರು ಜನಪ್ರತಿ ನಿಧಿಗಳಿಂದ ಕೇಳಿ ಬಂದಿರುವುದರಿಂದ ಸ್ಥಳೀಯ ಪುರಸಭೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಸಾರ್ವಜನಿಕರ ಸಮಸ್ಯೆಯನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಸೂಚಸಿರು ವುದಾಗಿಯೂ ಸಚಿವ ನಾರಾಯಣಗೌಡ ತಿಳಿಸಿದರು.

Translate »