ಮರಳಿ ಕಾಡಿಗೆ ಕುಶ: ಇನ್ನು ಸಂಗಾತಿ ಸಂಪ್ರೀತಿ
ಮೈಸೂರು

ಮರಳಿ ಕಾಡಿಗೆ ಕುಶ: ಇನ್ನು ಸಂಗಾತಿ ಸಂಪ್ರೀತಿ

April 29, 2021

ಕುಶಾಲನಗರ, ಏ.28-ಶಿಬಿರದಿಂದ ಪರಾರಿಯಾಗಿ ವರ್ಷದ ನಂತರ ಅರಣ್ಯ ಸಿಬ್ಬಂದಿಯಿಂದ ಸೆರೆ ಹಿಡಿಯಲ್ಪಟ್ಟಿರುವ `ಕುಶ’ ಆನೆಯನ್ನು ದುಬಾರೆ ಸಾಕಾನೆ ಶಿಬಿರದಿಂದ ಮತ್ತೆ ಅರಣ್ಯಕ್ಕೆ ಬಿಡ ಬೇಕೆಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದ್ದಾರೆ.

ಶಿಬಿರದಿಂದ ಪರಾರಿಯಾದ ನಂತರ ಕಾಡಾನೆಗಳ ಜೊತೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಕುಶನನ್ನು ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರದ ಕ್ರಾಲ್‍ನಲ್ಲಿ ಬಂಧಿಸಿಟ್ಟು, ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತ ಪಡಿಸಿದರು. ಹಾಲಿ ಸಂಸದರಾಗಿರುವ ಮಾಜಿ ಸಚಿವೆ ಮೇನಕಾಗಾಂಧಿ ಕೂಡ ಅದಕ್ಕೆ ಧನಿಗೂಡಿಸಿದ್ದರು. ಈ ಹಿನ್ನೆಲೆ ಯಲ್ಲಿ ಇಂದು ಬೆಂಗಳೂರಿನಲ್ಲಿ ಹಿರಿಯ ಅರಣ್ಯಾಧಿಕಾರಿಗಳ ಸಭೆಯನ್ನು ಸಚಿವ ಅರವಿಂದ ಲಿಂಬಾವಳಿ ನಡೆಸಿದರು. ಈ ವೇಳೆ ಅಧಿಕಾರಿಗಳು ಕುಶ ಆನೆಯನ್ನು ಈ ಹಿಂದೆ ಸರ್ಕಾರದ ಆದೇಶದ ಮೇರೆಗೆ ಸೆರೆ ಹಿಡಿದು ದುಬಾರೆ ಶಿಬಿರದಲ್ಲಿಡಲಾ ಗಿತ್ತು. ಕಳೆದ ವರ್ಷ ಈ ಆನೆ ಕಾಡಿಗೆ ಹೋದ ನಂತರ ನಾಪತ್ತೆಯಾಗಿತ್ತು. ಅದನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿದೆ. ಆನೆಗೆ ಯಾವುದೇ ತರಹದ ಹಿಂಸೆ ನೀಡಿಲ್ಲ, ಅದು ಆರೋಗ್ಯವಾಗಿದೆ. ಮಾವುತರು ನೀಡುವ ನಿರ್ದೇಶನಗಳನ್ನು ಪಾಲಿಸುವ ಹಂತದಲ್ಲಿದೆ ಎಂದು ಸಚಿವರಿಗೆ ವಿವರಿ ಸಿದರು. ಕೊನೆಗೆ ಸಚಿವರು ಕುಶ ಆನೆಗೆ ರೇಡಿಯೋ ಕಾಲರ್ ಅಳವಡಿಸಿ, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು
ಅರಣ್ಯದಲ್ಲಿ ಸೂಕ್ತ ಸ್ಥಳವನ್ನು ನಿಗದಿಪಡಿಸಿದ ಮೇಲೆ ಅದನ್ನು ಬಿಡುಗಡೆ ಮಾಡ ಬೇಕೆಂದು ಆದೇಶಿಸಿದರು. ಈ ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯ ಕುಮಾರ್ ಗೋಗಿ ಸೇರಿದಂತೆ ಅರಣ್ಯ ಪಡೆ ಮುಖ್ಯಸ್ಥರು ಹಾಗೂ ವನ್ಯಜೀವಿ ಪರಿಪಾಲಕರು ಭಾಗವಹಿಸಿದ್ದರು. ವಿವರ: ಶಿಬಿರದಲ್ಲಿರುವ ಕಾಡಾನೆಗಳು ಮದವೇರಿದ ವೇಳೆ ಅರಣ್ಯದ ಹೆಣ್ಣಾನೆಗಳ ಸಂಗ ಮಾಡಿ ಮತ್ತೆ ಶಿಬಿರಕ್ಕೆ ಹಿಂತಿರುಗುವುದು ವಾಡಿಕೆ. ಆದರೆ ಮದವೇರಿದ್ದ ಕುಶ ಶಿಬಿರದಿಂದ ಅರಣ್ಯಕ್ಕೆ ತೆರಳಿ, ಕಾಡಾನೆ ಹಿಂಡಿನ ಜೊತೆ ಸೇರಿಕೊಂಡಿತ್ತು. ಶಿಬಿರದ ಸುತ್ತಮುತ್ತಲೇ ಅದು ಸಂಚರಿಸುತ್ತಿತ್ತಾದರೂ, ಶಿಬಿರಕ್ಕೆ ಮರಳಲಿಲ್ಲ. ಅನೇಕ ಬಾರಿ ಕುಶನನ್ನು ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಪ್ರಯತ್ನಿಸಿದಾಗ ಕಾಡಾನೆ ಹಿಂಡು ಕುಶನಿಗೆ ರಕ್ಷಣೆಯಾಗಿ ನಿಂತು ಪ್ರತಿರೋಧ ಒಡ್ಡಿದ ಕಾರಣ ಅರಣ್ಯ ಸಿಬ್ಬಂದಿಯ ಪ್ರಯತ್ನ ಸಫಲವಾಗಿರಲಿಲ್ಲ. ಕೊನೆಗೆ ಮಾ.31ರಂದು ಮೀನುಕೊಲ್ಲಿ ಅರಣ್ಯ ಪ್ರದೇಶದಲ್ಲಿ ಕುಶನನ್ನು ಸೆರೆ ಹಿಡಿಯಲಾಗಿತ್ತು. ಒಂದು ವರ್ಷ ಕಾಲ ಕಾಡಾನೆಗಳ ಸಹವಾಸದಲ್ಲಿದ್ದ ಕುಶ, ಸ್ವಾಭಾವಿಕವಾಗಿಯೇ ಕಾಡಾನೆಯಾಗಿ ಪರಿವರ್ತನೆ ಹೊಂದಿದ್ದ. ಮೃದು ಸ್ವಭಾವ ಹೋಗಿ ಪುಂಡಾಟಿಕೆ ಬೆಳೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕುಶನನ್ನು ಕ್ರಾಲ್‍ನಲ್ಲಿ ಹಾಕಿ ಪಳಗಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿತ್ತು.

ಪ್ರಾಣಿಪ್ರಿಯರ ಆಕ್ಷೇಪ: ಅರಣ್ಯ ಇಲಾಖೆಯ ಈ ಕ್ರಮಕ್ಕೆ ಪ್ರಾಣಿಪ್ರಿಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಾಣಿಪ್ರಿಯರೂ ಆಗಿರುವ ಕೇಂದ್ರದ ಮಾಜಿ ಸಚಿವೆ ಮೇನಕಾ ಗಾಂಧಿ ಅವರು, ಕುಶ ಆನೆಗೆ ಪಳಗಿಸುವ ನೆಪದಲ್ಲಿ ಕ್ರಾಲ್‍ನಲ್ಲಿ ಹಾಕಿ ಹಿಂಸೆ ನೀಡಲಾಗುತ್ತಿದೆ. ಅದರ ಕಾಲಿಗೆ ಸರಪಳಿ ಕಟ್ಟಿರುವುದರಿಂದ ಗಾಯವಾಗಿದೆ. ಕುಶ ಸಂಗಾತಿ ನೆನೆದು ವೇದನೆ ಅನುಭವಿಸುತ್ತಿದ್ದಾನೆ. ಆನೆಗೆ ನೀಡುತ್ತಿರುವ ಹಿಂಸೆಯನ್ನು ತಪ್ಪಿಸಬೇಕೆಂದು `ಪೀಪಲ್ಸ್ ಫಾರ್ ಅನಿಮಲ್’ ಸಂಸ್ಥೆಗೆ ಇ-ಮೇಲ್ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಸವಿತಾ ನಾಗಭೂಷಣ್ ಮತ್ತು ಹಿರಿಯ ಪಶು ವೈದ್ಯಾಧಿಕಾರಿ ಡಾ. ಅಮರ್‍ದೀಪ್ ಸಿಂಗ್ ನೇತೃತ್ವದ ತಂಡ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕುಶನನ್ನು ಮತ್ತೆ ಕಾಡಿಗೆ ಬಿಡುವಂತೆ ಅರಣ್ಯ ಸಚಿವರು ಆದೇಶ ನೀಡಿದ್ದಾರೆ.

ಖಾಸಗಿ ವ್ಯಕ್ತಿ ಬಳಿ ಇರುವ ಸಾಕಾನೆಗಳನ್ನು ವಶಕ್ಕೆ ಪಡೆಯಲು ಆದೇಶ: ದುಬಾರೆ ಸಮೀಪ ಪ್ರಜ್ಞಾ ಚೌಟ ಎಂಬುವರು ಐದು ಮರಿ ಆನೆ ಒಳಗೊಂಡಂತೆ ಒಟ್ಟು 7 ಆನೆಗಳನ್ನು ಸಾಕುತ್ತಿದ್ದು, ಅವುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯುವಂತೆ ಇದೇ ವೇಳೆ ಸಚಿವರು ಆದೇಶ ನೀಡಿದರು. ಪ್ರಜ್ಞಾ ಚೌಟ ಆನೆಗಳನ್ನು ಸಾಕುತ್ತಿರುವ ಬಗ್ಗೆ ಸ್ಥಳೀಯರಿಂದ ಹಲವಾರು ಬಾರಿ ಆಕ್ಷೇಪಗಳು ವ್ಯಕ್ತವಾಗಿವೆ.

Translate »