ಮೈಸೂರು ಸಂಪೂರ್ಣ ಸ್ತಬ್ಧ
ಮೈಸೂರು

ಮೈಸೂರು ಸಂಪೂರ್ಣ ಸ್ತಬ್ಧ

April 29, 2021
  • ಅಗತ್ಯ ಸೇವೆಗೂ ನೀರಸ ಪ್ರತಿಕ್ರಿಯ
  • ವಾಹನ ಸಂಚಾರ ವಿರಳಾತಿ ವಿರಳ

ಮೈಸೂರು, ಏ. 28(ಆರ್‍ಕೆ)- ಕೊರೊನಾ ಕಫ್ರ್ಯೂ ಜಾರಿಯಾದ ಮೊದಲ ದಿನವಾದ ಇಂದು ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನತೆ ಸ್ವಯಂ ಬಂದ್‍ಗೆ ಬೆಂಬಲಿಸಿದ್ದಾರೆ.

ನಿರ್ಬಂಧಕ್ಕೆ ವಿನಾಯಿತಿ ನೀಡಿದ್ದ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಹಣ್ಣು, ಹಾಲು, ತರಕಾರಿ, ದಿನಸಿ, ಮದ್ಯದಂಗಡಿಗಳಿಗೆ ಮುಗಿಬಿದ್ದು ಅಗತ್ಯ ವಸ್ತು ಖರೀದಿಸಿದ ಜನರು, ರಾತ್ರಿ 9 ಗಂಟೆವರೆಗೂ ತೆರೆದಿದ್ದ ಕೆಲ ಅತ್ಯಗತ್ಯ ಸೇವೆಗಳಿಗೆ ನೀರಸ ಪ್ರತಿ ಕ್ರಿಯೆ ವ್ಯಕ್ತವಾಯಿತು. ಹೋಟೆಲ್, ರೆಸ್ಟೋರೆಂಟ್, ಬೇಕರಿಗಳಲ್ಲಿ ತಿಂಡಿ-ಊಟ ಪಾರ್ಸಲ್ ನೀಡುವ ವ್ಯವಸ್ಥೆ ಇತ್ತಾದರೂ, ಜನ, ವಾಹನ ಸಂಚಾರಕ್ಕೆ ನಿರ್ಬಂಧವಿರುವುದರಿಂದ ಅಲ್ಲಿಯೂ ವ್ಯಾಪಾರ ಅಷ್ಟಕ್ಕಷ್ಟೇ. ಮನೆ-ಮನೆಗೆ ಆಹಾರ ಪೂರೈಸುವ ಹುಡುಗರು ಮಾತ್ರ ಬೈಕುಗಳಲ್ಲಿ ಬಿರುಸಿನಿಂದ ಓಡಾಡುತ್ತಿದ್ದುದು ಮೈಸೂರು ನಗರದಾದ್ಯಂತ ಬುಧವಾರ ಕಂಡು ಬಂದಿತು. ಕೊರೊನಾ ಕಫ್ರ್ಯೂ ವಿನಿಂದಾಗಿ ದೇವರಾಜ, ವಾಣಿವಿಲಾಸ, ಮಂಡಿ, ಓಲ್ಡ್ ಆರ್‍ಎಂಸಿ ಹಾಗೂ ಬಂಡೀಪಾಳ್ಯದ ಎಪಿಎಂಸಿ ಮಾರುಕಟ್ಟೆಗಳಲ್ಲಿ ಅಂಗಡಿಗಳು ಬಂದ್ ಆಗಿದ್ದರಿಂದ ಜನರಿಲ್ಲದೆ ಭಣಗುಡುತ್ತಿದ್ದವು. ನಗರದ ಹೃದಯ ಭಾಗವಾದ ಕೆ.ಆರ್. ಸರ್ಕಲ್, ಚಿಕ್ಕಗಡಿಯಾರ ಸರ್ಕಲ್, ಮಕ್ಕಾಜಿ ಚೌಕ, ಗಾಂಧಿ ಸ್ಕ್ವೇರ್, ಬೋಟಿ ಬಜಾರ್, ಶಿವರಾಂಪೇಟೆ, ಸಂತೆಪೇಟೆ, ಡಿ.ದೇವ ರಾಜ ಅರಸ್ ರಸ್ತೆ, ಧನ್ವಂತರಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ, ಬಿ.ಎನ್. ರಸ್ತೆ, ಜೆಎಲ್‍ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಅಗ್ರಹಾರ ಸರ್ಕಲ್, ವಿವಿ.ಮೊಹಲ್ಲಾದ ಟೆಂಪಲ್ ರಸ್ತೆ, ಕಾಳಿದಾಸ ರಸ್ತೆ, ಗೋಕುಲಂ ಮುಖ್ಯ ರಸ್ತೆ, ಹೆಬ್ಬಾಳಿನ ಸೂರ್ಯಬೇಕರಿ ರಸ್ತೆ, ಅಭಿಷೇಕ್ ಸರ್ಕಲ್, ಹೆಬ್ಬಾಳು ಮುಖ್ಯ ರಸ್ತೆ ಸೇರಿದಂತೆ ಮೈಸೂರು ನಗರದಾದ್ಯಂತ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಆಗಿತ್ತು. ಇಲ್ಲಿ ಜನ, ವಾಹನ ಸಂಚಾರವೇ ಇರಲಿಲ್ಲ. ಮಾಲ್‍ಗಳು, ಡಿಪಾರ್ಟ್ ಮೆಂಟಲ್ ಸ್ಟೋರ್‍ಗಳು, ಸಿನಿಮಾ ಮಂದಿರ, ಜಿಮ್ನಾಷಿಯಂ, ಯೋಗ ಕೇಂದ್ರ, ಈಜುಕೊಳ, ಸಾರಿಗೆ ಬಸ್, ಖಾಸಗಿ ಬಸ್, ಆಟೋ, ಓಲಾ, ಊಬರ್, ಟ್ಯಾಕ್ಸಿ, ಪ್ರವಾಸಿ ವಾಹನಗಳು, ಆಟೋ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದ ಕಾರಣ ಮೈಸೂರಿನ ಎಲ್ಲಾ ರಸ್ತೆಗಳು ಖಾಲಿ-ಖಾಲಿಯಾಗಿದ್ದವು.

ಪ್ರಮುಖ ಜಂಕ್ಷನ್, ಸರ್ಕಲ್, ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಸಿಬ್ಬಂದಿ ಗಳನ್ನು ನಿಯೋಜಿಸಲಾಗಿತ್ತು, ಸರ್ಕಾರಿ ಕಚೇರಿ, ಆಸ್ಪತ್ರೆ, ವೈದ್ಯಕೀಯ ಸೇವೆ, ಆರ್‍ಟಿ-ಪಿಸಿಆರ್ ಟೆಸ್ಟ್, ಕೊರೊನಾ ಲಸಿಕೆ ಪಡೆಯಲು ಹೋಗುವವರು, ಆಂಬುಲೆನ್ಸ್, ರೋಗಿಗಳನ್ನು ಕರೆದೊಯ್ಯುವ, ಮೆಡಿಕಲ್ ಸ್ಟೋರ್‍ನಿಂದ ಔಷಧಿ ತರುವವರ ಸಂಚಾರಕ್ಕೆ ಪೊಲೀಸರು ಅಡ್ಡಿಪಡಿಸಲಿಲ್ಲ. ಮಂಗಳವಾರ ರಾತ್ರಿ 9 ಗಂಟೆಯಿಂದಲೇ ಮೈಸೂರು ನಗರ ಸಂಪೂರ್ಣ ಸ್ತಬ್ಧವಾಗಿದ್ದು, ಇಂದು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿರುವ ಕಾರಣ ಜನರು ಅಂಗಡಿಗಳಿಗೆ ತೆರಳುತ್ತಿದ್ದುದನ್ನು ಹೊರತುಪಡಿಸಿದರೆ, ನಂತರ ಚಲನ-ವಲನ- ವಾಣಿಜ್ಯ ಚಟುವಟಿಕೆ ಸ್ತಬ್ದಗೊಂಡಿತು.

ಸರ್ಕಾರಿ ಕಚೇರಿ, ಬ್ಯಾಂಕ್, ಖಾಸಗಿ ಸಂಸ್ಥೆ, ಮಾಧ್ಯಮ ಸಂಸ್ಥೆಗಳು ಕಾರ್ಯ ನಿರ್ವಹಿಸಿದರೂ, ವಾಹನ ಸಂಚಾರ ವಿರಳವಾಗಿತ್ತು. ಕರ್ತವ್ಯ ನಿರತ ಪೊಲೀಸರೂ ಅನಗತ್ಯವಾಗಿ ಅಡ್ಡಾದಿಡ್ಡಿಯಾಗಿ ಓಡಾಡುವವರನ್ನು ವಿಚಾರಿಸಿ ತಿಳುವಳಿಕೆ ಹೇಳಿ ವಾಪಸ್ ಕಳುಹಿಸುತ್ತಿದ್ದರೇ ಹೊರತು, ಅನಿವಾರ್ಯ ಕಾರಣಗಳಿಂದ ಓಡಾಡುವವರಿಗೆ ತೊಂದರೆ ನೀಡಲಿಲ್ಲವಾದ್ದರಿಂದ ಮೈಸೂರು ನಗರದಾದ್ಯಂತ ಅಲ್ಲಲ್ಲಿ ವಾಹನಗಳು ಸಂಚರಿಸುತ್ತಿದ್ದುದು ಕಂಡು ಬಂದಿತು. ಕಫ್ರ್ಯೂ ಜಾರಿಯಲ್ಲಿದ್ದರೂ ಕೊರೊನಾ ಟೆಸ್ಟ್, ಲಸಿಕೆ ನೀಡುವ ಕೇಂದ್ರಗಳು ಕಾರ್ಯನಿರ್ವಹಿಸಿದ್ದರಿಂದ ಜನರನ್ನು ಕರೆದೊಯ್ಯುವ ವಾಹನಗಳು ಅಲ್ಲಲ್ಲಿ ಕಾಣಿಸಿಕೊಂಡವು. ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‍ಗಳಿಗೆ ರೋಗಿಗಳನ್ನು ಕರೆದೊಯ್ಯುವ ಆಂಬುಲೆನ್ಸ್‍ಗಳು, ಸಾವಿಗೀಡಾದ ಸೋಂಕಿತರ ಮೃತದೇಹಗಳನ್ನು ಮುಕ್ತಿಧಾಮಕ್ಕೆ ಕೊಂಡೊಯ್ಯುವ ವಾಹನಗಳ ಸಂಚಾರ ಬುಧವಾರ ದಟ್ಟವಾಗಿತ್ತು. ಪರಿಣಾಮ ಆಟೋ, ಟ್ಯಾಕ್ಸಿ, ಪ್ರವಾಸಿ ವಾಹನ, ಆಟೋ ಚಾಲಕರು, ಸಣ್ಣಪುಟ್ಟ ಅಂಗಡಿ, ಟೀಶಾಪ್, ರಸ್ತೆ ಬದಿ ವ್ಯಾಪಾರಿಗಳು, ಫಾಸ್ಟ್‍ಫುಡ್ ಅಂಗಡಿಗಳು ಸೇರಿದಂತೆ ಸಾವಿರಾರು ವಾಣಿಜ್ಯ ಮಳಿಗೆಗಳ ಮಾಲೀಕರು ವ್ಯಾಪಾರ-ವಹಿವಾಟಿಲ್ಲದೆ ಕಂಗಾಲಾಗಿದ್ದಾರೆ. ಔಷಧಿ ಅಂಗಡಿ, ಆಸ್ಪತ್ರೆ, ಡಯಾಗ್ನೋಸ್ಟಿಕ್ ಸೆಂಟರ್, ಕಟ್ಟಡ ಸಾಮಗ್ರಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವಲ್ಲದೆ, ವ್ಯಾಪಾರವನ್ನೇ ನಂಬಿ ದಿನ ದೂಡುತ್ತಿದ್ದವರಿಗೆ ಕೊರೊನಾ ಕಫ್ರ್ಯೂ ಶಾಪವಾಗಿ ಪರಿಣಮಿಸಿದೆ. ಇನ್ನು ಸರಕು ಸಾಗಣೆ ವಾಹನಗಳ ಸಂಚಾರ, ಅಗತ್ಯ ಸೇವೆ ಒದಗಿಸುವ ವಾಹನ, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ವಾಹನ ಸಂಚಾರ ಎಂದಿನಂತಿತ್ತು. ಒಟ್ಟಾರೆ ಮೊದಲ ದಿನವಾದ ಬುಧವಾರ ಕೊರೊನಾ ಕಫ್ರ್ಯೂ ಜನರ ಸಹಕಾರದಿಂದ ಯಶಸ್ವಿಯಾಗಿದೆ.

Translate »