ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವು
ಮೈಸೂರು

ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವು

October 6, 2018

ಮೈಸೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ್ದು, ಈ ಸಂಬಂಧ ಕಟ್ಟಡದ ಮಾಲೀಕ ಹಾಗೂ ಇಂಜಿನಿಯರ್ ವಿರುದ್ಧ ದೂರು ದಾಖಲಾಗಿದೆ.

ನಂಜನಗೂಡು ತಾಲೂಕು, ಹುಲ್ಲಹಳ್ಳಿ ಸಮೀಪದ ಚಿಲಕಹಳ್ಳಿ ಗ್ರಾಮದ ಕೃಷ್ಣಮೂರ್ತಿ(28) ಕಟ್ಟಡದಿಂದ ಆಯತಪ್ಪಿ ಬಿದ್ದು ಮೃತಪಟ್ಟಿರುವ ಕಾರ್ಮಿಕ. ಮೈಸೂರಿನ ಬೋಟಿ ಬಜಾರ್ ರಸ್ತೆ, ಮನ್ನಾರ್ಸ್ ಮಾರ್ಕೆಟ್ ಹಿಂಭಾಗ ನಿರ್ಮಾಣ ಹಂತದ ಕಟ್ಟಡದ 3ನೇ ಮಹಡಿಯಲ್ಲಿ ಗುರುವಾರ ಬೆಳಿಗ್ಗೆ ಸುಮಾರು 8 ಗಂಟೆ ವೇಳೆಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ರಕ್ಷಣಾತ್ಮಕ ವ್ಯವಸ್ಥೆಯಿಲ್ಲದೆ ಕೃಷಮೂರ್ತಿ ಅವರಿಗೆ ಸೆಂಟ್ರಿಂಗ್ ಕೆಲಸ ಮಾಡಲು ಸೂಚಿಸಿದ ಆರೋಪದಡಿ ಕಟ್ಟಡದ ಮಾಲೀಕ ಶ್ರೀನಿವಾಸರಾವ್ ಹಾಗೂ ಇಂಜಿನಿಯರ್ ಚಿನ್ನಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೃಷ್ಣಮೂರ್ತಿ ಅವರ ಪತ್ನಿ ಸುಮಲತಾ, ದೇವರಾಜ ಠಾಣೆಗೆ ದೂರು ನೀಡಿದ್ದಾರೆ.

Translate »