ಪೊಲೀಸರು ಜನ ಸ್ನೇಹಿಯಾಗಲು ಸಲಹೆ
ಕೊಡಗು

ಪೊಲೀಸರು ಜನ ಸ್ನೇಹಿಯಾಗಲು ಸಲಹೆ

October 6, 2018

ಸೋಮವಾರಪೇಟೆ:  ಪೊಲೀಸರು ಜನಸ್ನೇಹಿ ಯಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಸಾರ್ವಜನಿಕರ ಸಹಕಾರ ಸಿಗುತ್ತದೆ ಎಂದು ಪೊಲೀಸ್ ಉಪ ಅಧೀಕ್ಷಕ ಪೆರುಬಾಯಿ ಕೆ.ಮುರಳೀಧರ್ ಹೇಳಿದರು.

ಪಟ್ಟಣದಲ್ಲಿ ಉಪ ಆರಕ್ಷಕ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಚಾಮರಾಜನಗರಕ್ಕೆ ವರ್ಗಾವಣೆಗೊಂಡಿರುವ ಶಿವಣ್ಣ ಅವರಿಗೆ ಐಗೂರಿನ ಸ್ಪ್ರಿಂಗ್ ವ್ಯಾಲಿ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟಣದ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದ ಶಿವಣ್ಣ ಅವರು 1998ರ ಬ್ಯಾಚ್‍ನ ಅಧಿಕಾರಿಯಾಗಿದ್ದು, ಉತ್ತಮ ಸೇವೆ ಸಲ್ಲಿಸಿದ್ದಾರೆ. ಎಂದೂ ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರ ದಂತೆ ಕೆಲಸ ಮಾಡಿದ್ದಾರೆ. ಸೋಮವಾರಪೇಟೆಯಂತಹ ಅತೀ ಸೂಕ್ಷ್ಮ ಪ್ರದೇಶದಲ್ಲಿ ತಮ್ಮ ಕರ್ತವ್ಯವನ್ನು ಉತ್ತಮ ವಾಗಿ ನಿಭಾಯಿಸಿದ್ದಾರೆ. ಅವರಿಗೆ ಶೀಘ್ರವಾಗಿ ಬಡ್ತಿ ಸಿಗಲಿ ಎಂದು ಹಾರೈಸಿದರು. ಸನ್ಮಾನ ಸ್ವೀಕರಿಸಿದ ಶಿವಣ್ಣ ಮಾತ ನಾಡಿ, ಪೊಲೀಸ್ ಇಲಾಖೆಯಲ್ಲಿನ ಕೆಲಸ ಕಠಿಣವಾ ದರೂ, ಬಹಳ ಎಚ್ಚರಿಕೆಯಿಂದ ಹಾಗೂ ಜಾಗರೂಕತೆ ಯಿಂದ ನಿರ್ವಹಿಸಬೇಕು ಎಂದು ಕಿರಿಯ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು. ಸಮಾಜದ ಕೆಲಸ ಮಾಡುವಾಗ ಕೆಲವೊಮ್ಮೆ ಕುಟುಂಬವನ್ನು ಮರೆತು ಕರ್ತವ್ಯ ಮಾಡ ಬೇಕಾಗುತ್ತದೆ. ಆರೋಪಿಗಳನ್ನು ಸೆರೆ ಹಿಡಿಯುವ ಸಂದರ್ಭ ಮೈಯೆಲ್ಲಾ ಕಣ್ಣಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಪಟ್ಟಣದ ಠಾಣೆಗೆ ಆಗಮಿಸಿದ ಸಂದರ್ಭ ಹಲವಾರು ಸಮಸ್ಯೆಗಳೊಂದಿಗೆ ಬಂದಿದ್ದೆ. ಆದರೆ ಕಾವೇರಿ ತಾಯಿಯ ಆಶೀರ್ವಾದದಿಂದ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಿ ಚಾಮರಾಜನಗರಕ್ಕೆ ವರ್ಗಾವಣೆಗೊಂಡಿದ್ದೇನೆ ಎಂದು ಕೊಡಗಿನ ಬಗ್ಗೆ ಹೆಮ್ಮೆಯ ನುಡಿಯಾಡಿದರು. ಕಳೆದ 20 ವರ್ಷಗಳಿಂದ ರಾಜ್ಯದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಆದರೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯಲ್ಲಿನ ನಾಗರಿಕರು ಕಾನೂನಿಗೆ ಗೌರವ ಕೊಡುವಷ್ಟು ಬೇರೆಲ್ಲೂ ತಾವು ಕಂಡಿಲ್ಲ ಎಂದು ಹೇಳಿದರು. ಇದೇ ಸಂದರ್ಭ ಸೋಮವಾರಪೇಟೆ ಠಾಣೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ರವೀಂದ್ರನಾಥ್, ಕೃಷ್ಣಪ್ಪ, ಸುನಿಲ್ ಅವರುಗಳನ್ನು ಸಹ ಆತ್ಮೀಯವಾಗಿ ಬೀಳ್ಕೊಡಲಾಯಿತು. ವೇದಿಕೆಯಲ್ಲಿ ಪೊಲೀಸ್ ವೃತ್ತ ಆರಕ್ಷಕ ನಿರೀಕ್ಷಕ ನಂಜುಂಡೇಗೌಡ, ಸುಂಟಿಕೊಪ್ಪ ಠಾಣಾಧಿಕಾರಿ ಜಯ ರಾಮ್ ಇತರರು ಉಪಸ್ಥಿತರಿದ್ದರು.

Translate »