ಕಚ್ಚಾ ವಸ್ತುಗಳ ಕೊರತೆ;  ಔಷಧಿಗಳ ಬೆಲೆ ಏರಿಕೆ ಸಾಧ್ಯತೆ
News

ಕಚ್ಚಾ ವಸ್ತುಗಳ ಕೊರತೆ; ಔಷಧಿಗಳ ಬೆಲೆ ಏರಿಕೆ ಸಾಧ್ಯತೆ

March 22, 2021

ಬೆಂಗಳೂರು, ಮಾ.21- ಕಚ್ಚಾ ವಸ್ತುಗಳ ಕೊರತೆ ಹಾಗೂ ಇನ್ನಿತರೆ ಕಾರಣಗಳಿಂ ದಾಗಿ ಅಗತ್ಯ ಔಷಧಿಗಳ ಬೆಲೆ ಏಪ್ರಿಲ್‍ನಿಂದ ಶೇ.20ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ)ವನ್ನು ಆಧರಿಸಿ ಔಷಧಿ ಬೆಲೆ ಪರಿಷ್ಕರಣೆಗೆ ಸರ್ಕಾರ ಅವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ಔಷಧ ಉತ್ಪಾದಕರು ದರ ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಪರಿಣಾಮ ನೋವು ನಿವಾರಕ, ಸೋಂಕು ನಿವಾರಕ, ಹೃದಯ ಕಾಯಿಲೆ, ಆ್ಯಂಟಿ ಬಯಾಟಿಕ್ಸ್ ಇನ್ನಿತರ ಅಗತ್ಯ ಔಷಧಿಗಳ ದರ ಏಪ್ರಿಲ್‍ನಿಂದ ಶೇ.20 ಏರಿಕೆಯಾಗಬಹುದು ಎಂದು ತಿಳಿದುಬಂದಿದೆ.

ಪ್ರತಿ ವರ್ಷ ಸಗಟು ದರ ಸೂಚ್ಯಂಕ ಆಧರಿಸಿ ವರ್ಗೀಕೃತ ಔಷಧಗಳ ದರ ಏರಿಕೆಗೆ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ಅನುಮತಿ ನೀಡುತ್ತದೆ. ಇದರ ಆಧಾರದಲ್ಲಿ ಉತ್ಪಾದನಾ ವೆಚ್ಚ ಶೇ.15-20ರಷ್ಟು ಹೆಚ್ಚಳವಾಗಿರುವುದರಿಂದ ಔಷಧಗಳ ಬೆಲೆ ಹೆಚ್ಚಿಸಲಾಗುವುದು ಎಂದು ಬಲ್ಲಮೂಲಗಳು ತಿಳಿಸಿವೆ. ಅಲ್ಲದೆ ಹೃದಯ ಸಂಬಂಧಿತ ಕಾಯಿಲೆ, ಡಯಾಬಿಟಿಸ್ ಔಷಧಗಳು, ಆ್ಯಂಟಿ ಬಯಾಟಿಕ್ಸ್, ಸೋಂಕು ನಿವಾರಕ ಔಷಧಗಳ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಚೀನಾದಿಂದ ಆಮದಾಗುತ್ತವೆ. ಆದರೆ ಕೊರೊನಾದಿಂದಾಗಿ ಕಚ್ಚಾ ವಸ್ತುಗಳ ಪೂರೈಕೆ ಅಸ್ತವ್ಯಸ್ತವಾಗಿರುವುದು ಔಷಧ ಬೆಲೆ ಹೆಚ್ಚಳಕ್ಕೆ ಮತ್ತೊಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಆದರೂ ಮುಂದಿನ ದಿನಗಳಲ್ಲಿ ಕಚ್ಚಾ ವಸ್ತುಗಳ ಆಮದು ಹೆಚ್ಚಳವಾಗುವ ನಿರೀಕ್ಷೆ ಇರುವುದರಿಂದ ಬೆಲೆ ಹೆಚ್ಚಳಕ್ಕೆ ಬ್ರೇಕ್ ಬೀಳಬಹುದು. ಇದರ ನಡುವೆ ಬೆನ್ನು ನೋವಿನ ಕಾಯಿಲೆಗೆ ಸಂಬಂಧಿಸಿದ ಔಷಧಗಳ ಮೇಲಿನ ಆಮದು ಸುಂಕವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Translate »