ಕೇವಲ 24 ಗಂಟೆಗಳಲ್ಲೇ ಭೂಪರಿವರ್ತನೆ
News

ಕೇವಲ 24 ಗಂಟೆಗಳಲ್ಲೇ ಭೂಪರಿವರ್ತನೆ

September 14, 2021

ಬೆಂಗಳೂರು: ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಉತ್ತೇಜನ ನೀಡುವ ಸಲುವಾಗಿ ಮತ್ತು ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ನಿಯಮವನ್ನು ಸರಳಗೊಳಿಸಿದ್ದು ಕೇವಲ 24 ಗಂಟೆಗಳಲ್ಲೇ ಭೂ ಪರಿವರ್ತನೆ ಮಾಡ ಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಇದು ಹಲವು ರೈತರ ಪ್ರಮುಖ ಸಮಸ್ಯೆಯಾಗಿದೆ, ಈ ಸಂಬಂಧ ಸಭೆ ಕರೆಯಲಾಗಿದ್ದು ಇಡೀ ಪ್ರಕ್ರಿಯೆಯನ್ನು ಸರಳಗೊಳಿಸಲು ನಿರ್ಧರಿಸಲಾಗಿದೆ. ಕೃಷಿ ಭೂಮಿ ಪರಿವರ್ತನೆಯ ಸಂಬಂಧ ಹಲವು ದೂರುಗಳು ಕೇಳಿ ಬರುತ್ತಿವೆ. ಹೊಸದಾಗಿ ರೂಪಿಸಿರುವ ನಿಯಾಮಾವಳಿ ಯಿಂದ ಪ್ರಕ್ರಿಯೆ ಸರಳಗೊಳ್ಳಲಿದೆ, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹೊಸ ಪ್ರಕ್ರಿಯೆಯ ಪ್ರಕಾರ ಕಂದಾಯ ಇಲಾಖೆಯು ಭೂ ಪರಿವರ್ತನೆಗೆ ಅರ್ಜಿ ಯನ್ನು ಉಪ ಆಯುಕ್ತರಿಂದ ಯೋಜನಾ ಪ್ರಾಧಿಕಾರಕ್ಕೆ ಕಳುಹಿಸುತ್ತದೆ, ನಂತರ ಕಡತವು ಎಲ್ಲಾ ಭೂಸ್ವಾಧೀನ ಅಧಿಕಾರಿಗಳು, ತಹಶೀಲ್ದಾರ್, ಕಂದಾಯ ನಿರೀಕ್ಷಕರು ಮತ್ತು ಅಂತಿಮವಾಗಿ ಗ್ರಾಮ ಲೆಕ್ಕಿಗರಿಗೆ ಕಳುಹಿಸಲಾಗುತ್ತದೆ. ಭೂಮಿಯನ್ನು ಪರಿವರ್ತಿಸುವ ಹೊತ್ತಿಗೆ, ಸುಮಾರು 6 ತಿಂಗಳು ಸಮಯವಕಾಶ ತೆಗೆದುಕೊಳ್ಳುತ್ತದೆ ಮತ್ತು ಬಹು ಸಂಖ್ಯೆಯ ವರದಿಗಳು ಬೇಕಾಗುತ್ತವೆ ಎಂದು ಅಶೋಕ್ ಹೇಳಿದ್ದಾರೆ.

ಪ್ರಸ್ತುತ ವ್ಯವಸ್ಥೆಯನ್ನು ಬದಲಿಸಲು ತಿದ್ದುಪಡಿಯನ್ನು ಅಂಗೀಕರಿಸುವ ಅಗತ್ಯವಿದೆ, ಖಾತಾ ಅಪ್‍ಡೇಟ್ ಮಾಡದಿರುವ ಮತ್ತು ಪೌತಿ-ಆನುವಂಶಿಕತೆಯನ್ನು ಸರಿಯಾಗಿ ನಡೆಸದ ಅನೇಕ ಉದಾಹರಣೆಗಳಿವೆ. ಪೌತಿ ಸೃಷ್ಟಿ ಸರಾಗವಾಗಿದೆಯೇ ಎಂದು ಖಚಿತ ಪಡಿಸಿಕೊಳ್ಳಲು ನಾವು ಒಂದು ವಿಧಾನವನ್ನು ರೂಪಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಆಸ್ತಿ ದಾಖಲೆಗಳಲ್ಲಿ ಸಮಸ್ಯೆಗಳಿದ್ದರೇ, ಸಹಾಯಧನಕ್ಕೆ ಅರ್ಹರಾದ ರೈತರು ಪ್ರತಿ ವರ್ಷ ಕೇಂದ್ರದಿಂದ 6,000 ಮತ್ತು ರಾಜ್ಯದಿಂದ 4,000 ರು ಹಣ ಪಡೆಯುವುದಿಲ್ಲ. ಅವರು ಸಬ್ಸಿಡಿಗಳನ್ನೂ ಕಳೆದುಕೊಳ್ಳುತ್ತಾರೆ. ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ನಾನು ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು.

ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲಾಗುವುದು. ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು ಅವರ ಮನೆಬಾಗಿಲಿಗೆ ತೆರಳಿ ಪರಿಹರಿಸಲಾಗುವುದು ಎಂದು ಹೇಳಿ ದ್ದಾರೆ. ಸಾಂಕ್ರಾಮಿಕ ರೋಗದ ಕಾರಣ ಯೋಜನೆ ಪ್ರಾರಂಭವಾದ ನಂತರ ಅದನ್ನು ನಿಲ್ಲಿಸಬೇಕಾಯಿತು ಎಂದರು. ವೃದ್ಧಾಪ್ಯ ವೇತನವನ್ನು ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ಪ್ರಸ್ತಾವನೆಯನ್ನು ನಾವು ರೂಪಿಸುತ್ತಿದ್ದೇವೆ. ಇದರಿಂದ 30,000 ಪಿಂಚಣಿ ದಾರರಿಗೆ ಅನುಕೂಲವಾಗಲಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಇನ್ನೂ ಎರಡು ಲಕ್ಷ ಪಿಂಚಣಿದಾರರು ಸ್ವಯಂಚಾಲಿತವಾಗಿ ಹಣವನ್ನು ಸ್ವೀಕರಿಸುತ್ತಾರೆ ಎಂದು ಹೇಳಿದರು.

Translate »