ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಆಘಾತಕಾರಿ: ಹೆಚ್‍ಸಿಎಂ
ಮೈಸೂರು

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಆಘಾತಕಾರಿ: ಹೆಚ್‍ಸಿಎಂ

June 26, 2020

ಮೈಸೂರು, ಜೂ.25(ಪಿಎಂ)- ರಾಜ್ಯ ದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಸುಧಾರಿಸಿ ಕೊಳ್ಳುವ ವೇಳೆಗಾಗಲೇ ಕೊರೊನಾ ಸೋಂಕಿನ ಬಿಕ್ಕಟ್ಟು ಉದ್ಬವಿಸಿದೆ. ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಗಮನ ಹರಿಸದೇ `ಕರ್ನಾಟಕ ಭೂ ಸುಧಾರಣಾ ಕಾಯ್ದೆ’ ತಿದ್ದುಪಡಿಗೆ ರಾಜ್ಯ ಸರ್ಕಾರ ಸಚಿವ ಸಂಪುಟ ದಲ್ಲಿ ತೀರ್ಮಾನ ಕೈಗೊಂಡಿರುವುದು ಆಘಾತ ಕಾರಿ ಬೆಳವಣಿಗೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಖಂಡಿಸಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಶತಮಾನದಲ್ಲಿ ಕಂಡರಿಯದ ಪ್ರವಾಹದ ಸಂಕಷ್ಟದಿಂದ ರಾಜ್ಯದ ಜನತೆ ಸುಧಾರಿಸಿ ಕೊಳ್ಳುತ್ತಿರುವಾಗಲೇ ಕೊರೊನಾ ಸಂಕಷ್ಟ ಪರಿಸ್ಥಿತಿ ತಂದಿಟ್ಟಿದೆ. ಆ ಬಗ್ಗೆ ಗಮನ ಹರಿಸದೇ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಧನವಂತರಿಗೆ ಕೃಷಿಭೂಮಿ ನೀಡಲು ಸರ್ಕಾರ ಹೊರಟಿದೆ ಎಂದು ಟೀಕಿಸಿದರು.

1951ರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಗೋಡು ಗ್ರಾಮದಲ್ಲಿ ಭೂ ಸುಧಾರಣೆಗಾಗಿ ದೊಡ್ಡ ಚಳವಳಿಯೇ ನಡೆ ಯಿತು. ಇದು ಅಂತಾರಾಷ್ಟ್ರೀಯ ಮಟ್ಟ ದಲ್ಲೂ ಗಮನ ಸೆಳೆಯಿತು. ಅದೇ ಜಿಲ್ಲೆ ಯಿಂದ ಬಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದಲ್ಲಿಯೇ ಇಂದು ರೈತರಿಂದ ಭೂಮಿ ಕಿತ್ತುಕೊಳ್ಳ ಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಕೃಷಿ ಭೂಮಿ ಖರೀದಿಸಲು ಇದ್ದ ಕೃಷಿಯೇತರ ಮೂಲದ ವಾರ್ಷಿಕ 2 ಲಕ್ಷ ರೂ. ಒಳಗಿನ ಆದಾಯ ವನ್ನು 25 ಲಕ್ಷ ರೂ.ಗೆ ವಿಸ್ತರಿಸಲಾಯಿತು. ಆಗ ವಿಪಕ್ಷ ಸ್ಥಾನದಲ್ಲಿದ್ದ ಇದೇ ಬಿಜೆಪಿ ಯವರು ಇಡೀ ಭೂ ಸುಧಾರಣಾ ಕಾಯ್ದೆಗೆ ಇದು ದೊಡ್ಡ ಕಳಂಕ ಎಂದು ಟೀಕಿಸಿ ದರು. ಆದರೆ ಈಗ ಇವರು ಮಾಡುತ್ತಿ ರುವುದೇನು? ಎಂದು ಪ್ರಶ್ನಿಸಿದರು. ಕಾಯ್ದೆ ತಿದ್ದುಪಡಿ ಮೂಲಕ ರೈತರು, ದಲಿತರು, ಹಿಂದುಳಿದ ವರ್ಗದವರನ್ನು ಸಂಪೂರ್ಣ ನಾಶ ಮಾಡಿ ಬಂಡವಾಳಶಾಹಿ ಕೈಗೆ ರಾಜ್ಯದ ಕೃಷಿಭೂಮಿ ಕೊಡಲು ಸರ್ಕಾರ ಹೊರಟಿದೆ. ಇದರ ವಿರುದ್ಧ ಪ್ರಬಲ ಚಳ ವಳಿ ರೂಪಿಸುವ ಅಗತ್ಯವಿದೆ. ಸಮಾನ ಮನಸ್ಕರು ಒಂದಾಗಿ ಹೋರಾಟ ಮಾಡ ಬೇಕಿದೆ ಎಂದರು.

ಯಡಿಯೂರಪ್ಪ ಅವರೊಬ್ಬರೇ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಪ್ರಸ್ತಾಪ ಮಾಡಿದ್ದಾರೆ ಎನಿಸುವುದಿಲ್ಲ. ಇದರಲ್ಲಿ ದೊಡ್ಡ ಕೈಗಳ ಕೈವಾಡ ಇರಬೇಕು ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ದೇಶ ಮತ್ತು ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರತರವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ರುವ ಜನತೆಗೆ ಪರಿಹರ ನೀಡುವಲ್ಲಿಯೂ ಎರಡೂ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಪಂ ಮಾಜಿ ಅಧ್ಯಕ್ಷ ಮರೀಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಮತ್ತಿತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »