ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಪಾರಂಪರಿಕ ಶೈಲಿಯಲ್ಲೇ ಪುನರ್ ನಿರ್ಮಾಣ
ಮೈಸೂರು

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಪಾರಂಪರಿಕ ಶೈಲಿಯಲ್ಲೇ ಪುನರ್ ನಿರ್ಮಾಣ

July 17, 2021

ಮೈಸೂರು, ಜು.16(ಆರ್‍ಕೆ)- ಶಿಥಿಲಾವಸ್ಥೆಯಲ್ಲಿ ರುವ ಪಾರಂಪರಿಕ ಕಟ್ಟಡಗಳಾದ ಮೈಸೂರಿನ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಗಳನ್ನು ನೆಲಸಮಗೊಳಿಸಿ, ಮೂಲ ಸ್ಥಿತಿಯಂತೆ ಪಾರಂಪರಿಕ ಶೈಲಿಯಲ್ಲೇ ಪುನರ್ ನಿರ್ಮಾಣ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಇಂದಿಲ್ಲಿ ಪ್ರಕಟಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್, ಶಾಸಕ ಎಲ್. ನಾಗೇಂದ್ರ, ಪ್ರಭಾರ ಮೇಯರ್ ಅನ್ವರ್ ಬೇಗ್‍ರೊಂದಿಗೆ ಇಂದು ಬೆಳಗ್ಗೆ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸಚಿವರು, ಅಲ್ಲಿನ ಸ್ಥಿತಿಗತಿ, ಈ ಹಿಂದೆ ವಿವಿಧ ಸಮಿತಿಗಳು ಅಧ್ಯಯನ ನಡೆಸಿ ನೀಡಿರುವ ವರದಿ, ನ್ಯಾಯಾಲಯಗಳಲ್ಲಿರುವ ವ್ಯಾಜ್ಯಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಭೈರತಿ ಬಸವರಾಜ್, ದೇವರಾಜ ಮಾರು ಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಕಟ್ಟಡಗಳು 100 ವರ್ಷ ತುಂಬಿದ್ದು, ಶಿಥಿಲಾವಸ್ಥೆಯಲ್ಲಿವೆ. ಈಗಾಗಲೇ ಕಟ್ಟಡಗಳ ಕೆಲ ಭಾಗ ಬಿದ್ದು ಪ್ರಾಣಾಪಾಯ ಸಂಭವಿಸಿರುವುದರಿಂದ ಅದೇ ಸ್ಥಿತಿಯಲ್ಲಿ ಕಟ್ಟಡ ಗಳನ್ನು ಉಳಿಸಿ ಸಂರಕ್ಷಿಸುವುದು ಸರಿಯಲ್ಲ ಎಂದರು.

ಕಟ್ಟಡಗಳನ್ನು ಕೆಡವಿ ಮೂಲ ಸ್ಥಿತಿಯಂತೆ ಯಥಾವತ್ತಾಗಿ ಪಾರಂಪರಿಕ ಶೈಲಿಯಲ್ಲೇ ಹೊಸದಾಗಿ ಎಲ್ಲಾ ಮೂಲ ಸೌಲಭ್ಯದೊಂದಿಗೆ ಪುನರ್ ನಿರ್ಮಾಣ ಮಾಡಲಾಗುವುದು. ದೇವ ರಾಜ ಮಾರುಕಟ್ಟೆಯಲ್ಲಿರುವ ಸುಮಾರು 700 ಅಂಗಡಿಗಳ ಬಾಡಿಗೆದಾರರನ್ನು
ತೆರವುಗೊಳಿಸಿ ಅವರಿಗೆ ವ್ಯಾಪಾರ ಮಾಡಲು ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟು, ಹೊಸ ಕಟ್ಟಡ ನಿರ್ಮಾಣವಾದ ನಂತರ ಅವರಿಗೇ ಆದ್ಯತೆ ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸಚಿವರು ನುಡಿದರು. ಕಟ್ಟಡ ನೆಲಸಮ ಸಂಬಂಧ ನ್ಯಾಯಾ ಲಯದಲ್ಲಿದ್ದ ಎರಡು ವ್ಯಾಜ್ಯಗಳ ಪೈಕಿ ಒಂದು ಮುಕ್ತಾಯವಾಗಿದೆ. ಮತ್ತೊಂದರ ಸ್ಟೇ ಆರ್ಡರ್ ಅನ್ನು ತೆರವುಗೊಳಿಸಿದ ನಂತರ ಇನ್ನೂ ಎರಡು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದೀರ್ಘ ವಾಗಿ ಚರ್ಚೆ ಮಾಡಿದ ನಂತರ ಎರಡು ತಿಂಗ ಳೊಳಗಾಗಿ ಕಟ್ಟಡಗಳನ್ನು ನೆಲಸಮಗೊಳಿಸಿ ಪುನರ್ ನಿರ್ಮಿಸುವ ಬಗ್ಗೆ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.

ದೇವರಾಜ ಮಾರುಕಟ್ಟೆಯನ್ನು 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹಾಗೂ 45 ಕೋಟಿ ರೂ. ವೆಚ್ಚದಲ್ಲಿ ಲ್ಯಾನ್ಸ್‍ಡೌನ್ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲೂ ಸಮಾಲೋಚನೆ ಮಾಡಿ 2 ತಿಂಗ ಳೊಳಗಾಗಿ ಅಂತಿಮ ನಿರ್ಣಯ ಕೈಗೊಂಡು ನಿಗದಿತ ಸಮಯದೊಳಗಾಗಿ ಈ ಯೋಜನೆ ಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಗುವುದು ಎಂದು ಸಚಿವರು ಇದೇ ಸಂದರ್ಭ ನುಡಿದರು. ಈ ಎರಡೂ ಪಾರಂಪರಿಕ ಕಟ್ಟಡಗಳ ಇತಿಹಾಸ, ಸ್ಥಿತಿ-ಗತಿ, ಪಾರಂಪರಿಕ ಸಮಿತಿ, ಟಾಸ್ಕ್‍ಫೋರ್ಸ್ ಕಮಿಟಿ ವರದಿಗಳು, ಪಾಲಿಕೆ ನಿರ್ಣಯ, ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಸಚಿವದ್ವಯರಿಗೆ ವಿವರಿಸಿದ ಶಾಸಕ ಎಲ್. ನಾಗೇಂದ್ರ ಅವರು, ಈಗಿರುವ ಸ್ಥಿತಿಯಲ್ಲಿ ಕಟ್ಟಡಗಳನ್ನು ಪುನರುಜ್ಜೀವನ ಮಾಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು.

ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಮುಡಾ ಆಯುಕ್ತ ಡಾ. ಡಿ.ಬಿ. ನಟೇಶ್, ಕಾರ್ಪೊರೇಟರ್‍ಗಳಾದ ಎಂ.ಡಿ. ನಾಗರಾಜ್, ಪ್ರಮೀಳಾ ಭರತ್, ಮುಡಾ ಸದಸ್ಯರಾದ ಕೆ. ಮಾದೇಶ, ಲಕ್ಷ್ಮಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮುಡಾ ಪಾಲಿಕೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಪರಿಶೀಲನೆ ವೇಳೆ ಉಪಸ್ಥಿತರಿದ್ದರು.

Translate »