ಮೈಸೂರು, ಜು.16(ಆರ್‍ಕೆಬಿ)- ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಮೈಸೂರು ಮಹಾನಗರಪಾಲಿಕೆ ಆವ ರಣದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಮಾಡಿ, ಎನ್‍ಟಿಎಂ ಶಾಲೆ ಕುರಿತಂತೆ ತಮ್ಮ ನಿಲುವು ಪ್ರಕಟಿಸುವಂತೆ ಆಗ್ರಹಿಸಿದರು.
ಬೆಳಿಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡು ವಾಗ ತಮಗೆ ಎನ್‍ಟಿಎಂ ಶಾಲೆ ಹೋರಾಟದ ಬಗ್ಗೆ ಮಾಹಿತಿ ಇಲ್ಲ. ಇದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆಂಬ ಬಗ್ಗೆ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಎನ್‍ಟಿಎಂ ಶಾಲೆ ಬಳಿಯಿಂದ ನಗರಪಾಲಿಕೆ ಆವರಣಕ್ಕೆ ಧಾವಿಸಿದರು. ಅಲ್ಲಿ ಸಚಿವರು ಸಭೆಯೊಂದರಲ್ಲಿ ಭಾಗವಹಿಸುತ್ತಾರೆಂದು ಮಾಹಿತಿ ಅರಿತು ಪಾಲಿಕೆ ಆವರಣದಲ್ಲಿ ಜಮಾಯಿಸಿದರು. ಸಭೆಯಲ್ಲಿ ಭಾಗವಹಿಸಲು ಪಾಲಿಕೆಗೆ ಆಗಮಿಸುತ್ತಿದ್ದ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಮುತ್ತಿಗೆ ಹಾಕಿದರು. ಎನ್‍ಟಿಎಂ ಶಾಲೆ ಮತ್ತು ಹೋರಾಟದ ಬಗ್ಗೆ ಮಾಹಿತಿಯೇ ಇಲ್ಲ ಎಂಬ ಹೇಳಿಕೆ ನೀಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಶಾಲೆಯ ಬಗ್ಗೆ ತಮ್ಮ ನಿಲುವು ಪ್ರಕಟಿಸುವಂತೆ ಆಗ್ರಹಿಸಿದರು.
ಈ ವೇಳೆ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಸಚಿವರು, ಎನ್‍ಟಿಎಂ ಶಾಲೆ ವಿಚಾರ ನನ್ನ ಗಮನಕ್ಕೆ ಇದುವರೆಗೆ ಬಂದಿರಲಿಲ್ಲ. ನನ್ನ ಗಮನಕ್ಕೆ ಬಂದ ನಂತರ ಈ ಸಂಬಂಧ ನಿಮ್ಮೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಸಚಿವರೊಂದಿಗೆ ಶಾಸಕ ಎಲ್.ನಾಗೇಂದ್ರ ಇದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾ ಮುಖಂಡರಾದ ಮಾಜಿ ಮೇಯರ್ ಪುರು ಷೋತ್ತಮ್, ಕರ್ನಾಟಕ ಕಾವಲು ಪಡೆ ರಾಜ್ಯಾ ಧ್ಯಕ್ಷ ಮೋಹನ್‍ಕುಮಾರ್‍ಗೌಡ, ರೈತಸಂಘದ ಹೊಸಕೋಟೆ ಬಸವರಾಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಮುಖಂಡರಾದ ಡೈರಿ ವೆಂಕಟೇಶ್, ಬೋಗಾದಿ ಸಿದ್ದೇಗೌಡ, ಅರವಿಂದಶರ್ಮ, ಧನಂಜಯ, ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಉಪಸ್ಥಿತರಿದ್ದರು.