ಪುರಭವನದ ಮಲ್ಟಿಲೆವೆಲ್ ಪಾರ್ಕಿಂಗ್ ಲಾಟ್‍ನಲ್ಲಿ ಶೀಘ್ರ ವಾಹನ ನಿಲುಗಡೆ
ಮೈಸೂರು

ಪುರಭವನದ ಮಲ್ಟಿಲೆವೆಲ್ ಪಾರ್ಕಿಂಗ್ ಲಾಟ್‍ನಲ್ಲಿ ಶೀಘ್ರ ವಾಹನ ನಿಲುಗಡೆ

July 17, 2021

ಮೈಸೂರು, ಜು. 16(ಆರ್‍ಕೆ)- ಪುರಭವನದ ಆವರಣದಲ್ಲಿ ನಿರ್ಮಿ ಸಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಲಾಟ್‍ನಲ್ಲಿ ವಾಹನಗಳ ನಿಲುಗಡೆಗೆ ಶೀಘ್ರ ವ್ಯವಸ್ಥೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಲ್. ನಾಗೇಂದ್ರರೊಂದಿಗೆ ಇಂದು ಪಾರ್ಕಿಂಗ್ ಲಾಟ್‍ಗೆ ತೆರಳಿ ಪರಿಶೀಲಿಸಿದ ಸಚಿವರು, ಬೇಸ್‍ಮೆಂಟ್‍ನಲ್ಲಿ ಶೇಖರಣೆಯಾಗಿರುವ ನೀರನ್ನು ತೆರವುಗೊಳಿಸಿ, ಬಾಕಿ ಇರುವ ಕೆಲಸ ಪೂರ್ಣಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಭೈರತಿ ಬಸವರಾಜ್, 600 ವಾಹನಗಳ ನಿಲುಗಡೆ ಮಾಡುವ ಸಾಮಥ್ರ್ಯವುಳ್ಳ ಪಾರ್ಕಿಂಗ್ ಲಾಟ್ ಅನ್ನು ಪುರಭವನದ ಆವರಣದಲ್ಲಿ 17.66 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಗುತ್ತಿಗೆದಾರ ನ್ಯಾಯಾ ಲಯದಲ್ಲಿ ದಾವೆ ಹೂಡಿದ್ದರಿಂದಾಗಿ ಕಾಮಗಾರಿ ಬಾಕಿ ಉಳಿದಿದೆ ಎಂದರು.

ಇದೀಗ ಪಾಲಿಕೆ ಅಧಿಕಾರಿಗಳು ಬಾಕಿ ಉಳಿದಿರುವ ಕಾಮಗಾರಿಗೆ ಮರು ಟೆಂಡರ್ ಕರೆದಿದ್ದು, ಪ್ರಕ್ರಿಯೆ ಪೂರ್ಣ ಗೊಳಿಸಿ ಶೀಘ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದ್ದೇನೆ. 15 ದಿನದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿ ಆರಂಭಿ ಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದ ಸಚಿವರು, ಕಾಲ ಮಿತಿಯೊಳಗಾಗಿ ಯೋಜನೆ ಪೂರ್ಣಗೊಳಿಸಿ ಸಾರ್ವಜ ನಿಕರ ಉಪಯೋಗಕ್ಕೆ ಮಲ್ಟಿಲೆವೆಲ್ ಪಾರ್ಕಿಂಗ್ ಲಾಟ್ ಕಲ್ಪಿಸುತ್ತೇವೆ ಎಂದರು.

2011ರ ಏಪ್ರಿಲ್ 29ರಂದು ಮೆ|| ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆಗೆ ಟೆಂಡರ್ ಮೂಲಕ ಕಾಮಗಾರಿಯನ್ನು ನೀಡಲಾಗಿತ್ತು. 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತಾದರೂ, ಆ ಸಂಸ್ಥೆಯು ಪಾಲಿಕೆ ವಿರುದ್ಧವೇ ದಾವೆ ಹೂಡಿ 2017ರಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿತ್ತು. ಅದರಿಂದಾಗಿ ಪಾರ್ಕಿಂಗ್ ಲಾಟ್ ಕಾಮಗಾರಿ ಪೂರ್ಣಗೊಂಡಿರಲಿಲ್ಲ.

Translate »