ಮಡಿಕೇರಿ ಕೋಟೆ ಸಂರಕ್ಷಣಾ ಕಾಮಗಾರಿ ಆರಂಭ: ಏ.18ರೊಳಗೆ ಮುಗಿಸಲು ಗಡುವು
ಕೊಡಗು

ಮಡಿಕೇರಿ ಕೋಟೆ ಸಂರಕ್ಷಣಾ ಕಾಮಗಾರಿ ಆರಂಭ: ಏ.18ರೊಳಗೆ ಮುಗಿಸಲು ಗಡುವು

March 10, 2020

ಮಡಿಕೇರಿ, ಮಾ.9(ಪ್ರಸಾದ್)- ಅರಸರ ಆಳ್ವಿಕೆಯ ಕುರುಹಾಗಿ ಇಂದಿನ ಮತ್ತು ಮುಂದಿನ ಪೀಳಿಗೆ ಪಾಲಿಗೆ ಸ್ಮಾರಕವಾಗಿ ಉಳಿದಿರುವ ಮಡಿಕೇರಿ ಕೋಟೆಯನ್ನು ಸಂರಕ್ಷಿಸುವ ಕಾರ್ಯವನ್ನು ರಾಜ್ಯ ಪುರಾತತ್ವ ಇಲಾಖೆ ಆರಂಭಿಸಿದೆ. ಈ ಹಿಂದೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ತುತ್ತಾಗಿ ಶಿಥಿಲಾವಸ್ಥೆ ತಲುಪಿದ್ದ ಕೋಟೆ ಸ್ಮಾರಕವನ್ನು ಪುರಾತತ್ವ ಇಲಾಖೆ ಮೂಲಕ ಸಂರಕ್ಷಿಸುವ ಕಾರ್ಯ ಆರಂಭವಾಗಿದ್ದು, ಹೈಕೋರ್ಟ್ ನಿರ್ದೇಶನದಂತೆ ಆರಂಭವಾಗಿರುವ ಪುನಶ್ಚೇತನ ಕಾಮಗಾರಿ ಏ.18ಕ್ಕೆ ಪೂರ್ಣಗೊಳಿಸಬೇಕಿದೆ.

ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉಸ್ತುವಾರಿ ಯಲ್ಲಿ ಕಾಮಗಾರಿ ಆರಂಭವಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಒಟ್ಟು 8.2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಅನುದಾನ ಸಾಲದಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ 2 ಕೋಟಿ ಅನುದಾನಕ್ಕೆ ರಾಜ್ಯ ಪುರಾತತ್ವ ಇಲಾಖೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಇದೀಗ ಕೋಟೆಯ ಹೆಂಚುಗಳನ್ನು ಸಂಪೂರ್ಣ ವಾಗಿ ತೆಗೆದು ಒಳಭಾಗದಲ್ಲಿ ಅಳವಡಿಸಿರುವ ತಗಡಿನ ಶೀಟ್‍ಗಳು ಮತ್ತು ಮರದ ಪಟ್ಟಿಗಳನ್ನು ದುರಸ್ತಿ ಮಾಡುವ ಕೆಲಸ ನಡೆಯುತ್ತಿದೆ. ಈ ಕಾಮಗಾರಿ ನಡೆಸಲು ಪುರಾತತ್ವ ಇಲಾಖೆ ಈ ಹಿಂದೆಯೇ ಟೆಂಡರ್ ಕರೆದಿದ್ದು, ಮೊದಲು ಟೆಂಡರ್ ಪಡೆದ ವರು ಇಲಾಖೆಯ ಯೋಜನಾ ವರದಿಗೆ (ಡಿಪಿಆರ್) ಒಪ್ಪದೇ ಹಿಂದೆ ಸರಿದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಟೆಂಡರ್ ಕರೆಯಲಾಗಿತ್ತು. ಮಂಗಳೂರು ಮೂಲದ ಗುತ್ತಿಗೆದಾರರು ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಮಡಿಕೇರಿಯ ಸ್ಥಳೀಯ ಕಾರ್ಮಿಕರು ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Launching Madikeri Fort Conservation Works: Deadline to finish by April 18-1

ಕಳೆದ ಹಲವು ವರ್ಷಗಳಿಂದ ಕೋಟೆಯನ್ನು ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ಅದರ ಮೇಲ್ಚಾ ವಣಿಯಲ್ಲಿ ಅಳವಡಿಸಿದ್ದ ಸಾವಿರಾರು ಹೆಂಚು ಗಳು ಗಾಳಿ, ಮಳೆಗೆ ಈಗಾಗಲೇ ಹಾರಿ, ಕೆಳ ಬಿದ್ದು ಒಡೆದು ಹೋಗಿವೆ. ಈಗ ಉಳಿದುಕೊಂಡಿರುವ ಪುರಾತನ ಹೆಂಚನ್ನು ಮತ್ತೆ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಳೆಯ ಹೆಂಚುಗಳ ಬದಲಿಗೆ ಈಗಿನ ನೂತನ ಮಾದರಿಯ ಮಂಗಳೂರು ಹೆಂಚು ಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ.

ಈಗಾಗಲೇ ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ವರುಣನ ಸಿಂಚನವಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಮಳೆಗಾಲ ಆರಂಭ ವಾಗಲಿದೆ. ಕೋಟೆಯಲ್ಲಿ ಇದೀಗ ನಡೆಸಲಾಗು ತ್ತಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಆರೋಪಗಳು ಕೇಳಿ ಬರುತ್ತಿದ್ದು, ಏಪ್ರಿಲ್ 18ಕ್ಕೆ ಕಾಮ ಗಾರಿ ಪೂರ್ಣಗೊಳ್ಳುವುದು ಅನುಮಾನ ಎನ್ನಲಾಗಿದೆ. ಮಾತ್ರವಲ್ಲದೇ ರಾಜ್ಯ ಪುರಾತತ್ವ ಇಲಾಖೆ ಈಗಾ ಗಲೇ ರಾಜ್ಯ ಹೈಕೋರ್ಟ್‍ಗೆ ಏಪ್ರಿಲ್ 18ರ ಒಳಗೆ ತಾತ್ಕಾಲಿಕ ದುರಸ್ತಿ ಕಾಮಗಾರಿ ಪೂರ್ಣಗೊಳಿಸು ವುದಾಗಿ ಅಫಿಡವಿಟ್ ಕೂಡ ಸಲ್ಲಿಸಿದೆ.

ಮಾತ್ರವಲ್ಲದೇ, ಕೋಟೆ ಆವರಣದೊಳಗೆ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ನ್ಯಾಯಾಲಯ ಸಂಕೀರ್ಣ ಕಟ್ಟಡಗಳು ಜಿಲ್ಲಾ ಪಂಚಾಯಿತಿ ಹಳೇ ಇಂಜಿನಿಯರಿಂಗ್ ವಿಭಾಗದ ಕಟ್ಟಡಗಳು, ಓವರ್‍ಹೆಡ್ ಟ್ಯಾಂಕ್ ಕೂಡ ಇದ್ದು, ಆ.31ಕ್ಕೆ ಸಂಪೂರ್ಣ ತೆರವು ಮಾಡಬೇಕಿದೆ ಎಂದು ತಿಳಿದು ಬಂದಿದೆ. ಇನ್ನು ಬ್ರಿಟಿಷರ ಕಾಲದಲ್ಲಿ ಚರ್ಚ್ ಆಗಿದ್ದ, ಪ್ರಸ್ತುತ ಪ್ರಾಚ್ಯ ವಸ್ತು ಸಂಗ್ರಹಾಲಯವಾಗಿ ರೂಪು ಗೊಂಡಿರುವ ಕಟ್ಟಡ ಭವಿಷ್ಯದಲ್ಲಿ ತೆರವಾಗಲಿದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ದೊರಕಿಲ್ಲ.

Translate »